

ಚಾಮರಾಜನಗರ: ಜನಸಾಮಾನ್ಯರ ಚರಿತ್ರೆ ಜನಪದಗಳಲ್ಲಿ ದಾಖಲಾಗಿದ್ದು, ಮಹಿಳಾ ಪ್ರಾಧ್ಯಾನ್ಯತೆಗೆ ಜನಪದ ಮಹಾಕಾವ್ಯಗಳಲ್ಲಿ ಮಹಿಳಾ ಪ್ರಾಧಾನ್ಯತೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಮತ್ತು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್, ರಂಗ ವಾಹಿನಿ ಸಂಸ್ಥೆ, ಜೆಎಸ್‌ಎಸ್ ಮಹಿಳಾ ಕಾಲೇಜು ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲೆಯ ಜಾನಪದ ಸಂಸ್ಕೃತಿ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ಆಧುನಿಕ ಕಾಲಘಟ್ಟದಲ್ಲಿ ಉತ್ತಮ ಮೌಲ್ಯ, ಮನುಷ್ಯತ್ವ , ಒಳ್ಳೆಯ ತನವನ್ನು ಕಳೆದುಕೊಂಡು ವಿಸ್ಮೃತಿಯೆಡೆಗೆ ಜಾರುತ್ತಿದ್ದೇವೆ. ಬದಲಾವಣೆಯಾದ ಜಗತ್ತಿನಲ್ಲಿ ನಮ್ಮ ಪರಂಪರೆಯನ್ನು, ಒಳ್ಳೆಯ ಮೌಲ್ಯಗಳನ್ನು ಉಳಿಸಿಕೊಳ್ಳಬೇಕಾಗಿದೆ. ನಮ್ಮ ಚರಿತ್ರೆ ಆಳುವ ವರ್ಗವನ್ನು ಓಲೈಸುವ ಚರಿತ್ರೆಯಾಗಿಯೇ ಉಳಿದುಕೊಂಡಿದೆ. ಜನಸಾಮಾನ್ಯರ ಚರಿತ್ರೆಯನ್ನು ನಾವು ಜನಪದದಲ್ಲಿ ಮಾತ್ರ ಕಾಣಬಹುದಾಗಿದೆ. ಬುಡಕಟ್ಟು ಸಮುದಾಯದ ಶಂಕಮ್ಮ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ನಿಲ್ಲುವುದನ್ನು ಮಲೆಮಹದೇಶ್ವರ ಜಾನಪದ ಕಾವ್ಯ ಸಾರುತ್ತದೆ. ಸ್ತ್ರೀ ಸ್ವಾಭಿಮಾನವನ್ನು ಜಾನಪದ ಕಥನಗಳಲ್ಲಿ ಮಾತ್ರ ನಾವು ಕಾಣಬಹುದಾಗಿದೆ ಎಂದರು.
ಚಾ.ನಗರ ಜಾನಪದಕ್ಕೆ ತವರೂರಾಗಿದ್ದು, ಬುಡಕಟ್ಟು ಮತ್ತು ಶ್ರಮಜೀವಿಗಳು ಜಿಲ್ಲೆಯಾಗಿದೆ. ಮಲೆ ಮಹದೇಶ್ವರ ಮತ್ತು ಮಂಟೇಸ್ವಾಮಿ ಪರಂಪರೆ ಅನೇಕ ರೀತಿಯಲ್ಲಿ ಇಲ್ಲಿನ ಜನರನ್ನು ಪ್ರಭಾವಿಸಿದೆ. ಬುಡಕಟ್ಟು ಸಂಸ್ಕೃತಿ, ಕೃಷಿ ಸಂಸ್ಕೃತಿ, ಜಾನಪದ ಮಹಾಕಾವ್ಯಗಳ ಚರ್ಚೆಗಳು ನಡೆಯುತ್ತಿರುವುದು ಉತ್ತಮ ನಡೆಯಾಗಿದೆ. ಕರ್ನಾಟಕ ಜಾನಪದ ಪರಿಷತ್ ಎಚ್.ಎಲ್.ನಾಗೇಗೌಡ ಕನಸಿನ ಕೂಸಾಗಿದ್ದು, ಸಮೃದ್ಧವಾದ ಜಾನಪದ ಸಾಹಿತ್ಯವನ್ನು ಅವರು ಸಂಗ್ರಹಿಸಿದ್ದಾರೆ. ಜಾನಪದ ಸಾಂಸ್ಕೃತಿಕ ಕೇಂದ್ರವಾಗಿರುವ ಜನಪದ ಲೋಕಕ್ಕೆ ಯುನೆಸ್ಕೋ ಅಂತಾರಾಷ್ಟ್ರೀಯ ಮಾನ್ಯತೆ ದೊರಕಿದೆ ಎಂದು ಹೇಳಿದರು.
ಆರೋಗ್ಯಕ್ಕೆ ಪೂರಕವಾದ ಬೆಳೆಗಳನ್ನು ಹೇಗೆ ಬೆಳೆಯಬೇಕು ಎಂಬ ಜ್ಞಾನ ಹಳ್ಳಿಗಳಲ್ಲಿ ದೊರೆಯುತ್ತದೆ. ಆ ಕುರಿತು ಹೆಚ್ಚಿನ ಅಧ್ಯಯನಗಳು ಆಗಬೇಕು. ನಮ್ಮ ಪರಂಪರೆಯ ಕೃಷಿ ಜ್ಞಾನದ ಬಗ್ಗೆ ಆಲೋಚನೆ ಮಾಡಬೇಕು. ಮನುಷ್ಯ ಪ್ರಸ್ತುತ ರಾಕ್ಷಸನಾಗಿ ಪರಿವರ್ತನೆ ಆಗುತ್ತಿದ್ದಾನೆ, ಇಂತಹ ಸಂದರ್ಭದಲ್ಲಿ ಮನುಷ್ಯನ ವೈಭವೀಕರಣವನ್ನು ಬಿಟ್ಟು ವಿಶ್ಲೇಷಣೆ ದೃಷ್ಟಿಯನ್ನು ಮೈಗೂಡಿಸಿಕೊಳ್ಳಬೇಕು. ಉತ್ತಮ ಮೌಲ್ಯಗಳನ್ನು ಬೋಧಿಸುವ ಜನಪದ ಕಥನಗಳನ್ನು ಎಲ್ಲರೂ ಒಳಗೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಎಚ್.ಎಲ್.ನಾಗೇಗೌಡ ಅವರು ಜಾನಪದ ಸಂಸ್ಕೃತಿಯನ್ನು ಜನಪದ ಲೋಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರ ನಂತರ ಪ್ರೊ.ಹಿ.ಚಿ.ಬೋರಲಿಂಗಯ್ಯ ಅವರು ನಮ್ಮ ಜಾನಪದ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಜಾನಪದವನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸವನ್ನು ಕರ್ನಾಟಕ ಜಾನಪದ ಪರಿಷತ್ ಮಾಡುತ್ತಿದೆ. ಜಿಲ್ಲೆಯಲ್ಲಿ ಜಾನಪದ ವಸ್ತು ಸಂಗ್ರಹಾಲಯ, ಆಕಾಶವಾಣಿ ಹಾಗೂ ಮಲೆ ಮಹದೇಶ್ವರ ಅಧ್ಯಯನ ಪೀಠ ರಚನೆಯಾಗಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಿ.ಮಹೇಶ್ ಹರವೆ ಮತ್ತು ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಸೋಲಿಗ ಮಹಿಳೆ ಡಾ.ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು. ಜೆಎಸ್‌ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಎನ್.ಮಹಾದೇವಸ್ವಾಮಿ, ಗುರುಪ್ರಸಾದ್, ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕ ಆರ್.ಉಮೇಶ್, ಸಿ.ರೂಪಶ್ರೀ ಹಾಜರಿದ್ದರು.