

ಹಾಸನ: ಸುಮಾರು 146ಕ್ಕೂ ಹೆಚ್ಚು ಜಾನಪದ ಕಲೆಗಳು ಕರ್ನಾಟಕದಲ್ಲಿದ್ದರೂ ವಿಶ್ವ ಪಾರಂಪರಿಕ ಕಲೆಗಳ ಮಾನ್ಯತಾ ಪಟ್ಟಿಗೆ ಈವರೆಗೆ ಒಂದು ಕಲೆಯೂ ಸೇರ್ಪಡೆ ಆಗದಿರುವುದು ಬೇಸರದ ಸಂಗತಿ ಎಂದು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಭತ್ತ ಕುಟ್ಟುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಂಸಾಳೆ, ವೀರಗಾಸೆ, ಚಿಟ್ಟಿಮೇಳ, ಡೊಳ್ಳು ಕುಣಿತ, ಪಟ್ಟದ ಕುಣಿತ, ಯಕ್ಷಗಾನ, ಸೋಮನ ಕುಣಿತ, ಮಾರಿ ಕುಣಿತ ಹೀಗೆ ವಿಭಿನ್ನ ಕಲೆಗಳು ನಮ್ಮ ನಾಡನ್ನು ಆವರಿಸಿದ್ದರೂ ವಿಶ್ವ ಮಾನ್ಯತೆಯಲ್ಲಿ ನೆಲೆ ಕಾಣದಿರುವುದು ಅತ್ಯಂತ ಬೇಸರದ ಸಂಗತಿ ಎಂದರು.
ವಿಲಿಯಂ ಜೆ.ಥಾಮ್ಸನ್ ಎಂಬ ಜರ್ಮನ್ ವ್ಯಕ್ತಿ ಮೊದಲ ಬಾರಿಗೆ ಜಾನಪದದ ಬಗ್ಗೆ ಒಲವು ತೋರಿಸಿ ಫೋಕ್ ಮತ್ತು ಫ್ಲೋರ್ ಎಂಬ ಪದಗಳನ್ನು ಹುಟ್ಟು ಹಾಕಿದ್ದರು. ಜನಪದ ಕುರಿತು ಅವರು 1846ರ ಆಗಷ್ಟ್ 26ರಂದು ಮೊದಲ ಅಧ್ಯಯನ ಲೇಖನ ಪ್ರಕಟಿಸಿದ ದಿನವನ್ನೇ ವಿಶ್ವ ಜಾನಪದ ದಿನವನ್ನಾಗಿ ಆಚರಿಸಲಾಗುತ್ತಿದೆ. ಕರ್ನಾಟಕದಲ್ಲಿ 1971ರಲ್ಲಿ ನಾಗೇಗೌಡ ಎಂಬುವರು ಕರ್ನಾಟಕ ಜಾನಪದ ಪರಿಷತ್ತು ಹುಟ್ಟು ಹಾಕಿ ಸಾವಿರಾರು ಧ್ವನಿ ಸುರುಳಿ, ಸಾಕ್ಷ್ಯ ಚಿತ್ರಗಳನ್ನು ಹೊರ ತಂದರು. ಆ ನಂತರ ಜಾನಪದ ಅಕಾಡಮಿ, ಜಾನಪದ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದವು ಎಂದು ತಿಳಿಸಿದರು.
ಜಗತ್ತಿನ ಎಲ್ಲ ಕಲೆಗಳ ತಾಯಿಬೇರು ಎನಿಸಿದ ಜಾನಪದ ಮನುಕುಲ ಇರುವವರೆಗೂ ಜೀವಂತವಾಗಿರುತ್ತದೆ. ಜಾನಪದ ಕಲಾವಿದರು ಬದುಕಿನಲ್ಲಿ ರೀತಿ-ನೀತಿಗಳನ್ನು ಅಳವಡಿಸಿಕೊಂಡಿದ್ದು ಅಕ್ಷರಸ್ಥರಲ್ಲದಿದ್ದರೂ ಮಹಾನ್ ಜ್ಞಾನಿಗಳಾಗಿದ್ದಾರೆ. ವಿಶ್ವ ವಿದ್ಯಾನಿಲಯಗಳಲ್ಲಿ ಹಲವು ಪದವಿಗಳನ್ನು ಪಡೆದವರಿಗೆ ಇರುವುದಕ್ಕಿಂತ ಹೆಚ್ಚಿನ ಜ್ಞಾನ ನಮ್ಮ ಜನಪದರಲ್ಲಿ ಕಾಣಬಹುದು ಎಂಬ ವಿಚಾರ ಈಗಾಗಲೇ ಸಾಬೀತಾಗಿದೆ. ಬದುಕಿನ ರೀತಿ, ಮೌಲ್ಯ, ಶಿಕ್ಷಣ ಎಲ್ಲವನ್ನೂ ಜನಪದ ಒಳಗೊಂಡಿರುವ ಕಾರಣದಿಂದಲೇ ವಿಶ್ವದೊಳಗಿನ ವಿಶ್ವ ಎಂದು ಕರೆಯಲಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯ ನಿರ್ದೇಶಕ ಸಿ.ಕೆ.ಹರೀಶ್ ಮಾತನಾಡಿ, ಮನೋರೋಗಿಗಳಿಗೆ ಸಂಗೀತವೇ ಮದ್ದು ಎಂಬ ಸತ್ಯ ವೈಜ್ಞಾನಿಕವಾಗಿ ಸಾಬೀತಾಗಿದೆ. ಅಂತಹ ಹಲವು ಕಲಾ ಪ್ರಕಾರಗಳನ್ನು ನಾವು ಮರೆತಿರುವ ಕಾರಣದಿಂದಲೇ ಮನೋ ರೋಗಿಗಳಾಗುತ್ತಿದ್ದೇವೆ. ಎಲ್ಲ ಕಲೆಗಳ ತಾಯಿಯಾದ ಜನಪದವನ್ನು ಆಸ್ವಾದಿಸುವ ಜತೆಗೆ ಅವುಗಳನ್ನು ಕಲಿತು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಪ್ರಯತ್ನಗಳಾಗಬೇಕು ಎಂದರು.
ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಪ್ರಾಂಶುಪಾಲ ಪ್ರಸನ್ನ ಎನ್.ರಾವ್ ಅವರು ಮಾತನಾಡಿ, ಜನಪದ ಕಲೆಗಳು ತನ್ನದೇ ಆದ ಪಾವಿತ್ರೃತೆ ತೆ, ವೈಶಿಷ್ಟೃತೆ ಹೊಂದಿದೆ. ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ. ನಮ್ಮ ಸಂಸ್ಥೆಯಿಂದ ಇದಕ್ಕೆ ಸಂಬಂಧಿಸಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಜತೆಗೆ ದಾಖಲಾತಿ ಸಂದರ್ಭ ಆಯುರ್ವೇದ ಪರಂಪರೆಯಿಂದ ಬಂದವರು ಹಾಗು ಕಲಾ ಪ್ರತಿಭೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಜಾನಪದ ಕಲೆಗಳ ರಂಗು ಮೇಳೈಸಿದ್ದವು. ಕಾಲೇಜಿನ ವಿದ್ಯಾರ್ಥಿಗಳು ಕಂಸಾಳೆ ನೃತ್ಯ, ಜನಪದ ಗಾಯನ, ನೃತ್ಯಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಜತೆಗೆ ಹೆಸರಾಂತ ಕಲಾವಿದರಾದ ಗ್ಯಾರಂಟಿ ರಾಮಣ್ಣ, ಕುಮಾರ್ ಕಟ್ಟೆಬೆಳಗುಲಿ, ಚಿಟ್ಟಿಮೇಳ ಕುಮಾರಯ್ಯ, ಮೇಟಿಕೆರೆ ಹಿರಿಯಣ್ಣ, ಡಾ.ಐ.ಎಂ.ಮೋಹನ್, ಬೋರೇಗೌಡ, ಯೋಗೇಂದ್ರ ದುದ್ದ, ಶಿವನಂಜೇಗೌಡ ಹಾಗೂ ತಂಡದವರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
ಕೃಷಿ ಕಾಲೇಜು ವಿದ್ಯಾರ್ಥಿಗಳ ಚಂಡೆ, ವೀರಭದ್ರ ಕುಣಿತ, ಆಯುರ್ವೇದ ಕಾಲೇಜು ವಿದ್ಯಾರ್ಥಿನಿಯರ ಕಂಗೀಲಾ ನೃತ್ಯ ಮೆಚ್ಚುಗೆ ಗಳಿಸಿದವು. ಸಮಾರಂಭದ ಕೊನೆಯಲ್ಲಿ ಕುಮಾರಯ್ಯ ಮತ್ತು ತಂಡದವರ ಚಿಟ್ಟಿಮೇಳಕ್ಕೆ ಕಾಲೇಜು ಸಿಬ್ಬಂದಿ, ವೈದ್ಯರು, ವಿದ್ಯಾರ್ಥಿಗಳೆಲ್ಲರೂ ಹೆಜ್ಜೆ ಹಾಕಿ ಜಾನಪದ ದಿನಾಚರಣೆಯ ಕಳೆ ಹೆಚ್ಚಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಕಾರ್ಯದರ್ಶಿ ಬಿ.ಟಿ.ಮಾನವ, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ.ಗಾಯತ್ರಿ ಭಟ್ ಸೇರಿದಂತೆ ಇತರರು ಭಾಗವಹಿಸಿದ್ದರು.