

ತುಮಕೂರು: ನೆಲಮೂಲದ ಕಲಾವಿದರು ತಾವು ಬಡವರಾಗಿದ್ದರೂ, ತಾವು ನಂಬಿರುವ ಕಲೆಯನ್ನು ಶ್ರೀಮಂತಗೊಳಿಸಿದ್ದಾರೆ. ಜನಪದ ಕಲೆ ಪ್ರದರ್ಶಿಸುವ ವ್ಯಕ್ತಿಗಳ ಜೀವನದಲ್ಲಿ ಬಡತನವಿದ್ದರೂ, ಕಲೆಗಳಲ್ಲಿ ಶ್ರೀಮಂತಿಕೆ ಇದೆ ಎಂದು ಹಂಪಿ ವಿವಿ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ತಿಳಿಸಿದರು.
ನಗರದ ಶ್ರೀ ಸಿದ್ಧಗಂಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸ್ವರಸಿಂಚನ ಸುಗಮ ಸಂಗೀತ, ಜಾನಪದ ಕಲಾ ಸಂದ ವತಿಯಿಂದ, ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಜನಪದ ಅಕಾಡೆಮಿ ಪ್ರಶಸ್ತಿ ಪಡೆದ ಜೋಗಿ ಸಿದ್ದಪ್ಪ ಅವರೊಂದಿಗೆ ಮಾತು, ಮಂಥನ-ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಹುತೇಕ ಜನಪದ ಕಲೆಗಳು ಬಡವರಲ್ಲಿಯೇ ಬೇರೂರಿರುವುದನ್ನು ಕಾಣಬಹುದಾಗಿದೆ.ಕೆಲವು ಜನಪದ ಕಲೆಗಳು ಅಧುನಿಕತೆಗೆ ಸಿಲುಕಿ ವೇಷ, ಭೂಷಣಗಳಲ್ಲಿ ಬದಲಾವಣೆ ಕಂಡುಕೊಂಡಿದ್ದರೂ, ಅರ್ಜುನ ಜೋಗಿಯಂತಹ ಕಲೆಗಳು ಅಧುನಿಕತೆ ನಡುವೆಯೂ ತನ್ನ ತನವನ್ನು ಉಳಿಸಿಕೊಂಡಿರುವುದು ವಿಶೇಷ ಎಂದರು.
ಖಾಸಗಿ ವಾಹನಗಳ ಅಬ್ಬರಕ್ಕೆ ಮಾರು ಹೋಗಿ ಜನಪದ ಕಲೆಗಳು ಜನಪ್ರಿಯತೆ ಕವಚ ತೊಡುತ್ತಿರುವುದು ವಿಪರ್ಯಾಸದ ಸಂಗತಿ. ಆದರೆ, ಜನಪದ ಕಲೆ ಕಲಾವಿದರಿಗೆ ಕಲೆಯ ಜತೆಗೆ ಬದುಕು ಹೌದು ಎಂಬುದನ್ನು ಸರ್ಕಾರಗಳು ಅರ್ಥಮಾಡಿಕೊಳ್ಳಬೇಕು. ತಮ್ಮ ಕುಟುಂಬ ನಂಬಿರುವ ಕಲೆಗಳಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅರಿತು ಯುವಕರು ಇದರಿಂದ ವಿಮುಖರಾಗುತ್ತಿದ್ದಾರೆ. ಈ ಕಾರಣದಿಂದ ಹಲವಾರು ಜನಪದೀಯ ಕಲೆಗಳು ಅಳಿವಿನ ಅಂಚಿಗೆ ಬಂದು ನಿಂತಿವೆ. ಹಾಗಾಗಿ, ಇಂತಹ ಕಲೆಗಳನ್ನು ಪ್ರದರ್ಶಿಸುವ ಕಲಾವಿದರಿಗೆ ಅರ್ಥಿಕ ಶಕ್ತಿ ತುಂಬುವ ಕೆಲಸವನ್ನು ಜನ ಸಾಮಾನ್ಯರು ಮತ್ತು ಸರ್ಕಾರ ಮಾಡಬೇಕಿದೆ ಎಂದರು.
ಜನಪದ ಅಕಾಡೆಮಿ ಸದಸ್ಯ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಎಲೆಮೆರೆಯ ಕಾಯಿಯಂತೆ, ನಂಬಿರುವ ಕಲೆಗಳನ್ನು ಪ್ರದರ್ಶಿಸುತ್ತಾ ಬಂದಿರುವ ಅನೇಕರನ್ನು ಹೆಕ್ಕಿ ತೆಗೆಯುವ ಕೆಲಸವನ್ನು ಕರ್ನಾಟಕ ಜನಪದ ಅಕಾಡೆಮಿ ಮಾಡಿದೆ ಎಂದರು.
ಅಕಾಡೆಮಿಯ ವೃತ್ತಿ ಗಾಯನ ವಿಭಾಗದಲ್ಲಿ ಬರುವ ಮಂಟೆಸ್ವಾಮಿಯ ನೀಲಗಾರರು, ಚೌಡಿಕೆಯವರು, ಗೋರವರು, ಕಾರ್ಣಿಕರಿಗೆ ಧಾರ್ಮಿಕ ಬೆಂಬಲವಿದೆ.ಆದರೆ ಅರ್ಜುನ ಜೋಗಿ ಕಲಾವಿದರಿಗೆ ಯಾವುದು ಇಲ್ಲ.ಅಲೆಮಾರಿ ಪರಂಪರೆಯ ಅರ್ಜುನಜೋಗಿಯ ಪರಂಪರೆಯವರಾದ ಇವರು,ಕಾಲಭೈರವನ ಆರಾಧಕರು,ತಮ್ಮ ಗಂಡು ಮಕ್ಕಳಿಗೆ ಜೋಗಿಯ ದೀಕ್ಷೆ ನೀಡುವುದು ವಾಡಿಕೆ.ಎಲ್ಲೋ ಜೋಗಪ್ಪ ನಿನ್ನ ಅರಮನೆ ಎಂದರೂ,ಅವರಿಗೆ ಇರಲು ಒಂದು ಗುಡಿಸಲು ಇಲ್ಲ. ಅಳಿವಿನಂಚಿನಲ್ಲಿರುವ ಈ ಕಲೆಗಳನ್ನು ಉಳಿಸುವ ಕೆಲಸದ ಜತೆಗೆ, ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಎಂದರು.
ಜಾನಪದ ಕಲಾ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಕೆರೆ, ಕಲಾವಿದ ಜೋಗಿ ಸಿದ್ದಪ್ಪ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್, ಲೇಖಕಿ ಬಿ.ಸಿ.ಶೈಲಾನಾಗರಾಜು, ಎಂ.ಎಸ್.ರವಿಕುಮಾರ್ ಸಂವಾದ ನಡೆಸಿಕೊಟ್ಟರು. ಪ್ರಾಚಾರ್ಯ ಡಾ.ಜಗದೀಶಕುಮಾರ್ ಇದ್ದರು.
ದೊಡ್ಡಾಟ, ಸಣ್ಣಾಟಕ್ಕೆ ಒತ್ತು ನೀಡಿ: ಕರಾವಳಿ ಯಕ್ಷಗಾನ ಕಲೆ ಸಾಗರದಾಚೆಗೂ ತಲುಪಿದೆ, ಅದನ್ನು ವ್ಯವಸ್ಥಿತವಾಗಿ ಬೆಳೆಸುವ ಜಾಲವಿದೆ. ಆದರೆ, ನಮ್ಮ ದೊಡ್ಡಾಟ, ಸಣ್ಣಾಟಗಳು ಕುಂಟುತಾ ಸಾಗಿವೆ. ಇಂತಹ ಕಲೆಗಳು ಕಲಾವಿದರಿಗೆ ಬದುಕಿನ ಜತೆಗೆ, ಸಂಸತಿಯ ಸಂವಾಹಕಗಳಾಗಿವೆ. ಇಂತಹ ಕಲಾವಿದರು ನೆಮ್ಮದಿಯ ಬದುಕು ನಡೆಸುವಂತ ಸ್ಥಿತಿಯನ್ನು ಸರ್ಕಾರ ನಿಮಾರ್ಣ ಮಾಡಬೇಕಿದೆ. ಇಂದು ಅನೇಕ ಜನಪದ ವಾದ್ಯಗಳನ್ನು ವಸ್ತುಪ್ರದರ್ಶನದಲ್ಲಿ ನೋಡಬೇಕಾದ ಸ್ಥಿತಿ ಇದೆ. ಅದೇ ಪರಿಸ್ಥಿತಿ ಕಲೆಗಳು ಬಾರದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಪ್ರೊ.ಡಿ.ವಿ.ಪರಮಶಿವಮೂರ್ತಿ ಹೇಳಿದರು.