

ಮೈಸೂರು: ಭವಿಷ್ಯದ ಚಿಂತನೆ ಮತ್ತು ಮನುಷ್ಯತ್ವದ ಪಾಠಗಳು ಜನಪದ ಸಾಹಿತ್ಯದಲ್ಲಿ ನಮಗೆ ವಿಪುಲವಾಗಿ ಸಿಗುತ್ತವೆ. ಆದರೆ ಇಂದಿನ ವೈಜ್ಞಾನಿಕ ಯುಗದಲ್ಲಿ ಸಾಂಸ್ಕೃತಿಕ ವಿಚಾರ ಹಿಂದೆ ಸರಿಯುತ್ತಿದೆ ಎಂದು ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಮೈಸೂರು ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ನಗರದ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ 2023- 24ನೇ ಸಾಲಿನ ದತ್ತಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಜನಪದ ಸಾಹಿತ್ಯದಲ್ಲಿ ಮಲೆ ಮಹದೇಶ್ವರರು ಕುರಿತು ಮಾತನಾಡಿದರು. ಜನರ ಅನುಭವದಿಂದ ಕಟ್ಟಿಕೊಟ್ಟಿರುವ ಜನಪದ ಸಾಹಿತ್ಯದಲ್ಲಿ ಜೀವನ ಮಾಲ್ಯ, ಮನುಷ್ಯಪಾಠ, ಚಿಂತನೆಗಳು ವಿಪುಲವಾಗಿವೆ. ಅವುಗಳನ್ನು ಅರ್ಥೈಸಿಕೊಂಡು ಬದುಕಿನಲ್ಲಿ ರೂಪಿಸಿಕೊಳ್ಳಬೇಕಿದೆ. ಆದರೆ ಆಧುನಿಕ ದಿನಗಳಲ್ಲಿ ನಮ್ಮ ಸಾಂಸ್ಕೃತಿಕ, ಪರಂಪರೆ, ಜಾನಪದ ಆಚರಣೆಗಳು ಕಡಿಮೆ ಅಗುತ್ತಿವೆ ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಪಠ್ಯದಿಂದ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯವಿಲ್ಲ. ಅದರೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವುದರಿಂದ ಸಾಧ್ಯ. ಇದು ಸ್ಪರ್ಧಾತ್ಮಕ ಯುಗ, ಇಲ್ಲಿ ವಿದ್ಯೆಗೆ ಬಹಳ ಮಹತ್ವವಿರುವ ಯುಗ. ಆದ್ದರಿಂದ ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿತು ಉದ್ಯೋಗವಂತರಾಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ್ ಮಾತನಾಡಿ, ತಮ್ಮ ಕನ್ನಡ ಜನಪದ ಸಾಹಿತ್ಯದ ಮೇರು ಕೃತಿ ಮಲೆಮಹದೇಶ್ವರ ಮಹಾಕಾವ್ಯವು ರೂಪುಗೊಂಡ ಬಗ್ಗೆ ವಿವರಿಸಿದರು.
ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಭವನ ನಿವೃತ್ತ ನಿರ್ದೇಶಕರಾದ ದತ್ತಿ ದಾನಿ ಡಾ.ಎಸ್.ಶಿವರಾಜಪ್ಪ ಅವರು, ಮಲೆ ಮಹದೇಶ್ವರ ಮಹಾಕಾವ್ಯದ ಹುಟ್ಟು ಮತ್ತು ಬೆಳವಣಿಗೆಯ ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸೌಮ್ಯಾ ಈರಪ್ಪ ಮಾತನಾಡಿ, ಇದೊಂದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವೇ ಸರಿ. ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಒಳ್ಳೆಯ ಅವಕಾಶ ಸಿಕ್ಕಿದೆ. ಇದನ್ನು ನಿಮ್ಮ ಜ್ಞಾನಾಭಿವೃದ್ಧಿಗೆ ಬಳಸಿಕೊಳ್ಳಿ ಎಂದು ಹೇಳಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ದೇವರಾಜು ಪಿ. ಚಿಕ್ಕಳ್ಳಿ ಮಾತನಾಡಿ, ಶರಣ ಚಿಂತನೆಯಂತೆ ಸಮಾಜ ನಿರ್ಮಾಣ ಮಾಡುವ ಕಾರ್ಯದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಡಾ.ಪಿ.ಕೆ. ರಾಜಶೇಖರ್ ಮತ್ತು ಡಾ. ಮೈಸೂರು ಕೃಷ್ಣಮೂರ್ತಿ ಅವರು ಜಂಟಿಯಾಗಿ ಮೂಲಧಾಟಿ ಜನಪದ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಮಲೆ ಮಹದೇಶ್ವರನನ್ನು ಸ್ತುತಿಸಿ ಹಾಡಿರೆ ರಾಗಗಳ ಮತ್ತು ಮೂಡಲಗಿರಿಯೋನೆ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಮೆಚ್ಚುಗೆ ಗಳಿಸಿದರು.
ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್ ಇದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸಿ.ಪಿ.ಲಾವಣ್ಯ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎಂ. ಸೌಮ್ಯಾ ವಂದಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ.ಎಂ. ಸಿದ್ದಪ್ಪ ನಿರೂಪಿಸಿದರು.