ಜಾನಪದ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ

CKM pm
ಜಿಲ್ಲಾ ನಾಲ್ಕನೇ ಜಾನಪದ ಸಮ್ಮೇಳನದ ಅಧ್ಯಕ್ಷ ಬಿ.ಪಿ.ಪರಮೇಶ್ವರಪ್ಪ ಅವರನ್ನು ಜಾನಪದ ಪರಿಷತ್‌ನಿಂದ ಸನ್ಮಾನಿಸಿ ಆಹ್ವಾನಿಸಲಾಯಿತು. ಡಾ. ಮಾಳೇನಹಳ್ಳಿ ಬಸಪ್ಪ, ನಾಗೇಶ್, ಜಗದೀಶ್ ಆಚಾರ್, ಜಯಣ್ಣ, ದೇವರಾಜ್ ಇತರರಿದ್ದರು.
Published on

ಚಿಕ್ಕಮಗಳೂರು: ಜಿಲ್ಲಾ ನಾಲ್ಕನೇ ಜಾನಪದ ಸಮ್ಮೇಳನ ಅ.8ರಂದು ಚಿಕ್ಕಮಗಳೂರಿನಲ್ಲಿ ಹಮ್ಮಿಕೊಂಡಿದ್ದು, ಸಮ್ಮೇಳನಾಧ್ಯಕ್ಷರಾಗಿ ಜಾನಪದ ಕಲಾವಿದ ಬೆಳವಾಡಿ ಪರಮೇಶ್ವರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಭಾನುವಾರ ಜಾನಪದ ಪರಿಷತ್ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಬೆಳವಾಡಿಗೆ ತೆರಳಿ ಸಮ್ಮೇಳನಾಧ್ಯಕ್ಷರಿಗೆ ಸನ್ಮಾನ ಮಾಡಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಿ ಸಮ್ಮೇಳನ ಯಶಸ್ವಿಯಾಗಿ ನಡೆಸಿಕೊಡುವಂತೆ ಕೋರಿದರು.
ಸನ್ಮಾನ ಹಾಗೂ ಆಹ್ವಾನ ಪತ್ರಿಕೆ ಸ್ವೀಕರಿಸಿ ಮಾತನಾಡಿದ ಬಿ.ಪಿ.ಪರಮೇಶ್ವರಪ್ಪ, ಸಮ್ಮೇಳನದ ಅಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿರುವುದು ಸಂತಸ ಮತ್ತು ಹೆಮ್ಮೆ ತಂದಿದೆ. ಭಜನೆ ಸೇರಿದಂತೆ ಜಾನಪದ ಕಲೆಗಳು ಪ್ರದರ್ಶನ ಗೊಳ್ಳುತ್ತಿರುವುದು ಹಿರಿಯರಿಂದ ಮಾತ್ರ. ಯುವ ಪೀಳಿಗೆಯ ಅದರತ್ತ ಮುಖ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, 40 ವರ್ಷಗಳಿಂದ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಜನಾ ಸೇವೆ ಸಲ್ಲಿಸುವುದರ ಜತೆಗೆ ರಾಜ್ಯಾದ್ಯಂತ ನೂರಾರು ಶಿಷ್ಯರನ್ನು ತಯಾರು ಮಾಡಿರುವ ಪರಮೇಶ್ವರಪ್ಪ ಅವರನ್ನು ಸಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಹೆಮ್ಮೆ ತಂದಿದೆ. ಸಮ್ಮೇಳನವನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಹೇಳಿದರು.
ವೀರಗಾಸೆ ಕಲಾವಿದ ಡಾ. ಮಾಳೇನಹಳ್ಳಿ ಬಸಪ್ಪ, ಪರಿಷತ್ ತರೀಕೆರೆ ತಾಲೂಕು ಅಧ್ಯಕ್ಷ ನಾಗೇಶ್, ಕಡೂರು ತಾಲೂಕು ಅಧ್ಯಕ್ಷ ಜಗದೀಶ್ ಆಚಾರ್, ಅಜ್ಜಂಪುರ ತಾಲೂಕು ಅಧ್ಯಕ್ಷ ಮರುಳಸಿದ್ದಪ್ಪ, ಹಿರೇನಲ್ಲೂರು ಹೋಬಳಿ ಅಧ್ಯಕ್ಷ ಜಯಣ್ಣ, ಜಿಲ್ಲಾ ಉಪಾಧ್ಯಕ್ಷ ವಿನೀತ್‌ಕುಮಾರ್, ತರೀಕೆರೆ ಉಪಾಧ್ಯಕ್ಷ ದೇವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net