

ಭಾಲ್ಕಿ: ಜನಪದ ಸಂಸ್ಕೃತಿ ಎಲ್ಲರ ಮನೆ ಮಾತಾಗಿದೆ ಎಂದು ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢಮಠ ಚಳಕಾಪುರದ ಶ್ರೀ ಶಂಕರಾನಂದ ಸ್ವಾಮೀಜಿ ನುಡಿದರು.
ಅಂಬೇಸಾಂಗವಿ ಗ್ರಾಮದ ನವಕಿರಣ ಪ್ರೌಢಶಾಲಾ ಆವರಣದಲ್ಲಿ ಅಖಿಲ ಭಾರತೀಯ ಗಂಧರ್ವ ಸಾಂಸ್ಕೃತಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸನಾತನ ಸಾಂಸ್ಕೃತಿಕ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಇವತ್ತಿನ ದಿನಮಾನಗಳಲ್ಲಿ ಜಾನಪದ ಸಂಸ್ಕೃತಿ ನಶಿಸಿ ಹೋಗುತ್ತಿದೆ. ಇದನ್ನು ಪುನಃಶ್ಚೇತನಗೊಳಿಸಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿವೆ. ಡಿಜಿಟಲ್ ವ್ಯವಸ್ಥೆಗೆ ಅಂಟಿಕೊಳ್ಳುತ್ತಿರುವ ಯುವಕರು ಜನಪದ ಸಂಸ್ಕೃತಿ ಮರೆಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಪಲಾಪುರ ಕ್ರಾಸ್‌ನ ಚನ್ನಬಸವಾಶ್ರಮದ ಮಾತೆ ನೀಲಾಂಬಿಕಾ ತಾಯಿ, ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿದರು. ಅಂಬೇಸಾಂಗವಿ ಗ್ರಾಪಂ ಅಧ್ಯಕ್ಷೆ ಶೋಬಾಬಾಯಿ ಮಾನಕರಿ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತೀಯ ಗಂಧರ್ವ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ನಂದರಾಜ ಮಹಾರಾಜ ಪ್ರಾಸ್ತಾವಿಕ ಮಾತನಾಡಿದರು.
ನಾಟಕ ಅಕಾಡೆಮಿ ಮಾಜಿ ಸದಸ್ಯ ಪ್ರವೀಣ ನಾಯಕ, ಜಾನಪದ ಪರಿಷತ್ ಅಧ್ಯಕ್ಷೆ ಆಶಾ ರಾಠೋಡ್, ಮುಖ್ಯ ಶಿಕ್ಷಕ ರಾಮರಾವ ತೋರಣೆ, ಪಿಡಿಒ ಗೀತಾ ಪಾಟೀಲ್, ಕವಿತಾ ಓಂಕಾರ ಮಚಕೂರೆ, ಮುಕೇಶ ಮಾನಕರಿ, ಸಂಗೀತ ಶಿಕ್ಷಕ ಎಸ್.ಕೆ.ಪಾಟೀಲ್, ಕೇಶವರಾವ ಸೂರ್ಯವಂಶಿ, ಶಿವಾಜಿರಾವ ಮಹಾರಾಜ, ನಿವೃತ್ತಿ ಮಹಾರಾಜ ಹಾಲಹಳ್ಳಿಕರ, ನ್ಯಾನೇಶ್ವರ ನಿಂಗಾಲೆ ಇದ್ದರು.
ನವಕಿರಣ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆದವು.
ರಾಮರಾವ ತೊರಣೆ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಣೆ ಮಾಡಿದರು. ಆಶಾ ರಾಠೋಡ್ ವಂದಿಸಿದರು.
ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದು ಸೇವಾ ನಿವೃತ್ತರಾದ ಜೈರಾಜ ದಾಬಶೆಟ್ಟಿ, ರಾಚಮ್ಮಾ ನಾಗಭೂಷಣ ಮಾಮಡಿ, ಶ್ರೀದೇವಿ ಶಿವರಾಜ ಪಾಟೀಲ್, ಗೇಮಸಿಂಗ್ ರಾಠೋಡ್, ಬಾಬುರಾವ ನಾಂಗರೆ ಕೊಟಗ್ಯಾಳ, ರಘುನಾಥ ಹಡಪದ, ಶಾಮರಾವ ಮೋರ್ಗಿಕರ, ಸರಸ್ವತಿ ಹುಲಸೂರೆ ಅವರನ್ನು ಸನ್ಮಾನಿನಸಲಾಯಿತು.