

ಹಾಸನ: ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಪೂರ್ವಿಕರು ಮುಂಜಾನೆಯ ಸಮಯದಲ್ಲಿ ಜನಪದ ಗೀತೆ ಹಾಡಿನೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಈ ಹಾಡುಗಳು ಮನಸ್ಸಿಗೆ ಉಲ್ಲಾಸ, ಸಂತೃಪ್ತಿ ನೀಡುತ್ತಿದ್ದವು ಎಂದು ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಹರೀಶ್ ತಿಳಿಸಿದ್ದಾರೆ.
ನಿರಂತರ ಸಾಂಸ್ಕೃತಿಕ ಯುವಕ ಸಂಘ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಸಹಯೋಗದಲ್ಲಿ ಹಾಸನ ತಾಲ್ಲೂಕಿನ ಸಂಕೇನಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಭಾನುವಾರ ಸಂಜೆ ನಡೆದ ಜಾನಪದ ಸಂಭ್ರಮ ಮತ್ತು ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಹೆಣ್ಣು ಮಕ್ಕಳು ಕೂಡ ದೇವತಾ ಆರಾಧನೆಯಲ್ಲಿ ಜಾನಪದ ಗೀತೆಗಳನ್ನು ಹಾಡುತ್ತಿದ್ದರಲ್ಲದೆ, ಮನರಂಜನೆಯಾಗಿಯೂ ಹಾಡುಗಳನ್ನು ಹೇಳುತ್ತಿದ್ದರು ಎಂದರು.
ಇಂದು ಕೆಲವು ಗ್ರಾಮಗಳಲ್ಲಿ ಜಾನಪದ ಸಂಸ್ಕೃತಿಯನ್ನು ಕಾಣಬಹುದು. ಆದರೆ ದೃಶ್ಯ ಮಾಧ್ಯಮದ ಭರಾಟೆಯಲ್ಲಿ ಜನಪದ ಮಾಯವಾಗುತ್ತಿರುವುದು ವಿಷಾದನೀಯ ಸಂಗತಿ ಎಂದರು.
ಜಾನಪದ ಸಂಭ್ರಮದಲ್ಲಿ ಭಾಗವಹಿಸಿದ್ದ ಕಲಾತಂಡಗಳು ಕೋಲಾಟ, ವೀರಗಾಸೆ, ಪೂಜಾ ಕುಣಿತ, ಡೊಳ್ಳು ಕುಣಿತ, ಜನಪದ ಗೀತೆ, ಸುಗಮ ಸಂಗೀತ, ನಾಟಕ ಪ್ರದರ್ಶನ ಪ್ರಸ್ತುತಪಡಿಸಿದವು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪಾಪಣ್ಣ, ನಿಂಗರಾಜು ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಯೋಗೇಶ್ ಮತ್ತಿತರರು ಉಪಸ್ಥಿತರಿದ್ದರು. ರಂಗಕರ್ಮಿ ಬಿ.ಪಿ. ಗಿರೀಶ್, ಚನ್ನಬಸವೇಶ್ವರ ಭಾಗವಹಿಸಿದ್ದರು.