ಜನಪದ ಗೀತೆ ಸ್ಪರ್ಧೆಯಲ್ಲಿ ಪ್ರಿಯಾ, ಲತಾಗೆ ಪ್ರಶಸ್ತಿ

ಪ್ರಬಂಧ, ಜನಪದಗೀತೆ ಮತ್ತು ರಸಪ್ರಶ್ನೆ ಸ್ಪರ್ಧೆ
ಅರಕಲಗೂಡು ತಾಲೂಕಿನ ರಾಮನಾಥಪುರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿವಿಧ ಸಾಹಿತ್ಯಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಲಾಯಿತು. ವಾಸು ಸಮುದ್ರವಳ್ಳಿ, ಸರ್ವ ಮಂಗಳ, ಬಿ.ಪಿ. ಗಂಗೇಶ್, ಹೊ.ರಾ. ಪರಮೇಶ್ ಇತರರಿದ್ದರು.
Published on

ಅರಕಲಗೂಡು: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲೂಕು ಘಟಕದಿಂದ ಇತ್ತೀಚೆಗೆ ರಾಮನಾಥಪುರ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ವಿವಿಧ ಸಾಹಿತ್ಯಕ ಸ್ಪರ್ಧೆ ಆಯೋಜಿಸಲಾಗಿತ್ತು.

ಪ್ರಬಂಧ, ಜನಪದಗೀತೆ ಮತ್ತು ರಸಪ್ರಶ್ನೆ ಸ್ಪರ್ಧೆಗಳಲ್ಲಿ ರುದ್ರಪಟ್ಟಣ, ಬಸವಾಪಟ್ಟಣ, ಕೇರಳಾಪುರ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿದ್ದರು. ವಿಜೇತರಿಗೆ ಬಹುಮಾನ ನೀಡಲಾಯಿತು.

ಜನಪದ ಗೀತೆ ಸ್ಪರ್ಧೆಯಲ್ಲಿ ರಾಮನಾಥಪುರ ಕಾಲೇಜಿನ ಪ್ರಿಯಾ ಪ್ರಥಮ, ಲತಾ ದ್ವಿತೀಯ, ಪ್ರಬಂಧ ಸ್ಪರ್ಧೆಯಲ್ಲಿ ಕೇರಳಾಪುರದ ವಿದ್ಯಾಗಣಪತಿ ಕಾಲೇಜಿನ ಪೂರ್ಣಿಮಾ ಪ್ರಥಮ, ರಾಮನಾಥಪುರ ಕಾಲೇಜಿನ ಶಶಿಕಲಾ ದ್ವಿತೀಯ, ರಸಪ್ರಶ್ನೆ ಸ್ಪರ್ಧೆಯಲ್ಲಿ ಕೇರಳಾಪುರ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ, ರುದ್ರಪಟ್ಟಣ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಹಾಗೂ ಮೂರನೇ ಬಹುಮಾನವನ್ನು ರಾಮನಾಥಪುರ ಕಾಲೇಜಿನ ವಿದ್ಯಾರ್ಥಿಗಳು ಪಡೆದರು.

ಕಾರ್ಯಕ್ರಮದಲ್ಲಿ 2022-23 ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ 695ನೇ ರ‌್ಯಾಂಕ್ ಗಳಿಸಿದ ರಾಮನಾಥಪುರದ ರೋಹಿತ್ ಹಾಗೂ ರುದ್ರಪಟ್ಟಣ, ಬಸವಾಪಟ್ಟಣ, ಕೇರಳಾಪುರ, ರಾಮನಾಥಪುರ ಪದವಿಪೂರ್ವ ಕಾಲೇಜಿನಲ್ಲಿ 2022-23ನೇ ಸಾಲಿನಲ್ಲಿ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ ಮಾತನಾಡಿ, ತೆರೆಮರೆಯ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಬೆಳಕಿಗೆ ತರುವ ಕೆಲಸವನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಮಾಡುತ್ತಿದೆ. ರಾಜ್ಯ ಮಾತ್ರವಲ್ಲ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲೂ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿಕೊಂಡು ಅನೇಕ ಸಾಹಿತಿಗಳನ್ನು ಮುಖ್ಯ ವಾಹಿನಿಗೆ ತರಲಾಗುತ್ತಿದೆ ಎಂದು ಹೇಳಿದರು.

ಪ್ರಾಂಶುಪಾಲೆ ಸರ್ವಮಂಗಳಾ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಗಂಗೇಶ್ ಬಸವನಹಳ್ಳಿ, ಗೌರವಾಧ್ಯಕ್ಷ ಹೊ.ರಾ.ಪರಮೇಶ್, ಉಪಾಧ್ಯಕ್ಷ ಆರ್.ಬಿ.ರಂಗನಾಥ್, ಕಾರ್ಯದರ್ಶಿ ಶಿವಣ್ಣ ಕೆರಕೋಡಿ, ವಿ.ಬಿ.ರವಿ. ಕೆ.ಆರ್.ಗಿರೀಶ್, ರಾಜೇಶ್, ವೀಣಾ, ವಿವಿಧ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net