

ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ರಂಗಾಯಣದ ವನರಂಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನಪದೋತ್ಸವ ದಲ್ಲಿ ಗಾಯಕಿ ಶುಭಾ ರಾಘವೇಂದ್ರ ತಂಡ ನಡೆಸಿಕೊಟ್ಟ ಜನಪದ ಗಾಯನಕ್ಕೆ ಜನರು ತಲೆದೂಗಿದರು. ಶುಭಾ ರಾಘವೇಂದ್ರ ಗಾಯನ ಬಹುರೂಪಿಯ ದಿನದ ಪ್ರಮುಖ ಆಕರ್ಷಣೆಯಾಗಿತ್ತು.
ಜನಪದೋತ್ಸವ ಹಾಗೂ ನಾಟಕ ವೀಕ್ಷಿಸಲು ರಂಗಾಯಣಕ್ಕೆ ಸಂಜೆ ಜನಸಾಗರವೇ ಹರಿದು ಬಂತು. ಸಂಜೆ 5ರ ನಂತರ ಸಾಕಷ್ಟು ಸಂಖ್ಯೆಯಲ್ಲಿ ಜನರು ರಂಗಾಯಣದತ್ತ ಮುಖ ಮಾಡಿದರು. ವನರಂಗದಲ್ಲಿ ಹಮ್ಮಿಕೊಂಡ ಜನಪದೋತ್ಸವ ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಸಾಕಷ್ಟು ಜನರಿಗೆ ಕೂರಲು ಆಸನ ದೊರೆಯದ ಹಿನ್ನೆಲೆಯಲ್ಲಿ ಕಲಾರಸಿಕರು ನಿಂತುಕೊಂಡೇ ಜನಪದೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಂಡರು.
ಗಾಯಕಿ ಶುಭಾ ರಾಘವೇಂದ್ರ ತಂಡದವರು ತಮ್ಮ ಸುಮಧುರ ಕಂಠದ ಮೂಲಕ ಜನರ ಮನಗೆದ್ದರು. ಶುಭಾ ರಾಘವೇಂದ್ರ ತಂಡದ ಸದಸ್ಯರು ಹಾಡುತ್ತಿದ್ದರೆ ಜನರು ಸಹ ಗಾಯನಕ್ಕೆ ಧ್ವನಿಗೂಡಿಸಿ ಸಂಭ್ರಮಿಸಿದರು. ವಿಘ್ನ ನಿವಾರಕ ಗಣೇಶನನ್ನು ಸ್ತುತಿಸುವ ‘ಶರಣು ಶರಣು ಅಯ್ಯ ಗಣನಾಯಕ ನಮ್ಮ ಕರುಣದಿ ಕಾಯೋ ಗಣನಾಯಕ…’ ಹಾಡಿನೊಂದಿಗೆ ಗಾಯನ ಪ್ರಾರಂಭಗೊಂಡಿತು. ನಂತರ ನವರಾತ್ರಿ ಸಂದರ್ಭ ನಡೆಯುವ ಬನ್ನಿ ಪೂಜೆಗೆ (ಶಮಿ ವೃಕ್ಷ) ಸಂಬಂಧಿಸಿದ ಗೀತೆ ‘ಬನ್ನಿ ಮುಗಿಯೋಣು ಬಾರಾ ಕೋಲು ಕೋಲಾ, ಚಿನ್ನ ತರುವೋಣು ಬಾರ ಕೋಲು ಕೋಲಾ…,’, ಮಾದಪ್ಪನ ಲೀಲೆಗಳನ್ನು ವರ್ಣಿಸುವ ‘ಆನು ಮಲೆ ಜೇನು ಮಲೆ ಗುಲಗಂಜಿ ಮಲೆ ಎಪ್ಪತ್ತೇಳು ಮಲೆಗಳಲ್ಲಿ ತಪ್ಪದೆ ನಲಿದು ನಾಟ್ಯವಾಡುವ ನಮ್ಮಪ್ಪಾಜಿ ಮುದ್ದು ಮಾದಪ್ಪನ ಪಾದಕ್ಕೆ ಒಂದು ಸಾರಿ ಉಘೇ ಅನ್ನಿ…’ ಮುಂತಾದ ಹಾಡುಗಳನ್ನು ಹಾಡಿ ರಂಜಸಿದರು.
ಇದೇ ವೇದಿಕೆಯಲ್ಲಿ ಏರ್ಪಡಿಸಿದ್ದ ಓಂಕಾರ್ ಮೂರ್ತಿ ತಂಡದ ಚಿಟ್ ಮೇಳ ನೃತ್ಯ ಗಮನ ಸೆಳೆಯಿತು. ಗಮನ ಸೆಳೆಯಿತು. ‘ಚೆಲ್ಲಿ ದರು ಮಲ್ಲಿಗೆಯಾ, ಬಾಣಾಸೂರೇರಿ ಮ್ಯಾಲೆ, ಅಂದಾದ ಚೆಂದಾದ ಮಾಯ್ಗರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ…’, ‘ನೋಡವಳಂದವ ಮೊಗ್ಗಿನ ಮಾಲೆ ಚಂದವ, ಬೆಟ್ಟ ಬಿಟ್ಟಿಳಿಯುತ್ತ ಬಿಟ್ಟಾಳೇ ಮಂಡೆಯ ಉಟ್ಟಿರೊ ಲಂಗ ಹುಲಿ ಚರ್ಮ, ನೋಡವಳಂದವ…’, ಹಾಡನ್ನು ವಾದ್ಯದಲ್ಲಿ ನುಡಿಸಿ ನೃತ್ಯ ಜನರ ಮೆಚ್ಚುಗೆ ಪಡೆದರು.