ಜನನ-ಮರಣದ ನಡುವಿನ ಬದುಕು ಸಾರ್ಥವಾಗಿರಲಿ

CTD RAMBAPURI SRI
Published on

ಚಿತ್ರದುರ್ಗ: ಹುಟ್ಟು ಆಕಸ್ಮಿಕ, ಸಾವು ಅನಿವಾರ‌್ಯ. ಇವೆರಡರ ನಡುವಿನ ನಮ್ಮ ಬದುಕು ಉತ್ತಮವಾಗಿರಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾ ಪುರಿ ಪೀಠದ ಜಗದ್ಗುರು ಡಾ.ಶ್ರೀ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಮಂಗಳವಾರ ನಗರದ ಧವಳಗಿರಿ ಬಡಾವಣೆಯ ಉದ್ಯಮಿ ಪಟೇಲ್ ಶಿವಕುಮಾರ್ ನಿವಾಸದಲ್ಲಿ, ಅವರ ಪುತ್ರ ಅಭಿಷೇಕ ಎಸ್.ಪ ಟೇಲ್ ಸ್ಮರಣೆ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಸಾವು ಸಮಯ ಮೀರಿ ಬಂದರೆ ಯಾವುದೇ ನೋವಿಲ್ಲ, ಆದರೆ ಅದು ಮಧ್ಯದಲ್ಲಿ ಬಂದರೆ ಮಾತ್ರ ಎಲ್ಲರನ್ನೂ ದುಃಖಕ್ಕೆ ತಳ್ಳುತ್ತದೆ. ಈ ನೋವನ್ನು ಮರೆತು ಸಮಾಜಮುಖಿ ಕಾರ‌್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸಾವು ಎಲ್ಲರಿಗೂ ಬರುತ್ತದೆ. ಅದಕ್ಕೆ ಅಂಜದೇ ಧೈರ‌್ಯದಿಂದ ಸಾರ್ಥಕ ಬದುಕನ್ನು ನಡೆಸಬೇಕೆಂದು ಶ್ರೀಗಳು ಹೇಳಿದರು.
ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ಅಭಿಷೇಕ್ ನಿಧನದಿಂದ ಅವರ ಕುಟುಂಬ, ಬಂಧುಗಳಿಗೆ ನೋವಾಗಿದೆ. ಚಿಕ್ಕ ವಯಸ್ಸಿನಲ್ಲೇ ಎಲ್ಲರನ್ನು ಬಿಟ್ಟು ಆಗಲಿದ್ದಾರೆ. ತಂದೆ-ತಾಯಿಗಳಿಗೆ ಇವರ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಹುಟ್ಟಿದ ಮೇಲೆ ತುಂಬು ಜೀವನ ನಡೆಸಿ ಸಾಯುವುದು ಸಾಮಾನ್ಯ. ಆದರೆ ಚಿಕ್ಕ ವಯಸ್ಸಿನಲ್ಲಾಗುವ ಸಾವು ಅತೀವ ದುಃಖ ಉಂಟು ಮಾಡುತ್ತದೆ ಎಂದರು. ಅಭಿಷೇಕ ಹೆಸರಲ್ಲಿ ಪ್ರತಿ ವರ್ಷ ನೆರವಿಗೆ ಮುಂದಾಗಿರು ವುದು ಉತ್ತಮ ಕಾರ‌್ಯವಾಗಿದೆ ಎಂದರು.
ಶಾಸಕ ಕೆ.ಸಿ.ವೀರೇಂದ್ರ ಮಾತನಾಡಿ, ಅಭಿಷೇಕ್ ಸಾವಿನಲ್ಲೂ ಸಹ ಸಾರ್ಥಕತೆ ಮೆರೆದಿದ್ದಾರೆ. ಅವರ ಕಣ್ಣುಗಳ ದಾನ ಇತರರಿಗೆ ದಾರಿ ದೀಪವಾಗಿದೆ. ಅಭಿಷೇಕ್ ಹೆಸರಲ್ಲಿ ಅವರ ತಂದೆ ಒಂದು ಕೋಟಿ ರೂ.ಠೇವಣಿ ಇರಿಸಿ, ಅದರಿಂದ ಬರುವ ಬಡ್ಡಿ ಮೊತ್ತದಲ್ಲಿ ಸಮಾಜಮುಖಿ ಕೆಲಸವನ್ನು ಮಾಡುವುದಾಗಿ ತಿಳಿಸಿದ್ದಾರೆ. ಇದು ಶ್ಲಾಘನೀಯ ಎಂದರು.
ಎಂಎಲ್‌ಸಿ ಕೆ.ಎಸ್.ನವೀನ್, ಮಾಜಿ ಸಚಿವ ಎಚ್.ಏಕಾಂತಯ್ಯ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ, ಡಾ.ಸಿದ್ದಾರ್ಥ ಗುಂಡಾರ್ಫಿ ಮಾತನಾಡಿದರು. ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೀಕಾಂತರೆಡ್ಡಿ,ನಿವೃತ್ತ ಎಸಿಎಫ್ ಮಂಜುನಾಥ್, ಪಟೇಲ್ ರುದ್ರಪ್ಪ, ಮಹೇಶ್ವರಪ್ಪ, ಪ್ರಸನ್ನಕುಮಾರ್, ಕವಿತಾ ಪಟೇಲ್, ಜಿ.ಆರ್.ಪ್ರಭಾಕರ್, ಸಿದ್ದಾಪುರ ನಾಗಣ್ಣ, ಆದರ್ಶ ಎಸ್.ಪಟೇಲ್ ಮತ್ತಿತರರು ಇದ್ದರು.
ರಂಭಾಪುರಿ ಗುರುಕುಲದ ಸಾಧಕರು ವೇದಘೋಷ ನಡೆಸಿ ಕೊಟ್ಟರು. ಶೋಭಾ, ವಿಜಯಲಕ್ಷ್ಮೀ ಪ್ರಾರ್ಥಿಸಿದರು. ಪಟೇಲ್ ಶಿವಕುಮಾರ್ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕಿ ಶೈಲಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net