

ದಾವಣಗೆರೆ : ಜನನ ಹಾಗೂ ಮರಣ ನೋಂದಣಿ ಮತ್ತು ಉಪ ನೋಂದಣಾಧಿಕಾರಿಗಳು ಜನನ, ಮರಣ ಘಟಿಸಿದ 21 ದಿನದೊಳಗೆ ನೋಂದಣಿ ಮಾಡಿ ಪ್ರಮಾಣಪತ್ರ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ನಾಗರಿಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಹಾಗೂ ಕೃಷಿ ಅಂಕಿ ಅಂಶಗಳ ಸಮಿತಿ ಸಭೆಯಲ್ಲಿ ಮಾತನಾಡಿದರು. ಜನನ ಮತ್ತು ಮರಣ ನೋಂದಣಿ ಮಾಡುವ ಸಮಯದಲ್ಲಿ ಮರಣ ದಿನಾಂಕ ಹಾಗೂ ನೋಂದಣಿ ಘಟಕವನ್ನು ತಪ್ಪಾಗಿ ಆಯ್ಕೆ ಮಾಡುತ್ತಿರುವುದು. ಮತ್ತು ಬೇರೆಯವರ ಆಧಾರ್ ಜೋಡಣೆ ಮಾಡಿ ಮರಣ ಪ್ರಮಾಣ ವಿತರಿಸುತ್ತಿರುವುದು ಕಂಡುಬಂದಿದ್ದು, ಈ ರೀತಿಯ ತಪ್ಪುಗಳು ಮುಂದೆ ಆಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು. ಬೆಳೆ ಕಟಾವು ಪ್ರಯೋಗಳನ್ನು ಕೈಗೊಳ್ಳಲು ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹರಿಹರ 260, ಜಗಳೂರು 482, ದಾವಣಗೆರೆ 362, ಹೊನ್ನಾಳಿ 266, ಚನ್ನಗಿರಿ 428, ನ್ಯಾಮತಿ 212 ಬೆಳೆ ಕಟಾವು ಪ್ರಯೋಗಗಳನ್ನು ನಿಯೋಜನೆ ಗೊಳಿಸಲಾಗಿರುತ್ತದೆ. ಇದರಲ್ಲಿ ನಮೂನೆ 1 ಹರಿಹರ 58, ಜಗಳೂರು 20 , ದಾವಣಗೆರೆ 101, ಹೊನ್ನಾಳಿ 82, ಚನ್ನಗಿರಿ 20 ಹಾಗೂ ನ್ಯಾಮತಿ 64 ಬಾಕಿ ಇದ್ದು ಅವುಗಳನ್ನು ಕೂಡಲೇ ಪೂರ್ಣಗೊಳಿಸಬೇಕು. ನಮೂನೆ 2 ರ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಜನವರಿಯಿಂದ ಸೆಪ್ಟೆಂಬರ್ ವರೆಗೆ ಜನನ 4744, ಮರಣ 4985 ಒಟ್ಟು 9729 ಆಗಿರುತ್ತದೆ ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ನೀಲಾ ಸಭೆಗೆ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಇದ್ದರು.