

ತರೀಕೆರೆ: ಜನನ ಮತ್ತು ಮರಣ ನೋಂದಣಿಗೆ ತಂದಿರುವ ತಿದ್ದುಪಡಿ ರದ್ದು ಮಾಡುವಂತೆ ಒತ್ತಾಯಿಸಿ ವಕೀಲರ ಸಂಘದ ಪದಾಧಿಕಾರಿಗಳು ಮಂಗಳವಾರ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಸುರೇಶ್ಚಂದ್ರ ಮಾತನಾಡಿ, ಕರ್ನಾಟಕ ಜನನ ಮತ್ತು ಮರಣ ನೋಂದಣಿಯನ್ನು 3ನೇ ಹಂತದ ಮ್ಯಾಜಿಸ್ಟ್ರೇಟ್ ನ್ಯಾಯಾಧಿಕರಣ ವ್ಯಾಪ್ತಿ ಬದಲಿಸಿ ಉಪವಿಭಾಗಾಧಿಕಾರಿಗೆ ನೀಡಿರುವುದು ಸರಿಯಿಲ್ಲ. ಉಪವಿಭಾಗದಲ್ಲಿ 4 ತಾಲೂಕುಗಳು ಇರಲಿದ್ದು ಆಯಾ ತಾಲೂಕಿನ ಸಾರ್ವಜನಿಕರು ಜನನ ಮತ್ತು ಮರಣ ಪತ್ರ ಪಡೆಯಲು ದೂರದ ಉಪ ವಿಭಾಗಾಧಿಕಾರಿ ಕಚೇರಿಗೆ ಅಲೆದಾಡುವಂತಾಗಿದೆ ಎಂದು ದೂರಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಜನನ ಮತ್ತು ಮರಣ ನೋಂದಣಿ ಮಾಡಿರುವ ತಿದ್ದುಪಡಿ ರದ್ದುಪಡಿಸಿ ಈ ಹಿಂದಿನ ವ್ಯವಸ್ಥೆಯನ್ನೇ ಮುಂದುವರಿಸಬೇಕು. ಸಾರ್ವಜನಿಕರ ಅನಗತ್ಯ ಅಲೆದಾಟ ತಪ್ಪಿಸಲು ಸಂಬಂಧಿತ ಪ್ರಕರಣಗಳನ್ನು ಆಯಾ ಜೆಎಂಎಫ್ಸಿ ನ್ಯಾಯಾಲಯದಲ್ಲೇ ಇತ್ಯರ್ಥಪಡಿಸಿಕೊಳ್ಳಲು ಆದೇಶಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಸಲಹೆಗಾರ ಜೆ.ಟಿ.ಜಗದೀಶ್, ಸಹ ಕಾರ್ಯದರ್ಶಿ ರಜನೀಶ್, ವಕೀಲರರಾದ ಶಶಿಧರ್, ವಿನಯ್ ಮತ್ತಿತರರಿದ್ದರು.