ಜನನ, ಮರಣ ದಾಖಲೆಗಳ ಡಿಜಿಟಲೀಕರಣಗೊಳಿಸಿ

20rajesh1
Published on

ಚಾಮರಾಜನಗರ: ಜಿಲ್ಲೆಯಲ್ಲಿ ಜನನ-ಮರಣ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸುವುದರ ತೆಗೆ ಡಿಜಿಟಲೀಕರಣಗೊಳಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ನಾಗರಿಕ ನೊಂದಣಿ ಪದ್ದತಿಯಡಿ ಜಿಲ್ಲಾಮಟ್ಟದ ಜನನ ಮರಣಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಶಾಲಾ ಪ್ರವೇಶಕ್ಕಾಗಿ ಹಾಗೂ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾರ್ವಜನಿಕರಿಗೆ ಜನನ ಪ್ರಮಾಣ ಪತ್ರಗಳು ಅತ್ಯಾವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಾಕಷ್ಟು ವರ್ಷಗಳಿಂದ ಲಭ್ಯವಿರುವ ಜನನ ಮರಣ ಪತ್ರಗಳನ್ನು ಸೂಕ್ತವಾಗಿ ನಿರ್ವಹಿಸಬೇಕು. ಅಲ್ಲದೆ ದಾಖಲೆಗಳನ್ನು ಮುಂದಿನ ಆರು ತಿಂಗಳೊಳಗೆ ಡಿಜಿಟಲೀಕರಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಾಮಾನ್ಯವಾಗಿ ಜನನ ಪ್ರಮಾಣಪತ್ರಗಳನ್ನು 21 ದಿನದೊಳಗೆ ನೀಡಬೇಕಾಗಿದೆ. ಜನನ ಮರಣ ಪ್ರಮಾಣ ಪತ್ರಗಳನ್ನು ಡಿಜಿಟಲೀಕರಣ ಮಾಡುವುದರಿಂದ ಜನರು ಕಚೇರಿಗೆ ಅಲೆದಾಡುವುದು ತಪ್ಪಲಿದೆ. ನಮ್ಮ ಜಿಲ್ಲೆಗೆ ಸಂಬಂಧಿಸಿದ ಜನನ ಮರಣ ಪತ್ರಗಳು ಬೇರೆ ಜಿಲ್ಲೆಗಳಲ್ಲಿದ್ದರೂ ಅದನ್ನು ತರಿಸಿಕೊಳ್ಳುವ ಕೆಲಸವಾಗಬೇಕು. ಸಂಬಂಧಿಸಿದ ತಾಲೂಕು ಕಚೇರಿಗಳಲ್ಲಿ ತಾಲೂಕುವಾರು ಹಾಗೂ ವರ್ಷಾವಾರು ದಾಖಲೆಗಳನ್ನು ಸಂಗ್ರಹಿಸಿಡುವ ಕಾರ್ಯ ಆದ್ಯತೆ ಮೇರೆಗೆ ಆಗಬೇಕು ಎಂದರು.

ಪರಿಶಿಷ್ಟ ಪಂಗಡಗಳ ಆದಿವಾಸಿ ಜನರು ವಾಸಿಸುವ ಜಿಲ್ಲೆಯ ಹಾಡಿ-ಪೋಡುಗಳಲ್ಲಿನ ಮಕ್ಕಳಿಗೆ ಜನನ ಪ್ರಮಾಣಪತ್ರಗಳನ್ನು ನಿಗದಿತ ಕಾಲಮಿತಿಯಲ್ಲಿ ನೀಡಬೇಕು. ಜನನ ಪ್ರಮಾಣ ಪತ್ರಗಳು ದೊರಕದೇ ಶಾಲೆಗೆ ಸೇರಲು ಸಾಧ್ಯವಾಗುತ್ತಿಲ್ಲವೆಂಬ ದೂರುಗಳು ಬರಬಾರದು. ಜನನ ಮರಣ ಪ್ರಮಾಣ ಪತ್ರಗಳ ನೀಡುವಿಕೆ ಕುರಿತ ಮಾಹಿತಿಯನ್ನು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪ್ರದರ್ಶಿಸಬೇಕು. ಮರಣ ಪ್ರಮಾಣಪತ್ರಗಳಲ್ಲಿ ಎಲ್ಲಾ ವಿಷಯಗಳನ್ನು ಕ್ರಮಬದ್ಧವಾಗಿ ದಾಖಲಿಸುವಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ನಿಗಾ ವಹಿಸುವಂತೆ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಜಿಲ್ಲಾ ಸಾಂಖ್ಯಿಕ ಸಂಗ್ರಹಣಾಧಿಕಾರಿ ಪವನ್‌ಕುಮಾರ್, ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್, ಜಿಲ್ಲಾ ಸರ್ಜನ್ ಡಾ.ಮಹೇಶ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಂ.ವಿ.ಸುಧಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಬೀದ್, ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಸುಷ್ಮಾ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net