

ಚಾಮರಾಜನಗರ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಜನನ ಮಂಟಪದ ಸರ್ಕಾರಿ ಆಸ್ತಿಯನ್ನು ರಕ್ಷಣೆ ಮಾಡುವಂತೆ ಒತ್ತಾಯಿಸಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಶ್ರೀಚಾಮರಾಜೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಮಹಾರಾಜರು ಹುಟ್ಟಿದ ಸ್ಥಳವಾಗಿರುವ ಜನನ ಮಂಟಪವು ಸರ್ಕಾರಿ ಬಿ ಖರಾಬು ಆಸ್ತಿಯಾಗಿದ್ದು, ಸರ್ಕಾರಿ ಆಸ್ತಿಯನ್ನು ಸಂರಕ್ಷಣೆ ಮಾಡಲು ನಮ್ಮ ಸಂಘಟನೆ ವತಿಯಿಂದ ಹಲವಾರು ಪ್ರತಿಭಟನೆಗಳನ್ನು ನಡೆಸಿರುತ್ತೇವೆ. ಆದರೂ ಇಂದಿಗೂ ಯಾವುದೇ ಕ್ರಮವಹಿಸಿಲ್ಲ ಎಂದು ದೂರಿದರು.
ಜಿಲ್ಲಾಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿರುವುದನ್ನು ತಡೆಗಟ್ಟಬೇಕು. ನಗರಸಭೆಯ ಪೌರಯುಕ್ತರಿಗೆ ಯಾವುದೇ ರೀತಿಯ ಇ-ಸ್ವತ್ತಗಳನ್ನು ನೀಡದಂತೆ ಆದೇಶಮಾಡಿ ತುರ್ತಾಗಿ ಸರ್ಕಾರಿ ಆಸ್ತಿಯನ್ನು ಸಂರಕ್ಷಣೆ ಮಾಡುವ ಮೂಲಕ ಸಾರ್ವಜನಿಕರು ವೀಕ್ಷಣೆ ಮಾಡುವಂತಹ ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ವೇದಿಕೆ ಅಧ್ಯಕ್ಷ ಸುರೇಶ್ ವಾಜಪೇಯಿ, ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜ್, ನಮ್ಮನೆ ಪ್ರಶಾಂತ್, ಭರತ್, ರಾಜೇಂದ್ರ, ಜಗದೀಶ್, ನಾಗಶೆಟ್ಟಿ ಹಾಜರಿದ್ದರು.