

ಚಿತ್ರದುರ್ಗ: ಜಿಲ್ಲಾಡಳಿತ, ಪೊಲೀಸ್, ಅಗ್ನಿಶಾಮಕ, ಗೃಹ ರಕ್ಷಕದಳ, ನಗರಸಭೆ, ಆರೋಗ್ಯ, ಸಾರಿಗೆ, ಬೆಸ್ಕಾಂ, ಎನ್‌ಸಿಸಿ, ಎನ್‌ಎಸ್‌ಎಸ್ ಸ್ವಯಂ ಸೇವಕರ ಹಾಗೂ ಹಿಂದು ಮಹಾಗಣಪತಿ ಉತ್ಸವ ಸಮಿತಿ ಕಾರ್ಯಕರ್ತರ ನಡುವೆ ಸಮನ್ವಯತೆಯಿಂದ ನಗರದಲ್ಲಿ ಜರುಗುವ ಹಿಂದು ಮಹಾಗಣಪತಿ ಶೋಭಾ ಯಾತ್ರೆ ವೇಳೆ ಜನದಟ್ಟಣೆ ಹಾಗೂ ವಿಪ್ಪತ್ತನ್ನು ನಿರ್ವಹಿಸಬೇಕಿದೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಹೇಳಿದರು.
ನಗರದ ಜಿಲ್ಲಾ ಕವಾಯತು ಮೈದಾನದಲ್ಲಿ ಸೋಮವಾರ ಶೋಭಾಯಾತ್ರೆ ಸಿದ್ಧತೆ, ವಿಪತ್ತು ನಿರ್ವಹಣೆ ಕಲ್ಪಿತ ಪ್ರದರ್ಶನ ಸಭೆಯಲ್ಲಿ ಮಾತನಾಡಿ, ಈ ಬಾರಿಯ ಮೆರವಣಿಗೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ವಿಪತ್ತು ಹಾಗೂ ಜನರ ಜೀವ ರಕ್ಷಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು.
ಅತಿಯಾದ ಜನದಟ್ಟಣೆಯಿಂದ ನೂಕು ನುಗ್ಗಲು, ಕಾಲ್ತುಳಿತ, ವಿದ್ಯುತ್ ಹಾಗೂ ಅಗ್ನಿ ಅವಘಡದಂತಹ ವಿಪತ್ತು ಉಂಟಾಗಬಹದು. ಕೆಲವರಿಗೆ ರಕ್ತದೊತ್ತಡ, ಹೃದಯಘಾತ ಸೇರಿದಂತೆ ವೈದ್ಯಕೀಯ ತುರ್ತು ಎದುರಾಗಬಹುದು. ಈ ವೇಳೆ ಸ್ಥಳದಲ್ಲಿರುವ ಪೊಲೀಸರು, ವೈದ್ಯಕೀಯ ಸಿಬ್ಬಂದಿ ಮೊದಲಿಗೆ ಸ್ಪಂದಿಸಬೇಕೆಂದರು.
ಎಸಿ ಮೆಹಬೂಬ್ ಜಿಲಾನಿ ಖುರೇಷಿ ಮಾತನಾಡಿ, ಶೋಭಾಯಾತ್ರೆಯಂದು ಎಲ್ಲ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲೇ ಇರಬೇಕು ಎಂದರು.
ಜಿಲ್ಲಾಸ್ಪತ್ರೆ, ಬಸವೇಶ್ವರ ಹಾಗೂ ವೇದಾಂತ ಆಸ್ಪತ್ರೆ ಸೇರಿದಂತೆ ಮೆರವಣಿಗೆ ಮಾರ್ಗದ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಕ್ಕಾಗಿ 200 ಬೆಡ್‌ಗಳನ್ನು ಮೀಸಲಿರಿಸಲಾಗುವುದು. 10 ಸರ್ಕಾರಿ 10 ಖಾಸಗಿ ಆಂಬುಲೆನ್ಸ್‌ಗಳನ್ನು ಸನ್ನದ್ಧವಿರಿಸಿ ಎಲ್ಲ ತಜ್ಞ ವೈದ್ಯರು, ವೈದ್ಯಕೀಯ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಡಿಎಸ್ ಡಾ.ಎಸ್.ಪಿ. ರವೀಂದ್ರ ಹೇಳಿದರು.
ನಗರ ಸಂಪರ್ಕಿಸುವ 6 ಮುಖ್ಯರಸ್ತೆಗಳಲ್ಲಿ ಚೆಕ್‌ಪೋಸ್ಟ್, ಮೆರವಣಿಗೆ ಮಾರ್ಗದುದ್ದಕ್ಕೂ 18 ಪೊಲೀಸ್ ವಾಚ್‌ಟವರ್ ನಿರ್ಮಾಣ, 161 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, 20 ವಿಡಿಯೋಗ್ರಾಫರ್‌ಗಳನ್ನು ನಿಯೋಜಿಸಲಾಗುವುದು. ಈಗಾಗಲೇ ಮೆರವಣಿಗೆ ರಸ್ತೆಯ ಕಟ್ಟಡಗಳ ಮೇಲೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಹತ್ತಿಸದಂತೆ ಮಾಲೀಕರಿಗೆ ಸೂಚಿಸಲಾಗಿದೆ. ಕುಡಿಯುವ ನೀರು, ರಸ್ತೆ ಸಚ್ಛತೆಗೆ ಕ್ರಮ ವಹಿಸಲಾಗಿದೆ ಎಂದು ನಗರಸಭೆ ಇಂಜಿನಿಯರ್ ರಾಜು ತಿಳಿಸಿದರು.
ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಸಂಜೆ ಕಲ್ಪಿತ ಪ್ರದರ್ಶನ ಜರುಗಿತು. ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ ಹಾಗೂ ಹತ್ತಿರದ ಆಸ್ಪತ್ರೆಗೆ ಆಂಬುಲೆನ್ಸ್ ಯಾವ ಮಾರ್ಗದಲ್ಲಿ ಸಾಗಬೇಕು ಎಂಬುದನ್ನು ತಿಳಿಸಲಾಯಿತು.
ನಗರದ ಚಳ್ಳಕೆರೆಗೇಟ್ ಬಳಿಯಿಂದ ಆರಂಭವಾಗುವ ಶೋಭಾಯಾತ್ರೆ, ಮದಕರಿ ನಾಯಕ, ಡಾ.ಬಿ.ಆರ್.ಅಂಬೇಡ್ಕರ್, ಎಸ್‌ಬಿಎಂ, ಗಾಂಧಿ, ಸಂಗೋಳ್ಳಿರಾಯಣ್ಣ ಹಾಗೂ ಕನಕ ವೃತ್ತಗಳ ಮಾರ್ಗದ ಮೂಲಕ ಚಂದ್ರವಳ್ಳಿ ವಿಸರ್ಜನಾ ಸ್ಥಳಕ್ಕೆ ತಲುಪಲಿದೆ ಎಂದು ಎಸ್‌ಪಿ ವಿವರಿಸಿದರು.
ಎಎಸ್‌ಪಿ ಉಮೇಶ್ ಈಶ್ವರ್‌ನಾಯ್ಕ, ಡಿವೈಎಸ್‌ಪಿಗಳಾದ ಶ್ರೀನಿವಾಸ್, ದಿನಕರ್, ಡಿಡಿಪಿಐ ಎಂ.ಆರ್. ಮಂಜುನಾಥ, ನಗರಸಭೆ ಆಯುಕ್ತೆ ಎಂ. ರೇಣುಕಾ ಇತರರು ಇದ್ದರು.