

ಭದ್ರಾವತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸಂಗಮೇಶ್ವರ್ ಅವರ ಬೆಂಬಕ್ಕೆ ನಿಂತಿದ್ದಾರೆ. ಕ್ಷೇತ್ರದ ಜನತೆಯ ಆಶೀರ್ವಾದ, ಸಹಕಾರವಿದ್ದರೆ ಸಂಗಮೇಶ್ವರ್ ಸಚಿವರಾಗುತ್ತಾರೆ ಎಂದು ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ ಸ್ವಾಮೀಜಿ ಹೇಳಿದರು.
ಬಿ.ಆರ್.ಪ್ರಾಜೆಕ್ಟ್‌ನಲ್ಲಿರುವ ಭದ್ರಾ ಜಲಾಶಯಕ್ಕೆ ಭಾನುವಾರ ಬಾಗಿನ ಸಮರ್ಪಣೆ ಮತ್ತು ಗಂಗೆ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗಮೇಶ್ವರ್ ಅವರು ಯಾವುದೇ ಜಾತಿ, ಮತ ತಾರತಮ್ಯವಿಲ್ಲದೆ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಕ್ಷೇತ್ರದ ಎಲ್ಲ ಸಮುದಾಯಗಳ ಆಶೀರ್ವಾದ ನಮ್ಮ ಕುಟುಂಬದ ಮೇಲಿದೆ. ಅಂಬೇಡ್ಕರ್ ಅವರ ತತ್ವ, ಸಿದ್ಧಾಂತವನ್ನು ಅನುಸರಿಸುವ ನಾವು ಇಂದು ಸಮಾಜದ ಎಲ್ಲ ಧರ್ಮಗುರುಗಳ ಸಮ್ಮುಖದಲ್ಲಿ ಭದ್ರೆಗೆ ಬಾಗಿನ ಅರ್ಪಿಸಿದ್ದೇವೆ. ಭದ್ರೆ ಕೇವಲ ನೀರಲ್ಲ. ಕೋಟ್ಯಂತರ ರೈತರ ಜೀವನಾಡಿ ಎಂದು ಹೇಳಿದರು.
ತಹಸೀಲ್ದಾರ್ ಪರುಸಪ್ಪ ಕುರುಬರ, ಪೌರಾಯುಕ್ತ ಹರೀಶ್, ಬಿಇಒ ಎ.ಕೆ.ನಾಗೇಂದ್ರಪ್ಪ, ಡಿವೈಎಸ್‌ಪಿ ನಾಗರಾಜ್, ನಗರಸಭಾ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ರಿಯಾಜ್ ಅಹಮದ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಸಿದ್ದಬಸಪ್ಪ, ಡಾ. ಸಂಜಯ್, ಡಾ. ಅರವಿಂದ್, ಚನ್ನಪ್ಪ, ಬಿ.ಟಿ.ನಾಗರಾಜ್, ಬಿ.ಕೆ.ಶಿವಕುಮಾರ್, ಮಣಿಶೇಖರ್, ರವಿಕುಮಾರ್ ಇತರರಿದ್ದರು. ವಿವಿಧ ಸಂಘ ಸಂಸ್ಥೆಯ ಮುಖಂಡರು ಶಾಸಕ ಸಂಗಮೇಶ್ವರ್ ಅವರನ್ನು ಸನ್ಮಾನಿಸಿದರು.
ಕಾಂಗ್ರೆಸ್ ಸರ್ಕಾರ ಅಕಾರಕ್ಕೆ ಬಂದರೆ ಮಳೆ ಬರುವುದಿಲ್ಲ, ಜಲಾಶಯ ತುಂಬುವುದಿಲ್ಲ ಎಂದು ಟೀಕಿಸುವವರಿಗೆ ಪ್ರಕೃತಿಯೇ ಉತ್ತರ ನೀಡಿದೆ. ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಕಾರದಲ್ಲಿದ್ದಾರೆ. ಎಲ್ಲಾ ಜಲಾಶಯಗಳು ತುಂಬಿವೆ.
ಬಿ.ಕೆ.ಮೋಹನ್, ನಗರಸಭೆ ಸದಸ್ಯ