ಜನತಾ ವೆಂಟಿಲೇಟರ್ ಸಿದ್ಧಪಡಿಸಿದ ಪ್ರಾಧ್ಯಾಪಕ

8 vikram 1
Published on

ಧಾರವಾಡ: ಕರೊನಾ ವೈರಸ್ ಕಾರಣದಿಂದ ಕೃತಕ ಉಸಿರಾಟ ಒದಗಿಸುವ ವೆಂಟಿಲೇಟರ್​ಗಳು ಎಲ್ಲೆಡೆ ಅಗತ್ಯವಾಗಿವೆ. ಆದರೆ, ಸಾಕಷ್ಟು ಲಭ್ಯತೆ ಇಲ್ಲ. ಹೀಗಾಗಿ ಧಾರವಾಡ ಎಸ್​ಡಿಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ವಿಶಿಷ್ಟ ವೆಂಟಿಲೇಟರ್ ಸಿದ್ಧಪಡಿಸಿದ್ದಾರೆ.

ಬೃಹತ್ ಆಸ್ಪತ್ರೆಗಳಲ್ಲಿನ ಅತ್ಯಾಧುನಿಕ ತಂತ್ರಜ್ಞಾನದ ವೆಂಟಿಲೇಟರ್​ನಂತೆ ಇದಾಗದಿದ್ದರೂ ಉಸಿರಾಟದ ಸಮಸ್ಯೆಯಿಂದ ತೊಂದರೆಯಲ್ಲಿರುವ ವ್ಯಕ್ತಿಗೆ ಆಸರೆಯಾಗಲಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಡಾ. ಎಂ.ಆರ್. ಕಪ್ಪಾಳಿ ಅವರು ಇದನ್ನು ವಿನ್ಯಾಸಗೊಳಿಸಿದ್ದು, ಜನಾತಾ ವೆಂಟಿಲೇಟರ್ ಎಂದು ಹೆಸರಿಟ್ಟಿದ್ದಾರೆ.

ಯಾಂತ್ರಿಕವಾಗಿ ಉಸಿರಾಟ ಮಾಡಿಸಲು ಬಳಸುವ ಉಪಕರಣವೇ ವೆಂಟಿಲೇಟರ್. ಸಾಮಾನ್ಯವಾಗಿ ಇವು ಯಾಂತ್ರಿಕವಾಗಿರುತ್ತವೆ. ಆದರೆ, ಇವರು ತಯಾರಿಸಿದ ಉಪಕರಣ ಯಾಂತ್ರಿಕ ಹಾಗೂ ಕೈಯಿಂದ ತಿರುಗಿಸಿ ಬಳಸುಸುವಂತಿದೆ. ಇಲ್ಲಿ ಒಂದು ಗಾಳಿ ಚೀಲ (ಅಂಬು ಬ್ಯಾಗ್ ಎಂದು ವೈದ್ಯಕೀಯ ಭಾಷೆ) ಇದೆ. ಈ ಚೀಲವನ್ನು ರೋಗಿಯ ಮೂಗಿಗೆ ಜೋಡಿಸಿರುತ್ತಾರೆ. ಚೀಲ ಒತ್ತಿದಾಗ ಶುದ್ಧ ಗಾಳಿ ರೋಗಿಯ ಶ್ವಾಸಕೋಶಕ್ಕೆ ಹೋಗುತ್ತದೆ. ಒತ್ತಡ ತೆಗೆದಾಗ ಗಾಳಿ ಹೊರ ಹೋಗುತ್ತದೆ. ಕೈಯಿಂದಲೇ ಗಾಳಿ ಚೀಲ ಒತ್ತಬಹುದು. ಆದರೆ, ತುಂಬ ಹೊತ್ತು ಸಾಧ್ಯವಾಗದು. ಹೀಗಾಗಿ ವಿದ್ಯುತ್ ಮೋಟಾರು, ಕಾಂಪ್ರೆಸ್ಸರ್​ನಂತಹ ವಿಧಾನ ಬಳಸಲಾಗಿದೆ.

ಡಾ. ಕಪ್ಪಾಳಿ ಅವರ ನೇತೃತ್ವದಲ್ಲಿ ಮೆಕಾನಿಕ್ ಬಿ.ಬಿ. ಬರ್ಗೆ, ಎಂ.ಡಿ. ಬಡಿಗೇರ, ಕುಶಲ ಸಹಾಯಕ ಅಶೋಕ ಗಾಳಿ, ವಿದ್ಯಾರ್ಥಿಗಳಾದ ಚಿನ್ಮಯ ಘಳಗಿ, ಜಿ.ಬಿ. ಕೊಪ್ಪದ, ಯುವರಾಜ ದೇವಾಡಿಗ ಹಾಗೂ ನೀಲಪ್ಪ ಕೊಳಲ ಸಹಾಯಕರಾಗಿ ಕೆಲಸ ಮಾಡಿದ್ದಾರೆ.

ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮತ್ತು ಅಭಿಯಾಂತ್ರಿಕ ಕಾಲೇಜಿನಲ್ಲಿ ಶುಕ್ರವಾರ ಜನತಾ ವೆಂಟಿಲೇಟರ್ ಪ್ರಾತ್ಯಕ್ಷಿಕೆ ನಡೆಸಿ ಚಾಲನೆ ನೀಡಲಾಯಿತು. ಎಸ್​ಡಿಎಂ ಸಂಸ್ಥೆ ಕಾರ್ಯದರ್ಶಿ ಜೀವಂಧರ ಕುಮಾರ, ಪ್ರಾಚಾರ್ಯ ಡಾ. ಕೆ. ಗೋಪಿನಾಥ, ಡಾ. ಎಂ.ಆರ್. ಕಪ್ಪಾಳಿ, ಡಾ. ಕಿರಣ ಹೆಗಡೆ, ಡಾ. ಗುಣಶೀಲ, ಪ್ರೊ. ವಿ.ಕೆ. ಪರ್ವತಿ, ಡಾ. ಜಿ.ಡಿ. ಕಮಲಾಪುರ, ಇತರರು ಇದ್ದರು.

ಆಸ್ಪತ್ರೆಗಳಿಗೆ ವೆಂಟಿಲೇಟರ್​ಗಳನ್ನು ಸಿದ್ಧಪಡಿಸಲು ಅನೇಕ ಕಂಪನಿಗಳಿವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಏಕಾಏಕಿ ವೆಂಟಿಲೇಟರ್ ಸಿಗುವುದು ಅಸಾಧ್ಯ. ಹೀಗಾಗಿ ಲಾಕ್​ಡೌನ್ ಸಂದರ್ಭದಲ್ಲಿ ಜನತಾ ವೆಂಟಿಲೇಟರ್ ವಿನ್ಯಾಸಗೊಳಿಸಲಾಗಿದೆ. ಇದಕ್ಕೆ 7 ಸಾವಿರ ರೂ. ವೆಚ್ಚವಾಗಿದ್ದು ಇನ್ನಷ್ಟು ಅಭಿವೃದ್ಧಿಗೊಳಿಸಿದರೆ ಇನ್ನೂ ಕಡಿಮೆ ವೆಚ್ಚ ತಗುಲಬಹುದು. ----ಡಾ. ಕಪ್ಪಾಳಿ, ಜನತಾ ವೆಂಟಿಲೇಟರ್ ಸೃಷ್ಟಿಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net