

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ನವೀಕರಣಗೊಳಿಸಲು ಉದ್ದೇಶಿಸಿರುವ ಇಲ್ಲಿಯ ಜನತಾ ಬಜಾರ್ ಕಟ್ಟಡವನ್ನು ನ. 25ರಿಂದ ನೆಲಸಮಗೊಳಿಸಲು ತೀರ್ವನಿಸಲಾಗಿದೆ.
ಹು-ಧಾ ಸ್ಮಾರ್ಟ್ಸಿಟಿ ಕಂಪನಿ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಮಂಗಳವಾರ ಕರೆದಿದ್ದ ಜನತಾ ಬಜಾರ್ ಚಿಕ್ಕ ವರ್ತಕರ ಸಂಘದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಜನತಾ ಬಜಾರ್ನಲ್ಲಿಯೇ ವ್ಯಾಪಾರ ನಡೆಸುತ್ತಿರುವವರಿಗೆ ನೂತನ ಕಟ್ಟಡದಲ್ಲಿ ಸ್ಥಳಾವಕಾಶ ನೀಡಲು ಆದ್ಯತೆ ನೀಡಬೇಕು. ಈ ಕುರಿತ ಆದೇಶವನ್ನು ಲಿಖಿತ ರೂಪದಲ್ಲಿ ನೀಡಬೇಕು. ಪರ್ಯಾಯ ವ್ಯವಸ್ಥೆಗೆ ಮಾಡಿರುವ ಸ್ಥಳಾವಕಾಶವನ್ನು ಇನ್ನೂ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಸಂಘದ ಪದಾಧಿಕಾರಿಗಳು ಇಟ್ಟಿದ್ದಾರೆ.
40-50 ವರ್ಷಗಳಿಂದ ಜನತಾ ಬಜಾರ್ನಲ್ಲಿ ವ್ಯಾಪಾರ ಮಾಡುತ್ತಿರುವವರನ್ನು ಬೀದಿಬದಿ ವ್ಯಾಪಾರಸ್ಥರೆಂದು ಪರಿಗಣಿಸುವುದಕ್ಕೂ ಸಂಘದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನತಾ ಬಜಾರ್ ಕಟ್ಟಡ ನೆಲಸಮಗೊಳಿಸುತ್ತಿರುವುದರಿಂದ ಈಗಾಗಲೇ ಮಾಡಿರುವ ಪರ್ಯಾಯ ಜಾಗಕ್ಕೆ ಸ್ಥಳಾಂತರಗೊಳ್ಳಲು ವ್ಯಾಪಾರಸ್ಥರು ಸಿದ್ಧತೆ ಮಾಡಿಕೊಳ್ಳುವಂತೆ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಸೂಚಿಸಿದ್ದಾರೆ. ಈ ಕುರಿತು ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ.
ಹು-ಧಾ ಸ್ಮಾರ್ಟ್ಸಿಟಿ ಕಂಪನಿ ವಿಶೇಷ ಅಧಿಕಾರಿ ಎಸ್.ಎಚ್. ನರೇಗಲ್, ಪಾಲಿಕೆ ವಲಯ 9ರ ಸಹಾಯಕ ಆಯುಕ್ತ ಮನೋಹರ, ಸಂಘದ ಗೌರವಾಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ, ಅಧ್ಯಕ್ಷ ಅಬ್ದುಲ್ವುಹ್ಮದ್ ರಫಿಕ್, ನಾರಾಯಣ ಮುದ್ದಣವರ, ರಾಜು ವಾಲ್ಮೀಕಿ, ಹೀರಾ ಬದ್ದಿ, ನರಸಿಂಹಸಾ ಪೂಜಾರ ಹಾಗೂ ಇನ್ನಿತರ ವ್ಯಾಪಾರಸ್ಥರು ಸಭೆಯಲ್ಲಿದ್ದರು.