ಜನತಾ ಬಜಾರ್, ಗಣೇಶಪೇಟ ಮಳಿಗೆ ಇ-ಹರಾಜು

paalike gb
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಸ್ಮಾರ್ಟ್​ಸಿಟಿ ಅನುದಾನದಲ್ಲಿ ಜನತಾ ಬಜಾರ್ ಮಾರುಕಟ್ಟೆ ಪ್ರದೇಶದಲ್ಲಿ ನಿರ್ವಿುಸಿದ ವಾಣಿಜ್ಯ ಸಂಕೀರ್ಣ ಹಾಗೂ ಗಣೇಶಪೇಟ ಮೀನು ಮಾರುಕಟ್ಟೆ ಸಂಕೀರ್ಣದ ಮಳಿಗೆಗಳು ಮತ್ತು ಪಾಲಿಕೆ ಒಡೆತನ 1540 ವಾಣಿಜ್ಯ ಮಳಿಗೆಗಳನ್ನು ಇ-ಹರಾಜು ಮೂಲಕ ಹಂಚಿಕೆ ಮಾಡಲು ಸರ್ಕಾರದ ನಿರ್ದೇಶನ ಇರುವುದನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬಹಿರಂಗಕ್ಕೆ ಬಂದಿತು. ಇದರಿಂದ ಮಳಿಗೆಗಳಲ್ಲಿ ಮೊದಲಿದ್ದ ವ್ಯಾಪಾರಿಗಳಿಗೆ ಅನ್ಯಾಯವಾಗಲಿದೆ ಎಂದು ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿನ ಪಾಲಿಕೆ ಸಭಾಭವನದಲ್ಲಿ ಮಂಗಳವಾರ ಕರೆದ ಸಭೆಯ ಶೂನ್ಯ ವೇಳೆಯಲ್ಲಿ ಈ ಕುರಿತು ಕಾಂಗ್ರೆಸ್​ನ ಸುವರ್ಣ ಕಲ್ಲಕುಂಟ್ಲ ವಿಷಯ ಪ್ರಸ್ತಾಪಿಸಿದರು. ತೆರವುಗೊಳಿಸುವ ಪೂರ್ವ ಇದ್ದ ವ್ಯಾಪಾರಿಗಳಿಗೆ ಜನತಾ ಬಜಾರ್ ವಾಣಿಜ್ಯ ಸಂಕೀರ್ಣ ಹಾಗೂ ಗಣೇಶಪೇಟ ಮೀನು ಮಾರುಕಟ್ಟೆ ಸಂಕೀರ್ಣದ ಮಳಿಗೆಗಳನ್ನು ಹಂಚಿಕೆ ಮಾಡುವ ಬಗ್ಗೆ ಸರ್ಕಾರಕ್ಕೆ 3 ಬಾರಿ ಪ್ರಸ್ತಾವನೆ ಸಲ್ಲಿಸಿದ್ದರೂ ಮಾನ್ಯ ಮಾಡಿಲ್ಲ. 2019ರ ಮಾರ್ಗಸೂಚಿ ಪ್ರಕಾರ ಮುಕ್ತ ಹರಾಜು (ಇ-ಹರಾಜು) ನಡೆಸಲು ಸರ್ಕಾರ ನಿರ್ದೇಶನ ನೀಡಿದೆ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸಭೆಯ ಗಮನಕ್ಕೆ ತಂದರು.

ವಾಣಿಜ್ಯ ಸಂಕೀರ್ಣ ತೆರವುಗೊಳಿಸುವಾಗ ಹೊಸ ಮಳಿಗೆಗಳನ್ನು ನಿಮಗೆ ಕೊಡುತ್ತೇವೆ ಎಂದು ಅಂದಿನ ವ್ಯಾಪಾರಿಗಳಿಗೆ ಭರವಸೆ ನೀಡಿದ್ದೀರಿ. ಈಗ ಇ-ಹರಾಜು ಮಾಡಿದರೆ ಮೊದಲಿದ್ದ ವ್ಯಾಪಾರಸ್ಥರಿಗೆ ಅನ್ಯಾಯವಾಗುತ್ತದೆ ಎಂದು ಬಿಜೆಪಿಯ ಶಿವು ಮೆಣಸಿನಕಾಯಿ ವಾದಿಸಿದರು. ಇದಕ್ಕೆ ವೀರಣ್ಣ ಸವಡಿ, ಈರೇಶ ಅಂಚಟಗೇರಿ ಧ್ವನಿಗೂಡಿಸಿದರು.

2019ರ ಮಾರ್ಗಸೂಚಿ ಪ್ರಕಾರ ಹರಾಜಿನಲ್ಲಿ ನಿರ್ದಿಷ್ಟ ಮಳಿಗೆಗೆ ಯಾರು ಹೆಚ್ಚಿನ ಮೊತ್ತ ನಮೂದಿಸುತ್ತಾರೋ ಅದಕ್ಕಿಂತ ಶೇ.5 ರಷ್ಟು ಹೆಚ್ಚು ಮೊತ್ತ ನೀಡಿ ಮಳಿಗೆಗಳನ್ನು ಬಾಡಿಗೆ ಹಿಡಿಯಲು ಮೊದಲಿದ್ದ ವ್ಯಾಪಾರಿಗಳಿಗೆ ಅವಕಾಶವಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

ಈ ವೇಳೆ ಮೇಯರ್ ರಾಮಪ್ಪ ಬಡಿಗೇರ, ಒಂದು ತಿಂಗಳೊಳಗೆ ಮಳಿಗೆಗಳನ್ನು ಹಂಚಿಕೆ (ಇ-ಹರಾಜು) ಮಾಡಬೇಕು ಎಂದು ರೂಲಿಂಗ್ ನೀಡಿದರು. ಇದಕ್ಕೆ ಶಿವು ಮೆಣಸಿನಕಾಯಿ ವಿರೋಧ ವ್ಯಕ್ತಪಡಿಸಿದಾಗ, ನಮ್ಮದು ಅದೇ ವಾದ ಇದೆ, ಸರ್ಕಾರಕ್ಕಿಂತ ನಾವು ದೊಡ್ಡವರಲ್ಲ. ಅವರಿಗೆ (ಮೊದಲಿದ್ದ ವ್ಯಾಪಾರಿಗಳಿಗೆ) ಕೊಡಿ ಎಂದು ಹೇಳಬಹುದು ಅಷ್ಟೇ ಎಂದು ಚರ್ಚೆಯನ್ನು ಕೊನೆಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net