ಜನತಾ ದರ್ಶನದಲ್ಲಿ ಸಾಲು ಸಾಲು ಸಮಸ್ಯೆಗಳ ಅನಾವರಣ

ಜನತಾ ದರ್ಶನದಲ್ಲಿ ಸಾಲು ಸಾಲು ಸಮಸ್ಯೆಗಳ ಅನಾವರಣ
Published on

ಹಾಸನ: ರಾಜ್ಯ ಸರ್ಕಾರ ರಾಜ್ಯಾದ್ಯಂತ ಪ್ರತಿ ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಂಡಿರುವ ಜನತಾ ದರ್ಶನ ಕಾರ್ಯಕ್ರಮವು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಪ್ರಯತ್ನ ಎಂದು ಸಂಸದರಾದ ಪ್ರಜ್ವಲ್ ರೇವಣ್ಣ ಶ್ಲಾಘಿಸಿದರು.

ಜಿಲ್ಲಾಡಳಿತದಿಂದ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದಲ್ಲಿ ಜನ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರ ಸಮಸ್ಯೆ ಆಲಿಸಲು ಪ್ರಾರಂಭಿಸಿದರು. ನಂತರ ಬಂದ ಮುಖ್ಯಮಂತ್ರಿಗಳು ಕೂಡ ಈ ಕಾರ್ಯಕ್ರಮವನ್ನು ಮುಂದುವರೆಸಿದ್ದರು. ಈಗಿನ ಸರ್ಕಾರ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾವರ್ಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದ ಉಪಯೋಗ ಪಡೆಯಬೇಕು. ಜನರು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಕೆಲಸ ಬಿಟ್ಟು ಬಂದಿರುತ್ತಾರೆ. ಆದ್ದರಿಂದ ಸಣ್ಣ-ಪುಟ್ಟ ಸಮಸ್ಯೆಯನ್ನು ಸ್ಥಳದಲ್ಲೇ ಬಗೆಹರಿಸಿದರೆ ಉತ್ತಮ. ಸಮಸ್ಯೆ ಆಗದಂತೆ ತಡೆಯುವುದು ಕಷ್ಟ. ಆದರೆ ಸಮಸ್ಯೆ ಎದುರಾದಾಗದ ಅದನ್ನು ಬಗೆಹರಿಸುವುದು ಮುಖ್ಯ. ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಸಾರ್ವಜನಿಕರಿಗೆ ಸ್ಪಂದಿಸಿ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರ ಕಾರ್ಯವೈಖರಿ ಪ್ರಶಂಸಿಸಿದರು.

ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳೇ ಹೆಚ್ಚು: ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಇಂದಿನಿಂದ ಜನತಾ ದರ್ಶನ ಆರಂಭಿಸಲಾಗಿದೆ. ಸಾಕಷ್ಟು ಜನರು ಸಮಸ್ಯೆ ಹೇಳಿಕೊಳ್ಳಲು ಬಂದಿದ್ದಾರೆ. ಎಲ್ಲರ ಸಮಸ್ಯೆಗಳನ್ನು ಆಲಿಸುತ್ತಿದ್ದೇವೆ. ಪ್ರತಿತಿಂಗಳು ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹಾಗೂ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಾಲೂಕುಗಳಲ್ಲಿ ಜನತಾ ದರ್ಶನ ನಡೆಯಲಿದೆ ಎಂದು ತಿಳಿಸಿದರು.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ಆಹವಾಲುಗಳು ಬಂದಿವೆ. ಬಂದಂತಹ ಅರ್ಜಿಗಳನ್ನು ಐಪಿಜಿಆರ್‌ಎಸ್ ಪೋರ್ಟಲ್‌ನಲ್ಲಿ ನೋಂದಣಿ ಮಾಲಾಗುತ್ತದೆ. ಇದರಿಂದ ಅರ್ಜಿಯ ಸ್ಥಿತಿಗತಿ ತಿಳಿಯುವುದರ ಜತೆಗೆ ಇತ್ಯರ್ಥಗೊಳಿಸಲು ಸಾಧ್ಯವಾಗುತ್ತದೆ. ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಸಾಧ್ಯವಿಲ್ಲ. ದಾಖಲೆಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ಪರಿಹರಿಸುವ ಕೆಲಸ ಮಾಡುತ್ತೇವೆ. ಈ ಜನತಾ ದರ್ಶನದಲ್ಲಿ ಸರಿಸುಮಾರು 500ಕ್ಕೂ ಹೆಚ್ಚು ಆಹವಾಲುಗಳು ಬಂದಿವೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತಿ ಸಿಇಒ ಬಿ.ಆರ್. ಪೂರ್ಣಿಮಾ ಅವರು ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನರೇಗಾ ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡಲು ಕೊಳಚೆ ನೀರನ್ನು ಚರಂಡಿಗೆ ಹರಿಯಬಿಡದಂತೆ ಗಮನಹರಿಸಿ ಲಭ್ಯವಿರುವ ಸ್ಥಳದಲ್ಲಿ ಇಂಗು ಗುಂಡಿಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.

ಜಿಲ್ಲೆಯಲ್ಲಿರುವ 264 ಗಾಮ ಪಂಚಾಯಿತಿಗಳಲ್ಲೂ ತ್ರಿಚಕ್ರ ವಾಹನಗಳಿದ್ದು, ಮನೆಗಳಿಂದ ಕಸವನ್ನು ಒಣ ಕಸ ಹಾಗೂ ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡುವಂತೆ ತಿಳಿಸಿದ ಅವರು ಸರ್ಕಾರದ ವಿವಿಧ ಸವಲತ್ತುಗಳನ್ನು ಬಳಸಿಕೊಂಡು ಗಾಮೀಣಾಭಿವೃದ್ಧಿಗೆ ಒತ್ತು ನೀಡುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ, ನಗರಸಭೆ ಅಧ್ಯಕ್ಷ ಆರ್. ಮೋಹನ್, ಡಿಎಫ್‌ಒ ಮೋಹನ್ ಕುಮಾರ್, ಹುಡಾ ಆಯುಕ್ತ ಚಂದ್ರಶೇಖರ್, ನಗರಸಭೆ ಸದಸ್ಯ ಸತೀಶ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಅರ್ಜಿ ನೊಂದಣಿಗೆ 8 ಕೌಂಟರ್

ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ. ಸಿಇಒ ಹಾಗೂ ಉಪವಿಭಾಗಾಧಿಕಾರಿಗಳು ಜನರ ಸಮಸ್ಯೆ ಆಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡುತ್ತಿದ್ದರು. ಬಳಿಕ ಅರ್ಜಿಗಳನ್ನು ಐಪಿಜಿಆರ್‌ಎಸ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಬೇಕಿರುವ ಹಿನ್ನೆಲೆ ನೂಕುನುಗ್ಗಲು ಉಂಟಾಗದಂತೆ 8 ಕೌಂಟರ್‌ಗಳನ್ನು ತೆರೆದು ಅರ್ಜಿಯನ್ನು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಸಲಾಗಿತ್ತು.

ತರಹೇವಾರಿ ಸಮಸ್ಯೆ ಹೊತ್ತು ತಂದ ಜನರು

ಜಿಲ್ಲೆಯಲ್ಲಿ ನಡೆದ ಪ್ರಥಮ ಜನತಾ ದರ್ಶನಕ್ಕೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ನೂರಾರು ಮಂದಿ ನಾನಾ ಸಮಸ್ಯೆಗಳನ್ನು ಹೊತ್ತು ತಂದಿದ್ದರು. ಅವುಗಳಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳೆ ಹೆಚ್ಚು ಕಂಡುಬಂದವು. ಉಳಿದಂತೆ ವಸತಿ, ಪೊಲೀಸ್, ರಸ್ತೆ, ಕಾಡಾನೆ, ಎಚ್‌ಆರ್‌ಪಿ, ಬಿಪಿಎಲ್ ಕಾರ್ಡ್, ಜಾಗ ಒತ್ತುವರಿ, ಗೃಹ ಲಕ್ಷ್ಮಿ, ದುರಸ್ತಿ, ಖಾತೆ, ಪಹಣಿ ಹಾಗೂ ವಿವಿಧ ಅಭಿವೃದ್ಧಿ ನಿಗಮಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಜನರು ಅಳಲು ತೋಡಿಕೊಂಡರು. ಸಂಜೆ 5 ಗಂಟೆವರೆಗೆ ಒಟ್ಟು 442 ಅರ್ಜಿಗಳು ನೋಂದಣಿಯಾದವು.

ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ

ಜನತಾ ದರ್ಶನಕ್ಕೆ ಗೈರಾಗಿದ್ದ ಅಧಿಕಾರಿಗಳ ವಿರುದ್ಧ ಗರಂ ಆದ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಅಧಿಕಾರಿಗಳೇನು ಮೇಲಿಂದ ಇಳಿದು ಬಂದಿಲ್ಲ. ಗೈರಾಗಿರುವ ಎಲ್ಲಾ ಅಧಿಕಾರಿಗಳಿಗೂ ನೋಟಿಸ್ ಜಾರಿ ಮಾಡಿ ಹಾಗೂ ಒಂದು ದಿನದ ವೇತನವನ್ನು ಕಡಿತಗೊಳಿಸವಂತೆ ಸೂಚನೆ ನೀಡಿದರು.

ಸಾಲ ಮನ್ನಾ ಮಾಡುವಂತೆ ಮನವಿ

ಜನತಾ ದರ್ಶನಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬರು ನಾನು ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಸಾಲ ಪಡೆದುಕೊಂಡಿದ್ದೇನೆ. ಈಗ ತೀವ್ರ ಸಂಕಷ್ಟದ ಪರಿಸ್ಥಿಯಲ್ಲಿದ್ದು ಸಾಲ ತೀರಿಸಲು ಆಗುತ್ತಿಲ್ಲ. ಆದ್ದರಿಂದ ಸಾಲ ಮನ್ನಾ ಮಾಡುವಂತೆ ಅಳಲು ತೋಡಿಕೊಂಡರು. ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಸಾಲ ಮನ್ನಾ ಮಾಡಲು ಅವಕಾಶವಿಲ್ಲ ಎಂದು ಸಮಾಧಾನವಾಗಿಯೇ ಉತ್ತರಿಸಿದರಲ್ಲದೆ, ಸಾಲ ಪಡೆದ ನಂತರ ನಿಗದಿಪಡಿಸಿದ ಕಂತುಗಳನ್ನು ಪಾವತಿ ಮಾಡುವ ಬಗ್ಗೆ ಗಮನಹರಿಸಬೇಕು ಎಂದು ಕಿವಿ ಮಾತು ಹೇಳಿದರು.

ಶಾಸಕರಿಂದ ಮನವಿ ಸಲ್ಲಿಕೆ

ಶಾಸಕರಾದ ಎ.ಮಂಜು ಅವರು ಜನರ ಸರತಿ ಸಾಲಿನಲ್ಲಿ ನಿಂತು ಜಿಲ್ಲಾಧಿಕಾರಿಯವರಿಗೆ ಅರಸೀಕಟ್ಟೆ ಅಮ್ಮನವರ ದೇವಸ್ಥಾನಕ್ಕೆ ಸಂಬಂಧಿಸಿದ ಸಮಿತಿ ಅವ್ಯವಹಾರ ಕುರಿತು ಮನವಿ ಸಲ್ಲಿಸಿ ಕಾನೂನು ರಿತ್ಯಾ ಪರಿಹರಿಸಲು ಮನವಿ ಮಾಡಿದರು.

ಸಮಸ್ಯೆ ಹೇಳಿಕೊಂಡ ಎಚ್.ಡಿ. ರೇವಣ್ಣ

ಜನತಾ ದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಎಚ್.ಡಿ. ರೇವಣ್ಣ ಅವರು ಜಿಲ್ಲೆಯ ಹಲವು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಜಿಲ್ಲೆಯಲ್ಲಿ 1.05 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಗಿ, 6 ಸಾವಿರ ಹೆಕ್ಟೇರ್ ಪ್ರದೇಶದ ಆಲೂಗೆಡ್ಡೆ, ಶುಂಠಿ, ಮುಸುಕಿನ ಜೋಳ 1 ಲಕ್ಷ ಹೆಕ್ಟೇರ್ ಸೇರಿ ಒಟ್ಟು 2.15 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಸಂಪೂರ್ಣ ನಾಶವಾಗಿದೆ. ಸೇವಂತಿ ಹೂವಿಗೆ ಬೆಲೆ ಇಲ್ಲದೆ ರೈತರು ಬೆಳೆ ನಾಶ ಮಾಡುವಂತಹ ದುಸ್ಥಿತಿ ಎದುರಾಗಿದೆ. ಇಂತಹ ರೈತರಿಗೆ ನ್ಯಾಯಯುತವಾಗಿ ಪರಿಹಾರ ಸಿಗಬೇಕು. ಹೀಗಾಗಿ ಬೆಳೆ ನಷ್ಟವಾಗಿರುವ ರೈತರ ಜಮೀನಿಗೆ ಹೋಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ. ನಾನು ಕೂಡ ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡುತ್ತೇನೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಗೈರು

ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನತಾ ದರ್ಶನ ನಡೆಯಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದರು. ಆದರೆ, ಹಾಸನದಲ್ಲಿ ನಡೆದ ಮೊದಲ ಜನತಾ ದರ್ಶನ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ ಅವರು ಗೈರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net