ಜನತಾ ಜಲಧಾರೆ ಪಕ್ಷ ಗೆಲುವಿಗೆ ಸಹಕಾರಿ : ತಾಲೂಕು ಅಧ್ಯಕ್ಷೆ ಕುರ್ಕಿರಾಜೇಶ್ವರಿ ಅಭಿಮತ

2
Published on

ಕೋಲಾರ: ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಜಾರಿಗಾಗಿ ಜೆಡಿಎಸ್​ ಹಮ್ಮಿಕೊಂಡಿರುವ ಜನತಾ ಜಲಧಾರೆ ಯಾತ್ರೆಯು ಏ.22ರಂದು ಕೋಲಾರ ವಿಧಾನಸಭಾ ಕ್ಷೇತ್ರ ಪ್ರವೇಶಿಸಲಿದೆ ಎಂದು ಜೆಡಿಎಸ್​ ತಾಲೂಕು ಅಧ್ಯಕ್ಷೆ ಕುರ್ಕಿರಾಜೇಶ್ವರಿ ತಿಳಿಸಿದರು.

ನಗರದ ಪಕ್ಷದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕರ್ತರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ, ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಮತ್ತು ಮುಖಂಡ ಸಿ.ಎಂ ಇಬ್ರಾಹಿಂ ನೇತೃತ್ವದಲ್ಲಿ ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಸಜ್ಜುಗೊಳ್ಳಬೇಕಿದ್ದು, ಜನತಾ ಜಲಧಾರೆ ಕಾರ್ಯಕ್ರಮ ಇದಕ್ಕೆ ಸಹಕಾರಿಯಾಗಲಿದೆ. ಜಲಧಾರೆ ರಥ ಸಂಚರಿಸುವಾಗ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮನವಿ ಮಾಡಿದರು.

ಜಲಧಾರೆ ಯಾತ್ರೆಯು ವಕ್ಕಲೇರಿ ಮೂಲಕ ಕೋಲಾರ ಕ್ಷೇತ್ರ ಪ್ರವೇಶಿಸಲಿದ್ದು, ಕಲಾತಂಡಗಳ ಮೂಲಕ ಯಾತ್ರೆಗೆ ಭವ್ಯ ಸ್ವಾಗತ ಕೋರಲಾಗುವುದು. ಹಬ್ಬದ ವಾತಾವರಣ ಸೃಷ್ಟಿಸಿ ಎಪಿಎಂಸಿ, ಅಂತರಗಂಗೆ ಸೇರಿ ನಗರದೆಲ್ಲೆಡೆ ರಥ ಸಂಚರಿಸಲಿದೆ. ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಡಿ.ಕೆ ರಮೇಶ್​ ಮಾತನಾಡಿ, ಜಿಲ್ಲೆಯಲ್ಲಿ ಶಾಶ್ವತ ನೀರಿನ ಮೂಲಗಳಿಲ್ಲ. ಜೆಡಿಎಸ್​ ಜಲಧಾರೆ ಮೂಲಕ ಶಾಶ್ವತ ನೀರನ್ನೊದಗಿಸಲು ಯತ್ನಿಸುತ್ತಿದೆ. ಬರದ ನಾಡಿಗೆ ನೀರನ್ನೊದಗಿಸುವುದರ ಜತೆಗೆ ಜಿಲ್ಲೆ ಮತ್ತು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಪಕ್ಷ ಶ್ರಮಿಸಲಿದೆ ಎಂದರು.

ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್​, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ರತ್ನಮ್ಮ, ಮುಖಂಡರಾದ ವೆಂಕಟಾಚಲಪತಿಗೌಡ, ತಿರುಮಲೇಶ್​, ಬಹದ್ದೂರ್​, ಸುಬ್ರಮಣಿ, ವೆಂಕಟೇಶಪತಿ, ಅಥಾವುಲ್ಲಾ ಇತರರಿದ್ದರು.

ಗೊಂದಲ ಸೃಷ್ಟಿಸಬೇಡಿ: ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ತಿಳಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದಾಗ ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಅವರು, ಜಲಧಾರೆ ಕಾರ್ಯಕ್ರಮವನ್ನು ಯಶಸ್ವಿ ಮಾಡುವುದಷ್ಟೇ ನಮ್ಮ ಮುಂದಿರುವ ಕೆಲಸ. ಅಭ್ಯರ್ಥಿ ಆಯ್ಕೆ ವಿಚಾರ ಪಕ್ಷದ ಹೈಕಮಾಂಡ್​ಗೆ ಬಿಟ್ಟಿದ್ದು, ಈ ವಿಚಾರದಲ್ಲಿ ಗೊಂದಲ ಸೃಷ್ಟಿಸಬೇಡಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net