ಜನಜೀವನ ಮೇಲೆ ಕರೊನಾ ಕರಿನೆರಳು

YADGIRI 01
Published on

ಯಾದಗಿರಿ: ಮಹಾಮಾರಿ ಕರೊನಾ ವೈರಸ್ನಿಂದ ಗಡಿ ಜಿಲ್ಲೆ ಜನತೆ ಆತಂಕದಲ್ಲಿದ್ದು, ಎರಡು ದಿನಗಳಿಂದ ಯಾವುದೇ ಚಟುವಟಿಕೆ ಇಲ್ಲದೆ ಸ್ತಬ್ಧಗೊಂಡಿದೆ.
ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದು, ಎಲ್ಲೆಡೆ ಕರೊನಾ ಚರ್ಚೆ ನಡೆದಿದೆ. ಪಕ್ಕದ ಕಲಬುರಗಿಯಲ್ಲಿ ವೈರಸ್ಗೆ ವೃದ್ಧ ಬಲಿಯಾದ ಸುದ್ದಿ ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಮದುವೆ, ಮುಂಜಿ ಸೇರಿ ಮಂಗಲ ಕಾರ್ಯಗಳನ್ನು ಕೆಲದಿನ ಮುಂದೂಡಲಾಗಿದ್ದು, ಜಾತ್ರೆಗಲ್ಲೂ ಸಂಭ್ರಮ ಕಾಣದಾಗಿದೆ.

ಇತ್ತ ಜಿಲ್ಲಾಡಳಿತ ಮಹಾಮಾರಿ ಹರಡದಂತೆ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದು, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ನೇತೃತ್ವದ ತಂಡ ಜನಜಾಗೃತಿ ಮೂಡಿಸುತ್ತಿದೆ. ವಿಶೇಷವಾಗಿ ವಿದೇಶಗಳಿಂದ ಬರುವವರ ಮೇಲೆ ನಿಗಾ ವಹಿಸಿರುವ ಜಿಲ್ಲಾಡಳಿತ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಡುತ್ತಿದೆ.

ತೆಲಂಗಾಣದ ಹೈದರಾಬಾದ್ ಜಿಲ್ಲೆಗೆ ಸಮೀಪ ಇದ್ದುದ್ದರಿಂದ ಈ ಭಾಗದಿಂದ ಪ್ರತಿನಿತ್ಯ ನೂರಾರು ಜನ ಕೆಲಸ ಕಾರ್ಯಗಳಿಗಾಗಿ ತೆರಳುತ್ತಿದ್ದರು. ಆದರೆ ಮೊದಲ ಬಾರಿಗೆ ಹೈದರಾಬಾದ್ ಟೆಕ್ಕಿಯಲ್ಲಿ ಸೋಂಕು ಕಂಡುಬಂದ ಸುದ್ದಿ ತಿಳಿದು ಹೈದರಾಬಾದ್, ಮಹೆಬೂಬನಗರ, ನಾರಾಯಣಪೇಟ ಹೀಗೆ ಅಂತಾರಾಜ್ಯಗಳಿಗೆ ತೆರಳುವುದನ್ನು ನಿಲ್ಲಿಸಿದ್ದಾರೆ.

ಪ್ರಮುಖ ರಸ್ತೆಗಳು, ರೈಲು ನಿಲ್ದಾಣ, ಶಾಪಿಂಗ್ ಕಾಂಪ್ಲೆಕ್ಸ್, ಚಿತ್ರಮಂದಿರ, ಜಿಮ್, ಈಜುಕೊಳಗಳನ್ನು ಮುಚ್ಚುವಂತೆ ಜಿಲ್ಲಾಡಳಿತ ಖಡಕ್ ಸೂಚನೆ ನೀಡಿದ್ದರಿಂದ ಜನತೆ ಅತ್ತ ಮನೆಯೊಳಗೆ ಇರಲಾರದೆ, ಇತ್ತ ಹೊರಗೂ ಬಾರದೆ ಸಂಕಟ ಅನುಭವಿಸುವಂತಾಗಿದೆ. ಒಟ್ಟಾರೆ, ಜನಜೀವನದ ಮೇಲೆ ಪರಿಣಾಮ ಬೀರಿರುವ ಮಹಾಮಾರಿ ಶೀಘ್ರ ತೊಲಗಲಿ ಎಂದು ಜನತೆ ದೇವರಲ್ಲಿ ಮೊರೆ ಹೋಗುತ್ತಿರುವುದು ಸುಳ್ಳಲ್ಲ.

ನಷ್ಟದಲ್ಲಿ ಈಶಾನ್ಯ ಸಾರಿಗೆ ಸಂಸ್ಥೆ: ಗಡಿ ಜಿಲ್ಲೆಯಲ್ಲಿ ಕರೊನಾ ಭೀತಿಯಿಂದಾಗಿ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಯಾದಗಿರಿ ವಿಭಾಗದಿಂದ ಪ್ರತಿನಿತ್ಯ ರಾಜ್ಯಾದ್ಯಂತ 336 ಬಸ್ಗಳು ಕಾರ್ಯಾಚರಣೆ ಮಾಡುತ್ತವೆ. ಆದರೆ ಪ್ರಯಾಣಿಕರ ಸಂಖ್ಯೆ ಕಮ್ಮಿಯಾಗಿದ್ದರಿಂದ ನಾಲ್ಕು ದಿನಗಳಿಂದ 36 ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ಪ್ರತಿನಿತ್ಯ ಸಂಸ್ಥೆಗೆ 6ರಿಂದ 7 ಲಕ್ಷ ರೂ.ನಷ್ಟವಾಗುತ್ತಿದ್ದು, ಇದುವರೆಗೆ ಸುಮಾರು 30 ಲಕ್ಷ ರೂ. ಆದಾಯ ಖೋತಾ ಆಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net