ಜನಜಂಗುಳಿಯಿಂದ ಗ್ರಾಹಕರಿಗೆ ತಲೆನೋವು

04-09kod03
ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿ ಖಾತೆಗೆ ಜಮೆಯಾಗಿರುವ ೨ ಸಾವಿರ ರೂ. ಪಡೆಯಲು ಕೊಡೇಕಲ್‌ನ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ನಿಂತಿರುವ ಮಹಿಳೆಯರು.
Published on

ಕೊಡೇಕಲ್: ಗೃಹಲಕ್ಷ್ಮಿ ಯೋಜನೆಯಡಿ ಖಾತೆಗೆ ಜಮೆಯಾಗಿರುವ ಎರಡು ಸಾವಿರ ರೂ. ಪಡೆಯಲು ಮಹಿಳೆಯರು ಬ್ಯಾಂಕ್‌ಗೆ ಆಗಮಿಸಿದ್ದರಿಂದ ಬ್ಯಾಂಕ್‌ಗಳಲ್ಲಿ ಸೋಮವಾರ ನೂಕು ನುಗ್ಗಲು ಉಂಟಾಯಿತು.

ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿಗೆ ಚಾಲನೆ ದೊರೆತ್ತಿದ್ದು, ಬ್ಯಾಂಕ್‌ಗಳಲ್ಲಿ ಮಹಿಳೆಯ ದಂಡು ತುಂಬಿದ್ದರಿಂದ ಉಳಿದ ಗ್ರಾಹಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಕೊಡೇಕಲ್‌ನ ಕರ್ನಾಟಕ ಗ್ರಾಮೀಣ ಬ್ಯಾಂಕ್, ಕೆನರಾ ಬ್ಯಾಂಕ್, ನಾರಾಯಣಪುರದ ಎಸ್‌ಬಿಐ ಮತ್ತು ರಾಜನಕೋಳೂರನ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳು ಸಂತೆಯಂತೆ ಭಾಸವಾದವು. ಕೆಲವರು ಖಾತೆಗೆ ಜಮೆ ಆಗಿರುವ ಹಣ ಪಡೆಯಲು ಉತ್ಸುಕತೆ ತೋರುತ್ತಿದ್ದರೆ, ಇನ್ನೂ ಕೆಲವರು ನಮ್ಮ ಖಾತೆಗೆ ಇನ್ನೂ ಯಾಕೆ ? ಹಣ ಬಂದಿಲ್ಲ ಚೆಕ್ ಮಾಡಿ ಎಂದು ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು. ಬ್ಯಾಂಕ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರಿಂದ ಕೆಲ ಗ್ರಾಹಕರು ಬಂದ ದಾರಿಗೆ ಸುಂಕವಿಲ್ಲದಂತೆ ಮನೆಗೆ ಹೋದರೆ ಇನ್ನೂ ಕೆಲವರು ಅನಿವಾರ್ಯವಾಗಿ ಕುಳಿತಿದ್ದರು. ಗ್ಯಾರಂಟಿ ಯೋಜನೆ ಹಣ ಪಡೆಯಲು ಮತ್ತು ಮಾಹಿತಿ ನೀಡಲು ಬೇರೆ ಸಮಯ ನಿಗದಿ ಮಾಡಬೇಕು ಎಂದು ಕೆಲ ಗ್ರಾಹಕರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net