

ದೊಡ್ಡಬಳ್ಳಾಪುರ: ಜನರ ಸಮಸ್ಯೆಯನ್ನು ಕೇಳಿ ಪರಿಹರಿಸಲು ಶಾಸಕ ಧೀರಜ್ ಮುನಿರಾಜು ಜನಕ್ಷೇಮ ಸಂಕಲ್ಪ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿದರು.
ಕಸಬಾ ಹೋಬಳಿ ಕೊನಟ್ಟ ಗ್ರಾಪಂ ವ್ಯಾಪ್ತಿಯ ಕೊಡಿಹಳ್ಳಿಯಲ್ಲಿ ತಹಸೀಲ್ದಾರ್ ವಿಭಾವಿದ್ಯಾ ರಾಠೋಡ್ ಮತ್ತು ತಾಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು ಸಮ್ಮುಖದಲ್ಲಿ ವಿನೂತನ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸಭೆಯಲ್ಲಿ ಪ್ರಮುಖವಾಗಿ ನೀರು, ಚರಂಡಿ, ಒತ್ತುವರಿ, ಇ&ಖಾತಾ, ಕೆರೆಗಳ ಉಳಿವು, ಸ್ಮಶಾನ ಉಳಿಸಿ, ಕೃಷಿಗೆ ಸಮರ್ಪಕ ವಿದ್ಯುತ್ ಪೂರೈಕೆ ಹೀಗೆ ಮೂಲ ಸೌಕರ್ಯಗಳ ಬಗ್ಗೆಯೇ ಜನರು ಮನವಿ ಸಲ್ಲಿಸಿದರು.
ಕೊನಟ್ಟದ ರಾಮಾಂಜಿನಪ್ಪ ಮಾತನಾಡಿ, ಊರಿನಲ್ಲಿ ಇ&ಖಾತೆಗಳು ಆಗಬೇಕು, ಸ್ಮಶಾನಗಳು ಒತ್ತುವರಿಯಾಗಿವೆ. ಕೂಡಲೇ ಸರ್ವೇ ಮಾಡಿ ಒತ್ತುವರಿ ತೆರವು ಮಾಡಬೇಕು. ಗ್ರಾಮದಲ್ಲಿ ಸುಸಜ್ಜಿತ ಓವರ್ ಟ್ಯಾಂಕ್ ಇದ್ದರೂ ಪೈಪ್ ಲೈನ್ ಸಂಪರ್ಕ ಇಲ್ಲದಂತಾಗಿದೆ. ಪೈಪ್ಲೈನ್ ಅಳವಡಿಸಿ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರು. ಗ್ರಾಮದ ಪಕ್ಕದಲ್ಲಿ ಖಾಸಗಿ ಕಂಪನಿ ತಲೆ ಎತ್ತುತ್ತಿರುವುದರಿಂದ ಕಾರ್ಮಿಕರಿಂದ ಸೃಜನೆಯಾಗುತ್ತಿರುವ ಮಲಮೂತ್ರವನ್ನು ಊರಿನ ಜಮೀನುಗಳಿಗೆ ಸುರಿಯಲಾಗುತ್ತಿದೆ. ಆಶ್ರಯ ಯೋಜನೆಯಡಿ ಮನೆಗಳನ್ನು ಹಂಚಿಕೆ ಮಾಡಲು ಗ್ರಾಮದಲ್ಲಿನ ಗೋಮಾಳ ಜಮೀನನ್ನು ಕೆಐಎಡಿಬಿಯಿಂದ ಹಸ್ತಾಂತರ ಮಾಡಿಕೊಡಿ ಎಂದರು.
ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ಶಾಸಕ ಧೀರಜ್ ಮುನಿರಾಜು ಹೇಳಿದರು.
ಹೋರಾಟಕ್ಕೆ ನಿಂತರೆ ಜತೆಯಲ್ಲಿರುವೆ ಎಂದ ಶಾಸಕ: ಕೊನಟ್ಟ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಕ್ರಮ ಜರುಗಿಸಲಾಗಿದೆ. ಇಲ್ಲಿನ ಪ್ರೌಢಶಾಲೆ ಅಭಿವೃದ್ಧಿ ಮಾಡಿ ಉತ್ತಮ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದು ಶಾಸಕರು ತಿಳಿಸಿದರು. ಕೊನಟ್ಟ ಗ್ರಾಮ ಪಕ್ಕದ ಸೊಣ್ಣಪ್ಪನಹಳ್ಳಿಯನ್ನೂ ಕೆಐಎಡಿಬಿ ವಶಪಡಿಸಿಕೊಳ್ಳುವ ವದಂತಿ ಹಬ್ಬಿರುವುದನ್ನ ಪ್ರಸ್ತಾಪಿಸಿದ ಗ್ರಾಮಸ್ಥರು, ಕೆಐಎಡಿಬಿ ವಶಕ್ಕೆ ಪಡೆಯದಂತೆ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು. ಜನರು ಹೋರಾಟಕ್ಕೆ ಧುಮುಕಿದರೆ ನಾನೂ ಪ್ರತಿಭಟನೆಯಲ್ಲಿ ಭಾಗಿಯಾಗಿ ಕೆಐಎಡಿಬಿ ವಿರುದ್ಧ ನಿಲ್ಲುತ್ತೇನೆ ಎಂದು ಶಾಸಕರು ಧೈರ್ಯ ತುಂಬಿದರು. ಇಲ್ಲಿನ ಸುತ್ತಮುತ್ತಲಿನ ರೈತರ ಕೃಷಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ, ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯನ್ನು ಡಾಂಬರೀಕರಣ ಮಾಡಿ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಕೆಇಬಿ ಅವರಿಗೆ ಹೇಳಿ ಸರಿಪಡಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಪ್ರತಿ ತಿಂಗಳು ಅಭಿಯಾನ: ತಾಲೂಕಿನ ಜನತೆಯ ಸಮಸ್ಯೆಗಳನ್ನು ಕೇಳಲು ಜನರಿದ್ದಲ್ಲಿಗೇ ತೆರಳಿ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜನೇಮ ಸಂಕಲ್ಪ ಅಭಿಯಾನ ಆರಂಭಿಸಲಾಗಿದೆ. ಈ ಅಭಿಯಾನ ಪ್ರತಿ ತಿಂಗಳು ಒಂದೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರವಾರ ನಡೆಯಲಿದೆ. ಆಯಾ ಪಂಚಾಯಿತಿ ವ್ಯಾಪ್ತಿಯ ಜನತೆ ಭಾಗವಹಸಿ ಅಹವಾಲು ಸಲ್ಲಿಸಬಹುದು. ಅಭಿಯಾನದಲ್ಲಿ ತಾಲೂಕು ಆಡಳಿತ ಭಾಗಿಯಾಗಲಿದೆ.
ಕೆರೆಯಂಗಳದಲ್ಲಿ ಮಣ್ಣು ತೆಗೆದವರ ವಿರುದ್ಧ ಎ್ಐಆರ್: ಗ್ರಾಮಕ್ಕೆ ರಸ್ತೆ ಮಾಡಿಸಬೇಕು, ಆಶ್ರಯ ಯೋಜನೆಯಡಿ ಎಷ್ಟು ಅರ್ಜಿಗಳನ್ನು ಸ್ವೀಕರಿಸಿದ್ದಾರೆ ಎಂಬುದರ ಮಾಹಿತಿ ಇಲ್ಲ. ಕೆರೆಯಂಗಳದಲ್ಲಿ ಮಣ್ಣನ್ನು ತೆಗೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಎಂದು ಲಿಂಗನಹಳ್ಳಿಯ ನಂಜಮರಿಯಣ್ಣ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ವಿಭಾವಿದ್ಯಾ ರಾಠೋಡ್, ಕೆರೆಯಂಗಳದಲ್ಲಿ ಮಣ್ಣು ತೆಗೆದವರ ವಿರುದ್ಧ ಎ್ಐಆರ್ ದಾಖಲು ಮಾಡಲಾಗಿದೆ. ಮುಂದೆ ಅಂತಹ ಪ್ರಕರಣಗಳು ಕಂಡುಬಂದರೆ ನೇರವಾಗಿ ನನಗೆ ತಿಳಿಸಿ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದರು. ಉಳಿದಂತೆ ಗ್ರಾಮಗಳಲ್ಲಿ ಇ&ಖಾತೆಗಳನ್ನು ಮಾಡಿಕೊಡಲು, ಸುಸಜ್ಜಿತ ಉದ್ಯಾನವನ ನಿರ್ಮಾಣ, ಸ್ಮಶಾನಗಳಿಗೆ ಮತ್ತಷ್ಟು ಜಮೀನು ಗುರುತಿಸಿ ಮೀಸಲಿಡಲು ಸಾರ್ವಜನಿಕರು ಆಗ್ರಹಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಮತ್ತು ಪಿಡಿಒಗೆ ತಹಸೀಲ್ದಾರ್ ಸೂಚಿಸಿದರು.