ಜನಕಲ್ಯಾಣ ರಥಯಾತ್ರೆ ಕೋಟೆನಗರಿಗೆ ಇಂದು

Nagaraja
Published on

ಚಿತ್ರದುರ್ಗ: ಉಪ್ಪಾರ ಸಮುದಾಯದ ಜನ ಜಾಗೃತಿಗಾಗಿ ದೇಶಾದ್ಯಂತ ಹಮ್ಮಿಕೊಂಡಿರುವ ಶ್ರೀ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆಯು ಡಿ. 17 ರಂದು ಕೋಟೆನಗರಿಗೆ ಆಗಮಿಸಲಿದೆ.

ಭಾನುವಾರ ಮಧ್ಯಾಹ್ನ 2ಕ್ಕೆ ಯೂನಿಯನ್ ಉದ್ಯಾನದ ಬಳಿ ಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು ಎಂದು ಉಪ್ಪಾರ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಎಸ್.ನಾಗರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆನಂತರ ಕುಂಭಮೇಳ ಹಾಗೂ ಕಲಾತಂಡಗಳೊಂದಿಗೆ ರಥಯಾತ್ರೆ ಮೆರವಣಿಗೆ ಹೊರಟು ನಗರದ ಸಂತೆ ಪೇಟೆ, ಬಿ.ಡಿ.ರಸ್ತೆ, ಮಹಾವೀರ, ವಾಸವಿ, ಗಾಯತ್ರಿ ವೃತ್ತದ ಮಾರ್ಗವಾಗಿ ಸಂಚರಿಸಿ ಉಮಾಪತಿ ಕಲ್ಯಾಣ ಮಂಟಪ ತಲುಪಲಿದೆ. ಅಲ್ಲಿ ಸಮಾವೇಶ ನಡೆಸಲಾಗುವುದು ಎಂದರು.

ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ರಾಜ್ಯದ ಎಲ್ಲ ಜಿಲ್ಲೆಗಳ ಉಪ್ಪಾರ ಸಂಘದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಮುಖಂಡರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ಸುಮಾರು 11 ಕೋಟಿ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜವನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುನ್ನಲೆಗೆ ತರಲು ಬಿಹಾರ ರಾಜ್ಯದಿಂದ ರಥಯಾತ್ರೆ ಕೈಗೊಳ್ಳಲಾಗಿದೆ. ದೆಹಲಿ, ಪಂಜಾಬ್, ಹರಿಯಾಣ, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಸಂಚರಿಸಿ ರಾಜ್ಯಕ್ಕೆ ಆಗಮಿಸಿದೆ ಎಂದು ತಿಳಿಸಿದರು.

ಉಪ್ಪಾರ ಸಮುದಾಯ ಒಗ್ಗೂಡಿಸುವುದು, ಶ್ರೀ ಭಗೀರಥ ಜಯಂತ್ಯುತ್ಸವವನ್ನು ಸರ್ಕಾರದಿಂದಲೇ ದೇಶದ್ಯಾಂತ ಆಚರಿಸುವುದು, ಎಸ್ಸಿ ಅಥವಾ ಎಸ್ಟಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಉದ್ದೇಶದಿಂದ ಹರೀಶ್ ಮೆಹತೊ ಚೌಹಾಣ್ ಮತ್ತು ತಂಡದ ನೇತೃತ್ವದಲ್ಲಿ ಯಾತ್ರೆ ಆರಂಭವಾಗಿದ್ದು, 2024ರ ಫೆಬ್ರವರಿ ವೇಳೆಗೆ ನವದೆಹಲಿಯ ರಾಮಲೀಲಾ ಮೈದಾನ ತಲುಪಲಿದೆ ಎಂದು ಮಾಹಿತಿ ನೀಡಿದರು.

ಉಪ್ಪಾರ ಸಮಾಜದ ಅಧ್ಯಕ್ಷ ಎನ್.ವೀರೇಶ್, ಪ್ರಧಾನ ಕಾರ್ಯದರ್ಶಿ ಎಲ್.ಮಹೇಶ್, ಮುಖಂಡರಾದ ಆರ್.ಮೂರ್ತಿ, ಎಚ್.ಅಜ್ಜಪ್ಪ, ಸಿದ್ದಪ್ಪ, ತಿಪ್ಪೇಸ್ವಾಮಿ, ಬಾಯ್ಲರ್ ರವಿ, ಬಸವರಾಜು, ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net