

ಹಾಸನ: ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರ ಅಧ್ಯಕ್ಷತೆಯಲ್ಲಿ ನಗರ ಸಭೆಯ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ನಡೆದ ಜನಸ್ಪಂದನ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸದಸ್ಯರು ಮತ್ತು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿ ನಗರದ ಸಮಸ್ಯೆಗಳ ಸರಮಾಲೆಯನ್ನು ಸಭೆಗೆ ತೆರೆದಿಟ್ಟರು.
ಸಭೆಯಲ್ಲಿ ಪ್ರಮುಖವಾಗಿ ಜ್ವಲಂತ ಸಮಸ್ಯೆಗಳ ಬಗ್ಗೆ ಹೆಚ್ಚು ಹೆಚ್ಚು ಚರ್ಚೆ ನಡೆಯಿತು. ಸಭೆಯ ಆರಂಭದಿಂದ ಕೊನೆಯವರೆಗೂ ನಗರಸಭೆ ಸದಸ್ಯರು, ಒಂದೆಡೆ ಅಧ್ಯಕ್ಷ-ಉಪಾಧ್ಯಕ್ಷರಿಲ್ಲ, ಮತ್ತೊಂದೆಡೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾದರೆ ನಾವು ಯಾರನ್ನು ಕೇಳಬೇಕು, ನಮಗೆ ಮತದಾರರಿಗೆ ಏನು ಉತ್ತರ ಕೊಡಬೇಕು ಎಂದು ಖಾರವಾಗಿ ಪ್ರಶ್ನಿಸಿದರು.
ಈ ವೇಳೆ ನಗರಸಭೆ ಅಧಿಕಾರಿಗಳ ವಿರುದ್ಧ ಸಿಟ್ಟಾದ ಜಿಲ್ಲಾಧಿಕಾರಿ, ಸಣ್ಣಪುಟ್ಟ ಕೆಲಸವನ್ನೂ ಮಾಡಿಲ್ಲ, ಸಮಸ್ಯೆಯನ್ನೂ ಬಗೆಹರಿಸಿಲ್ಲ ಎಂದರೆ ನೀವು ಏನು ಮಾಡುತ್ತಿದ್ದೀರಿ ಎಂದು ಅಧಿಕಾರಿಗಳ ಗರಂ ಆದರು. ಜಿಲ್ಲೆಯಲ್ಲಿ ಅತಿವೃಷ್ಟಿ ಸಮಸ್ಯೆ, ಡೆಂೆ ಮಹಾಮಾರಿ ಭೀತಿ ಇದೆ. ನಾನಿ ಜಿಲ್ಲಾಧಿಕಾರಿ ಎಲ್ಲವನ್ನೂ ನಾನೇ ಬಂದು ಸಮಸ್ಯೆ ಆಲಿಸಲು ಆಗಲ್ಲ. ಜನರ, ಜನಪ್ರತಿನಿಧಿಗಳ ಸಮಸ್ಯೆ ಬಗೆಹರಿಸಿ ಬೇಡಿಕೆ ಸ್ಪಂದಿಸಿ ಎಂದು ತಾಕೀತು ಮಾಡಿದರು.
ಶಾಸಕ ಎಚ್.ಪಿ.ಸ್ವರೂಪ್ ಅವರು ಮಾತನಾಡಿ, ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಳೆ ಹೆಚ್ಚುತ್ತಿರುವ ಹಿನ್ನಲೆ ಎಲ್ಲೆಂದರಲ್ಲಿ ನೀರು ನಿಲ್ಲುತ್ತಿದ್ದು ಸೊಳ್ಳೆಗಳ ಉತ್ಪತ್ತಿಯಿಂದ ಡೆಂೆ ಹರಡುತ್ತಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಸಾರ್ವಜಿಕರು ಸಮಸ್ಯೆಯನ್ನು ನಿಮ್ಮ ಗಮನಕ್ಕೆ ತಂದರೆ ಅದನ್ನ ಬಗೆಹರಿಸಲಬೇಕು ಎಂದು ಸೂಚನೆ ನೀಡಿದರು.
ಪ್ರಗತಿಪರ ಚಿಂತಕ ಆರ್.ಪಿ.ವೆಂಕಟೇಶ್ ಮೂರ್ತಿ ಅವರು ಮಾತನಾಡಿ, ಸತ್ಯಮಂಗಲ ಕೆರೆ ಆವರಣದಲ್ಲಿ ತ್ಯಾಜ್ಯ ಎಸೆಯುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು. ನಗರ ಸೌಂದರ್ಯ ವೃದ್ಧಿಗೆ ಅಧಿಕಾರಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ ಮತ್ತು ಮಾಜಿ ನಗರಸಭಾ ಸದಸ್ಯ ಪ್ರಕಾಶ್ ಮಾತನಾಡಿ, ಆಶ್ರಯ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ಬಿಲ್ ನೀಡುತ್ತಿಲ್ಲ. ಸ್ಲಂ ಬೋರ್ಡ್ ಅಧಿಕಾರಿಗಳಿಂದ ಭಾರೀ ತೊಂದರೆಯಾಗುತ್ತಿದೆ. ಗುತ್ತಿಗೆದಾರ ಲಂಚ ಕೊಡುತ್ತಿಲ್ಲವೆಂದು ಅನುದಾನ ನೀಡುತ್ತಿಲ್ಲ. ಇಂತಹ ಅಧಿಕಾರಿಗಳು ನಗರಸಭೆ ಲೂಟಿ ಹೊಡೆಯುತ್ತಿದ್ದಾರೆ. ಇವರನ್ನ ಜೈಲಿಗೆ ಕಳುಹಿಸುವವರೆಗೆ ವ್ಯವಸ್ಥೆ ಸುಧಾರಣೆಯಾಗುವುದಿಲ್ಲ. ಬಡವರ ದುಡ್ಡಿಗೆ ಕನ್ನ ಹಾಕಲು ನಾಚಿಕೆ ಆಗುವುದಿಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದಾದ ಬಳಿಕ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಡಿಸಿ, ಈ ಬಗ್ಗೆ ತನಿಖೆ ಮಾಡಿಸಿ ಎಂದು ಸೂಚಿಸಿದರು.
ಜೆಡಿಎಸ್ ಸದಸ್ಯ ಗಿರೀಶ್ ಚನ್ನವಿರಪ್ಪ ಮಾತನಾಡಿ, ಕಾವೇರಿ ನೀರಾವರಿ ನಿಗಮದಿಂದ ಮಹಾರಾಜ ಪಾರ್ಕ್‌ನಲ್ಲಿ ಕಾಮಗಾರಿ ನಡೆದಿದೆ. ಆದರೆ ಇನ್ನೂ ನಗರಸಭೆಗೆ ಹಸ್ತಾಂತರಿಸಿಲ್ಲ.ನಗರದಲ್ಲಿ ಬೀದಿ ಬದಿ ನಾಯಿ ಹಾವಳಿ ಹೆಚ್ಚಿದೆ. ಗುಂಪಾಗಿ ಬರುವ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುತ್ತಿವೆ. ಸಂತಾನ ಹರಣ ಶಸ್ತ್ರಚಿಕಿತ್ಸೆಗಾಗಿ ನಗರಸಭೆ ಟೆಂಡರ್ ಕರೆದೂ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾಚರಣೆ ಕೈಗೊಂಡಿತ್ತು. ಇದುವರೆಗೆ ಕೇವಲ 75 ನಾಯಿಗಳನ್ನು ಮಾತ್ರ ಸೆರೆ ಹಿಡಿದಿದ್ದಾರೆ. ಗುತ್ತಿಗೆದಾರ ನಾಯಿಗಳಿಗೆ ಆಹಾರ ನೀಡಲಿಲ್ಲವೆಂದು ಪ್ರಾಣಿ ದಯಾ ಸಂಘದವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆತ ಕಾಲ್ಕಿತ್ತಿದ್ದಾನೆ. ಹೀಗಾದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಹೇಗೆ ಎಂದು ಪ್ರಶ್ನಿಸಿದರು.
ನಗರಸಭೆ ಇಂಜಿನೀಯರ್ ಸುಜಾತಾ ಅವರು ಕಡತಗಳನ್ನೆಲ್ಲ ತಮ ಬಳಿಯೇ ಇಟ್ಟುಕೊಂಡಿದ್ದಾರೆ. ಅವರು ಸಕಲೇಶಪುರಕ್ಕೆ ವರ್ಗವಾಗಿದ್ದು ಯಾವ ಕೆಲಸಗಳು ಆಗುತ್ತಿಲ್ಲವೆಂದು ಜಿಲ್ಲಾಧಿಕಾರಿ ಗಮನಕ್ಕೆ ಸದಸ್ಯರು ತಂದರು.ನಂತರ ಡಿಸಿ ಮಾತನಾಡಿ, ವರ್ಗಾವಣೆಯಾಗಿ ಸಕಲೇಶಪುರದಲ್ಲಿರುವ ಸುಜಾತಾ ಅವರನ್ನು ಕೂಡಲೇ ಕರೆಸಬೇಕು. ಅವರು ಕಡತಗಳ ಕೊಡಲು ಒಪ್ಪದಿದ್ದರೆ ವಿಡಿಯೋ ಮಾಡಿಕೊಂಡು ಬೀರು ಬೀಗ ಮುರಿದು ಕಡತಗಳ ಪಡೆಯಬೇಕು. ಕರ್ತವ್ಯ ಲೋಪ ಆಧಾರದಡಿ ಸುಜಾತಾ ಅವರಿಗೆ ನೋಟೀಸ್ ನೀಡಬೇಕೆಂದು ನಿರ್ದೇಶ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಸಮಸ್ಯೆ ಹೇಳಿಕೊಂಡರು.
ನಗರಸಭೆ ಆಯುಕ್ತ ನರಸಿಂಹಮೂರ್ತಿ, ನಗರ ಯೋಜನಾ ನಿರ್ದೇಶಕ ಜಗದೀಶ್, ನಗರಸಭೆ ಎಇಇ ಚನ್ನೇಗೌಡ ಇತರು ಇದ್ದರು.
ಡಿಸಿ-ಜೆಡಿಎಸ್ ಸದಸ್ಯರ ನಡುವಿನ ವಾಕ್ಸಮರ:
ಮತ್ತೊಂದೆಡೆ ಡಿಸಿ ವಿರುದ್ಧವೂ ಜೆಡಿಎಸ್ ಸದಸ್ಯರು ಆಕ್ರೋಶ ಹೊರ ಹಾಕಿದರು. ಯಾವುದೇ ವಾರ್ಡ್‌ಗಳಲ್ಲಿ ಕೆಲಸ ಆಗುತ್ತಿಲ್ಲ. ಎಲ್ಲಿ ಇಂಥ ಕೆಲಸ ಆಗುತ್ತಿವೆ ಹೇಳಲಿ, ಅಧಿಕಾರಿಗಳು ವೇದಿಕೆ ಮೇಲೆ ಹೇಳೋದು ಒಂದು, ಮಾಡೋದು ಇನ್ನೊಂದು ಎಂದು ತಮ್ಮ ಬೇಗುದಿ ಹೊರ ಹಾಕಿದರು.
ಈ ವೇಳೆ ಡಿಸಿ ಅವರ ವಿರುದ್ಧ ನಗರಸಭೆ ಸದಸ್ಯ ಕ್ರಾಂತಿ, ಅಸಮಾಧಾನ ಹೊರ ಹಾಕಿದರು. ಇದರಿಂದ ಕೆರಳಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಕ್ರಾಂತಿ ಪ್ರಸಾದ್ ತ್ಯಾಗಿ ವಿರುದ್ಧ ಕೆಂಡಾಮಂಡಲರಾದರು. ನಾನು ಅದೇ ಸಂದರ್ಭದಲ್ಲಿ ಮಾಹಿತಿ ಕೊಟ್ಟಿದ್ದೀನಿ, ವೇದಿಕೆ ಮೇಲೆ ಹೇಳೋದೊಂದು, ಮಾಡೊದೊಂದು ನನಗೇನು ಅಭ್ಯಾಸ ಇಲ್ಲ. ಇವೆಲ್ಲಾ ಬಿಟ್ಟುಬಿಡಿ, ಆ ತರ ಮಾತನಾಡಬೇಡಿ, ಲೆಕ್ಕಕ್ಕಿಲ್ಲದ ಮಾತುಗಳನ್ನು ಆಡಿದರೆ ನಾನು ಗಣನೆಗೆ ತೆಗೆದುಕೊಳ್ಳಲ್ಲ. ಯೂ ಶುಡ್ ಮೈಂಡ್ ಯುವರ್ ಟಂಗ್ ಎಂದು ಗರಂ ಆದರು. ಅದಕ್ಕೆ ಕ್ರಾಂತಿ, ಐ ಯಾಮ್ ಆಲ್ ಸೋ ಅಡ್ವೋಕೇಟ್, ಇದು ಜನಸ್ಪಂದನ ಸಭೆ, ನಾನು ಜನಾನೇ, ನಮ್ಮ ವಾರ್ಡ್‌ನಲ್ಲಿ ಕೆಲಸ ಆಗಿಲ್ಲ ಮನವಿ ಕೊಡಲು ಬಂದಿದ್ದೇನೆ ಎಂದರು.
ಅಧಿಕಾರದ ವ್ಯಾಮೋಹ ಇಲ್ಲ:
ನನಗೆ ಅಧಿಕಾರದ ವ್ಯಾಮೋಹ ಇಲ್ಲ. ನಗರ ಸಭೆ ಮತ್ತು ಹುಡಾಗೆ ಸರ್ಕಾರದ ಆದೇಶದಂತೆ ಕೆಲಸ ಮಾಡುತ್ತೀದ್ದಾನೆ. ಡಿಸಿಯಿಂದ ಸರ್ಕಾರ ಇದು ವರ್ಗವಣೆ ಮಾಡಿದರು ನಾನು ಹೋಗುತ್ತಾನೆ.ನಾನು ಯಾವ ಬೆದರಿಕೆಗಳಿಗೂ ಜಗ್ಗುವುದಿಲ್ಲ. ನನ್ನ ಮನೋಭಾವ ಬೇರೆ ಇದೆ. ಬೇರೆ ಅಧಿಕಾರಿಗಳಿಗೆ ನನ್ನನ್ನು ಹೋಲಿಸಬೇಡಿ. ಕಾನೂನು ಏನು ಹೇಳುತ್ತದೆಯೋ ಆ ಕೆಲಸ ಮಾತ್ರ ಮಾಡುತ್ತೇನೆ. ಯಾರ ಭಯವೂ ನನಗಿಲ್ಲ. ನಮ ಅಧೀನ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿದರೆ ಯಾವ ಸಮಸ್ಯೆಯೂ ಆಗುವುದಿಲ್ಲ. ಆ ಬಗ್ಗೆ ನನಗೂ ಅಸಮಾಧಾನವಿದೆ. ಆದ್ದರಿಂದಲೇ ಸಮಸ್ಯೆ ಆಲಿಸಲು ಜನಸ್ಪಂದನ ಸಭೆ ಕರೆದಿದ್ದೇನೆ. ಆಗಸ್ಟ್ ಅಂತ್ಯಕ್ಕೆ ಮತ್ತೊಂದು ಸಭೆ ಕರೆಯಲಾಗುವುದು ಎಂದರು.