ಜನ ಸೇವೆಯೇ ನನ್ನ ಮುಖ್ಯ ಗುರಿ

KCN
ತಾಲೂಕಿನ ಕಸಬಾ ಹೋಬಳಿಯ ಬಳ್ಳೇಕೆರೆ ಪಂಚಾಯಿತಿಯ ನಾರ್ಗೋನಹಳ್ಳಿ, ಕಾಮನಹಳ್ಳಿ, ಮೊಸಳೆ ಕೊಪ್ಪಲು ಗ್ರಾಮ ಸೇರಿ ಹಲವು ಗ್ರಾಮಗಳಿಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಸಚಿವ ನಾರಾಯಣಗೌಡ ಬಿರುಸಿನ ಮತಪ್ರಚಾರ ನಡೆಸಿದರು.
Published on


ಕೆ.ಆರ್.ಪೇಟೆ: ನಾನು ಹಣ ಆಸ್ತಿ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಜನಸೇವೆಯೇ ನನ್ನ ಮುಖ್ಯ ಗುರಿಯಾಗಿದೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ತಾಲೂಕಿನ ಕಸಬಾ ಹೋಬಳಿಯ ಬಳ್ಳೇಕೆರೆ ಪಂಚಾಯಿತಿಯ ನಾರ್ಗೋನಹಳ್ಳಿ, ಕಾಮನಹಳ್ಳಿ, ಮೊಸಳೆಕೊಪ್ಪಲು ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಸಚಿವ ನಾರಾಯಣಗೌಡ ಬಿರುಸಿನ ಮತಪ್ರಚಾರ ನಡೆಸಿದರು.

ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಾ ಕಣದಲ್ಲಿ ಇರುವ ನನಗೆ ತಾಲೂಕಿನ ಪ್ರಜ್ಞಾವಂತ ಮತದಾರರು ತಮ್ಮ ಮತವನ್ನು ನೀಡಿ ಪುನರಾಯ್ಕೆ ಮಾಡುವ ಮೂಲಕ ತಮ್ಮ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದರು.
1800 ಕೋಟಿ ರೂ.ಗಳ ಅನುದಾನ ತಂದು, ತಾಲೂಕಿನಲ್ಲಿ ಈ ಹಿಂದೆಂದೂ ನಡೆಯದಷ್ಟು ಅಭಿವೃದ್ಧಿ ಕೆಲಸಗಳನ್ನು ನಡೆಸಿದ್ದೇನೆ. ನನ್ನ ರಾಜಕೀಯ ವಿರೋಧಿಗಳು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ಟೀಕೆ ಮಾಡುವವರು ತಾಲೂಕಿನಲ್ಲಿ ಸಂಚರಿಸಿ ಏತ ನೀರಾವರಿ ಯೋಜನೆ ಕಾಮಗಾರಿಗಳು, ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿ, ವಸತಿ ಶಾಲೆಗಳ ಕ್ಯಾಂಪಸ್, ಹೈಟೆಕ್ ಆಸ್ಪತ್ರೆ, ವಿದ್ಯುತ್ ಸಬ್‌ಸ್ಟೇಷನ್, ಕೆರೆ ಅಭಿವೃದ್ಧಿ ಕಾಮಗಾರಿ ಹಾಗೂ ಒಳಾಂಗಣ ಕ್ರೀಡಾಂಗಣವನ್ನು ಒಮ್ಮೆ ನೋಡಿಕೊಂಡು ಮಾತನಾಡಲಿ ಎಂದರು.

ತಾಲೂಕಿನಲ್ಲಿ ಪುಂಡರು ಹಾಗೂ ಕಿಡಿಗೇಡಿಗಳು ನಡೆಸುತ್ತಿರುವ ಗೂಂಡಾಗಿರಿ ಹಾಗೂ ದಬ್ಬಾಳಿಕೆ ಮಟ್ಟಹಾಕಿ, ಶಾಂತಿ ಸೌಹಾರ್ದತೆಯಿಂದ ಕೂಡಿರುವ ಆರೋಗ್ಯವಂತ ಸಮಾಜ ನಿರ್ಮಾಣದ ಗುರಿ ಹೊಂದಿದ್ದೇನೆ. ಮೇ 10 ರಂದು ನಡೆಯುವ ಚುನಾವಣೆಯಲ್ಲಿ ನಿಮ್ಮ ಮನೆ ಮಗನಾದ ನನಗೆ ಆಶೀರ್ವದಿಸಿ ಎಂದರು.

ವಿವಿಧ ಗ್ರಾಮಗಳಿಗೆ ಮತಯಾಚನೆ ಮಾಡಲು ಬಂದ ಅಭ್ಯರ್ಥಿ ಸಚಿವ ನಾರಾಯಣಗೌಡರನ್ನು ಅವರನ್ನು ಆರತಿ ಬೆಳಗಿ ಹೃದಯಸ್ಪರ್ಶಿಯಾಗಿ ಸ್ವಾಗತಿಸಿದರೆ, ಯುವ ಜನತೆ ಪಟಾಕಿ ಸಿಡಿಸಿ ನಾರಾಯಣಗೌಡರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ತಾಪಂ ಮಾಜಿ ಸದಸ್ಯ ರಾಜಾಹುಲಿ ದಿನೇಶ್, ಪುರಸಭೆ ಸದಸ್ಯ ಸಂತೋಷ್ ಕುಮಾರ್, ಮುಖಂಡ ಬಳ್ಳೇಕೆರೆ ಪ್ರವೀಣ್ ಸೇರಿ ಹಲವರು ಸಚಿವರಿಗೆ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net