ಜನ ಸೇವೆಯಲ್ಲಿ 24X7 ಸಮರ್ಪಣೆ

1-04hbd1
Published on

ಹುಮನಾಬಾದ್: ಶಾಸಕ ರಾಜಶೇಖರ ಪಾಟೀಲ್ ಅವರ 55ನೇ ಜನ್ಮ ದಿನವನ್ನು ಅಪಾರ ಅಭಿಮಾನಿ ಬಳಗ, ಕಾರ್ಯಕರ್ತರು, ಗಣ್ಯರ ಸಮ್ಮುಖದಲ್ಲಿ ಗುರುವಾರ ಪಟ್ಟಣದಲ್ಲಿ ಆಚರಿಸಲಾಯಿತು.

ಕರೊನಾ ಹಿನ್ನಲೆಯಲ್ಲಿ ಕಾರ್ಯಕ್ರಮ ಸರಳವಾಗಿ ಜರುಗಿತು. ಕೋವಿಡ್ ನಿಯಮದಂತೆ ಸಹಸ್ರಾರು ಜನರು ಆಗಮಿಸಿ ಶಾಸಕರಿಗೆ ವಿಷ್ ಹೇಳಿದರು. ಬೆಳಗ್ಗೆಯಿಂದ ತಡರಾತ್ರಿವರೆಗೆ ಕ್ಷೇತ್ರ ಮಾತ್ರವಲ್ಲ ಜಿಲ್ಲೆ ಮತ್ತು ಹೊರ ಜಿಲ್ಲೆಯ ವಿವಿಧೆಡೆಯಿಂದ ಜನತೆ, ಅಭಿಮಾನಿಗಳು, ಅಧಿಕಾರಿಗಳು, ಗಣ್ಯರು, ಸಂಘ-ಸಂಸ್ಥೆ ಪ್ರಮುಖರು, ರಾಜಕೀಯ ನಾಯಕರು ಶಾಸಕರ ನಿವಾಸಕ್ಕೆ ಭೇಟಿ ನೀಡಿ ಜನ್ಮ ದಿನದ ಶುಭಾಶಯ ಕೋರಿದರು.

ಪಟ್ಟಣದ ಶ್ರೀ ವೀರಭದ್ರೇಶ್ವರ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿ ದರ್ಶನ ಪಡೆದ ಬಳಿಕ ರಾಜರಾಜೇಶ್ವರಿ ದೇವಸ್ಥಾನದಲ್ಲೂ ವಿಶೇಷ ಪೂಜೆ, ಆರತಿ ಮಾಡಿದರು. ನಂತರ ಅಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಪಾಟೀಲ್ ಪತ್ನಿ ಪ್ರೇಮಾ ಜತೆ ಕೇಕ್ ಕತ್ತರಿಸಿದರು.

ಈ ವೇಳೆ ಮಾತನಾಡಿದ ಅವರು, ತಂದೆ ದಿ. ಬಸವರಾಜ ಪಾಟೀಲ್ ಹಾಕಿಕೊಟ್ಟ ಮಾರ್ಗದಲ್ಲಿ ಕ್ಷೇತ್ರದ ಮಹಾ ಜನತೆಯ ಸೇವೆಗೆ ದಿನದ 24 ಗಂಟೆ ಸಮಯ ಕೊಟ್ಟು ಕೆಲಸ ಮಾಡುತ್ತಿದ್ದೇನೆ. ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಿದ್ದೇನೆ. ಜನರ ಆಶೀರ್ವಾದ, ಕುಟುಂಬದವರ ಸಹಕಾರ, ಪ್ರೋತ್ಸಾಹದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವೆ. ಕ್ಷೇತ್ರದ ಜನ ನನ್ನ ಮೇಲಿಟ್ಟ ವಿಶ್ವಾಸ, ಪ್ರೀತಿ, ಆಶೀರ್ವಾದಕ್ಕೆ ಋಣಿಯಾಗಿರುವೆ. ನನ್ನನ್ನು ನಂಬಿದವರಿಗೆ ಯಾವತ್ತೂ ಕೈಬಿಡಲ್ಲ ಎಂದರು.

ನಾನು ಅಧಿಕಾರದ ಎಲ್ಲ ಮಜಲುಗಳನ್ನು ನೋಡಿದ್ದೇನೆ. ಅಧಿಕಾರಕ್ಕಿಂತ ಜನರ ಸೇವೆ ಮಾಡುವುದೇ ನನ್ನ ಮುಖ್ಯ ಧ್ಯೇಯ. ಎಂಥದ್ದೇ ಸಂದರ್ಭ, ಪರಿಸ್ಥಿತಿಯಲ್ಲೂ ಕ್ಷೇತ್ರದ ಜನ, ಕಾರ್ಯಕರ್ತರಿಗೆ ಅನ್ಯಾಯವಾಗಲು ಬಿಡಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಮಾತನಾಡಿ, ರಾಜಕೀಯದಲ್ಲಿ ಯಾವುದೇ ಕಳಂಕ ಬರದಂತೆ ಕ್ಷೇತ್ರ ಜನರ ಸೇವೆಯಲ್ಲಿ ಶಾಸಕ ರಾಜಶೇಖರ ಪಾಟೀಲ್ ನೇತೃತ್ವದಲ್ಲಿ ತೊಡಗಿದ್ದೇನೆ. ಅಭಿವೃದ್ಧಿಗೆ ನಮ್ಮ ಪರಿವಾರ ಬದ್ಧರಾಗಿದ್ದು, ಜನರ ಆಶೀರ್ವಾದ ಸದಾ ಇರಲಿ ಎಂದರು.

ತಾಪಂ ಅಧ್ಯಕ್ಷ ರಮೇಶ ಡಾಕುಳಗಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಜಯಶಾಂತಲಿಂಗ ಶಿವಾಚಾರ್ಯ, ಹುಡಗಿ ಶ್ರೀ, ಜಯದೇವಿ ತಾಯಿ, ಉಮಾದೇವಿ ಪಾಟೀಲ್, ಜಿಪಂ ಸದಸ್ಯರಾದ ಭಾರತಬಾಯಿ ಕೊಡಂಬಲ್, ಲಕ್ಷ್ಮಣರಾವ ಬುಳ್ಳಾ, ಮಾಜಿ ಸದಸ್ಯ ವೀರಣ್ಣ ಪಾಟೀಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ ಪಾಟೀಲ್, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಪಾಟೀಲ್, ಹಿರಿಯ ಉದ್ಯಮಿ ಧನರಾಜ ತಾಳಂಪಳ್ಳಿ, ಪ್ರಮುಖರಾದ ಕೇಶವರಾವ ತಳಘಟಕರ್, ಬಸವರಾಜ ಬುಳ್ಳಾ, ಮಹಾಂತಯ್ಯ ತೀರ್ಥ, ಸಂತೋಷ ತಾಳಂಪಳ್ಳಿ, ರಾಜಶೇಖರ ಪಾಟೀಲ್ ಮದರಗಾಂವ, ರೇವಣಸಿದ್ದಪ್ಪ ಪಾಟೀಲ್, ಕಸ್ತೂರಬಾಯಿ ಪರಸನೋರ್, ಸಂಜಯ ಪಾಟೀಲ್, ಮಲ್ಲಿಕಾರ್ಜುನ ಮಾಶೆಟ್ಟಿ, ದತ್ತಕುಮಾರ ಚಿದ್ರಿ, ಶರಣರೆಡ್ಡಿ, ಮಲ್ಲಿಕಾರ್ಜುನ ಮಹೇಂದ್ರಕರ್, ಬಸವರಾಜ ಮೋಳಕೇರೆ, ದಿಲೀಪ ಬಗದಲ್ಕರ್ ಇತರರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಫ್ಸರ್ ಮಿಯ್ಯಾ ಸ್ವಾಗತಿಸಿದರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.

ಕ್ಷೇತ್ರದ ಮತದಾರರ ಆಶೀರ್ವಾದದಿಂದಲೇ ಹಲವು ದಶಕಗಳಿಂದ ಅಧಿಕಾರದಲ್ಲಿದ್ದು, ಜನ ಸೇವೆ, ಜನಪರ ಕೆಲಸಗಳಲ್ಲಿ ತೊಡಗಿದ್ದೇನೆ. ನನ್ನಿಂದ ಅಥವಾ ನನ್ನ ಕುಟುಂಬದವರಿಂದ ಯಾರಿಗೂ ಅನ್ಯಾಯವಾಗಿಲ್ಲ. ನಾನು ಹೆದರುವುದು ಆರಾಧ್ಯದೈವ ಶ್ರೀ ವೀರಭದ್ರೇಶ್ವರ ಮತ್ತು ಶ್ರೀ ರಾಜರಾಜೇಶ್ವರಿ ಮಾತೆಗೆ ಮಾತ್ರ. ಕ್ಷೇತ್ರದ ಜನರ ಆಶೀರ್ವಾದದಿಂದ ನಾನು ಇಂದು, ಮುಂದೆ ರಾಜಾ ಹುಲಿಯಾಗಿಯೇ ಇರುವೆ.| ರಾಜಶೇಖರ ಪಾಟೀಲ್ ಶಾಸಕ

ಕಲ್ಯಾಣ ಕರ್ನಾಟಕದ ಜನಪ್ರಿಯ ರಾಜಕಾರಣಿಯಾಗಿರುವ ಶಾಸಕ ರಾಜಶೇಖರ ಪಾಟೀಲ್ ಹೆಸರಿಗೆ ಕೆಲವರಿಂದ ಮಸಿ ಬಳಿಯುವ ಕಾರ್ಯ ನಡೆದಿದೆ. ಸಾರ್ವಜನಿಕರು ಇದನ್ನು ಅರಿತು ಯಾರದೇ ಸುಳ್ಳು ಆರೋಪಕ್ಕೆ ಕಿವಿಗೊಡಬಾರದು. ಕ್ಷೇತ್ರದ ಸಮಗ್ರ ವಿಕಾಸಕ್ಕೆ ಬದ್ಧರಾಗಿ ಶಾಸಕರು ಕೆಲಸ ಮಾಡುತ್ತಿದ್ದು, ಜನಾಶೀರ್ವಾದ ಸದಾ ಪಾಟೀಲ್ ಪರಿವಾರದ ಮೇಲಿರುವ ವಿಶ್ವಾಸವಿದೆ. | ಡಾ.ಚಂದ್ರಶೇಖರ ಪಾಟೀಲ್ ಎಂಎಲ್ಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net