ಜನ ವಿರೋಧಿ ನೀತಿಗಳೇ ಬಿಜೆಪಿಗೆ ಮಾರಕ

3CBP4
Published on

ಚಿಕ್ಕಬಳ್ಳಾಪುರ : ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರವು ಜಾರಿಗೆ ತರುತ್ತಿರುವ ಆಡಳಿತ ನೀತಿಗಳ ವಿರುದ್ಧದ ಹೋರಾಟದ ಧ್ವನಿ ಹೆಚ್ಚಾಗಬೇಕು ಎಂದು ವಿಧಾನಸಭಾ ಮಾಜಿ ಉಪ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದರು.

ಪ್ರಶಾಂತನಗರದಲ್ಲಿನ ಜಿ.ಎಚ್.ಎನ್.ನಿವಾಸದಲ್ಲಿ ಭಾನುವಾರ ಆಯೋಜಿಸಿದ್ದ ಪಕ್ಷದ ಸಮಾವೇಶದಲ್ಲಿ ಮಾತನಾಡಿ, ಈಗಾಗಲೇ ಎಪಿಎಂಸಿ, ಕಾರ್ಮಿಕ, ಕೃಷಿ ಕಾಯ್ದೆ ತಿದ್ದುಪಡಿ ಸೇರಿ ಮಾರಕ ಕಾಯ್ದೆಗಳ ವಿರುದ್ಧ ವ್ಯಾಪಕವಾಗಿ ಹೋರಾಟ ನಡೆಸಲಾಗುತ್ತಿದೆ. ದೆಹಲಿಯಲ್ಲಿ ರೈತರು ಸಿಡಿದೆದ್ದು ಹಲವು ದಿನಗಳಿಂದ ಬೀದಿಯಲ್ಲಿ ಧರಣಿ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಗೆ ಆಡಳಿತ ವೈಫಲ್ಯ, ಜನಪರ ವಿರೋಧಿ ನೀತಿಗಳೇ ಮಾರಕವಾಗಲಿವೆ ಎಂದು ಭವಿಷ್ಯ ನುಡಿದರು.

ಚುನಾವಣೆಯಲ್ಲಿ ಸೋಲು ಗೆಲುವಿನ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಜನರು ಪರಿಸ್ಥಿತಿ ಅರ್ಥೈಸಿಕೊಂಡು ಬೆಂಬಲ ನೀಡಲಿದ್ದಾರೆ. ಇದು ಭವಿಷ್ಯದಲ್ಲಿ ಕಾಂಗ್ರೆಸ್ ಗೆಲುವಿನಿಂದ ಅರಿವಿಗೆ ಬರಲಿದೆ. ಇನ್ನು ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಬೆಳಗಾವಿ, ಗುಲ್ಭರ್ಗಾ, ಮೈಸೂರು ಸೇರಿ ವಿವಿಧೆಡೆ ಸಮಾವೇಶ ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮಾತನಾಡಿ, ಜಿಲ್ಲೆಯು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಇದರ ನೆಲೆಯನ್ನು ಗಟ್ಟಿಗೊಳಿಸಬೇಕಾಗಿದೆ. ಕ್ಷಣಿಕ ಆಸೆ ಆಮಿಷಗಳನ್ನೊಡ್ಡಿ ಕೈಗೊಳ್ಳುವ ಬಿಜೆಪಿ ರಾಜಕಾರಣಕ್ಕೆ ಉಳಿಗಾಲವಿಲ್ಲ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಆಂಜಿನಪ್ಪ, ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್, ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ಮುಖಂಡ ಜಿ.ಎಚ್.ನಾಗರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net