ಜನ ಪ್ರೀತಿಯ ಮುಂದೆ ನನಗೇನೂ ಬೇಕಿಲ್ಲ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ

SGR WEB 333
Published on

ಸಾಗರ: ಸಮಸಮಾಜ ನಿರ್ಮಾಣ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಾಂಗ್ರೆಸ್ ನೀಡಿದ ಕೊಡುಗೆಯನ್ನು ಯಾರೂ ಮರೆಯಬಾರದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಗಾಂಧಿ ಮಂದಿರದಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ಮತ್ತು ಕಾಗೋಡು ತಿಮ್ಮಪ್ಪ ಫೌಂಡೇಷನ್‌ನಿಂದ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ಅಚ್ಚೇ ದಿನ್, ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರಕ್ಕೆ ಸೀಮಿತವಾಗಿದೆಯೆ ವಿನಾ ಅದು ಅನುಷ್ಠಾನಗೊಂಡಿಲ್ಲ. ಇಂತಹ ಹೊತ್ತಿನಲ್ಲಿ ದೇಶವನ್ನು ಮತ್ತೆ ಕಟ್ಟುವ, ಸದೃಢ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ನೀಡುವ ಏಕೈಕ ಪಕ್ಷ ಇದ್ದರೆ ಅದು ಕಾಂಗ್ರೆಸ್ ಮಾತ್ರ. ಅಸಮಾನತೆ ತೊಲಗಿಸಿ ಸಾಮಾಜಿಕ ಬದಲಾವಣೆ ಮಾಡಲು ಕಾಂಗ್ರೆಸ್‌ಗೆ ಎಲ್ಲರ ಬೆಂಬಲ ಅಗತ್ಯ. ಇದೀಗ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಬಂದಿದ್ದು ಅದನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಿ. ಜನಪ್ರೀತಿಯ ಮುಂದೆ ನನಗೆ ಇನ್ನೇನು ಬೇಕಿಲ್ಲ ಎಂದರು.

ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕಾಗೋಡು ತಿಮ್ಮಪ್ಪ ಅವರು ಅಧಿಕಾರದಲ್ಲಿದ್ದಾಗ ನೀಡಿದ ಕೊಡುಗೆ ಯಾರೂ ಮರೆಯಲು ಸಾಧ್ಯವಿಲ್ಲ. ಕಾಗೋಡು ಚಳವಳಿ ಮೂಲಕ ಗೇಣಿದಾರರು ಭೂ ಒಡೆಯರಾಗುವಂತೆ ಮಾಡಿದ್ದು ಕಾಗೋಡು ತಿಮ್ಮಪ್ಪನವರು. ಸಚಿವರಾಗಿದ್ದಾಗ ಸಹ ಕಾಗೋಡು ಭೂಹೀನರ ಪರವಾಗಿ ಚಿಂತನೆ ನಡೆಸಿದರು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ಶಿಕ್ಷಣ, ಸ್ವಾವಲಂಬನೆ, ಸರ್ವರ ವಿಕಾಸದ ಕನಸು ಹೊತ್ತು ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಿದ ಕಾಗೋಡು ತಿಮ್ಮಪ್ಪ ಅವರು ನಮ್ಮ ತಂದೆ ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net