ಜನ ಜಾನುವಾರು ನೀರಿನ ಸಮಸ್ಯೆ ಸರಿಪಡಿಸಿ

Cattle, water problem, devahipparagi, chimmalagi, protest,
ಚಿಮ್ಮಲಗಿ ಏತ ನೀರಾವರಿ ಕಾಲುವೆಗೆ ನೀರು ಹರಿಸಿ, ಕೆರೆ ತುಂಬಿಸುವಂತೆ ಆಗ್ರಹಿಸಿ ಮುಳಸಾವಳಗಿ, ಚಿಕ್ಕರೂಗಿ ಸೇರಿ ವಿವಿಧ ಗ್ರಾಮಗಳ ರೈತರು ಜಾನುವಾರುಗಳೊಂದಿಗೆ ಕಡ್ಲೇವಾಡ ಪಿಸಿಎಚ್ ಗ್ರಾಮದ ಕೆರೆಯಲ್ಲಿ ಧರಣಿ ಕುಳಿತು ವಿನೂತನ ಪ್ರತಿಭಟನೆ ಕೈಗೊಂಡರು.
Published on

ದೇವರಹಿಪ್ಪರಗಿ: ಕುಡಿಯುವ ನೀರಿನ ಅನುಕೂಲಕ್ಕಾಗಿ ಚಿಮ್ಮಲಗಿ ಮುಖ್ಯಕಾಲುವೆಯ ನಾಗಠಾಣ ಉಪಕಾಲುವೆಗೆ ಕೂಡಲೇ ನೀರು ಹರಿಸಿ, ಕೆರೆ ತುಂಬಿಸಲು ಆಗ್ರಹಿಸಿ ಮುಳಸಾವಳಗಿ, ಚಿಕ್ಕರೂಗಿ, ಇಂಗಳಗಿ, ನಿವಾಳಖೇಡ ಸೇರಿ ವಿವಿಧ ಗ್ರಾಮಗಳ ರೈತರು ಕಡ್ಲೇವಾಡ ಪಿಸಿಎಚ್ ಗ್ರಾಮದ ಕೆರೆಯಲ್ಲಿ ಜಾನುವಾರುಗಳೊಂದಿಗೆ ಧರಣಿ ಕುಳಿತು ಶನಿವಾರ ವಿನೂತನ ಪ್ರತಿಭಟನೆ ಕೈಗೊಂಡರು.

ಪಟ್ಟಣದ ಇಂಡಿ ರಸ್ತೆಯಲ್ಲಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ಕೆರೆ ಅಂಗಳದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಂಕರಗೌಡ ಹಿರೇಗೌಡರ, ಸಾಹೇಬಗೌಡ ರೆಡ್ಡಿ ಮಾತನಾಡಿ, ಚಿಮ್ಮಲಗಿ ಕಾಲುವೆಗೆ ನೀರು ಹರಿಸಲಾಗಿದ್ದು, ಕೆರೆಗಳಲ್ಲಿ ಶೇ.60 ರಷ್ಟು ನೀರಿದೆಯೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವಾಸ್ತವಿಕವಾಗಿ ಕೆರೆಗಳಿಗೆ ಬಂದು ನೋಡಿದರೆ ಶೇ.2 ರಷ್ಟು ನೀರಿಲ್ಲ. ಕಳೆದ ಎರಡು ತಿಂಗಳಿನಿಂದ ರೈತರು ನಿರಂತರ ಹೋರಾಟ ಮಾಡುತ್ತಿದ್ದರೂ ಕಾಲುವೆಯ ಮೂಲಕ ಕೆರೆ ತುಂಬುತ್ತಿಲ್ಲ. ಕೃಷಿಕರು, ಜಾನುವಾರು ಹಾಗೂ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ ಎಂದರು.

ಜಿಲ್ಲೆಯ ಇತರ ತಾಲೂಕುಗಳ ಕಾಲುವೆಗಳಲ್ಲಿ ನಿರಂತರ ನೀರು ಹರಿಸಲಾಗಿದೆ. ಆದರೆ ಚಿಮ್ಮಲಗಿ ಕಾಲುವೆಯನ್ನು ಸಂಪೂರ್ಣ ಮರೆಯಲಾಗಿದೆ. ಈ ತಿಂಗಳ ಕೊನೆಯಲ್ಲಿ ನೀರು ಹರಿಸಿ ನಮ್ಮ ಕೆರೆಗಳನ್ನು ತುಂಬದೆ ಇದ್ದರೆ ದೇವರಹಿಪ್ಪರಗಿಯ ಅಂಬೇಡ್ಕರ್ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಾಗರಾಜ ಕಬಾಡಗಿ, ಲಿಂಗರಾಜ ಸಂಗೋಗಿ, ತಿಪ್ಪಣ್ಣ ತಳವಾರ, ಭೈರಪ್ಪ ಬಿರಾದಾರ, ಪ್ರಕಾಶ ಬಂಥನಾಳ, ವಿಶ್ವನಾಥ ನೆಗಿನಾಳ, ಮಲ್ಲು ಕಬಾಡಗಿ, ಮಹಾದೇವಪ್ಪ ಹಳ್ಳಿ, ಪಿಟ್ಟಪ್ಪ ಗಣಜಲಿ, ಪರಶುರಾಮ ಸಂಗೋಗಿ, ಬಸವರಾಜ ವಡ್ಡೋಡಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net