

ಮೈಸೂರು: ಜಾತಿ, ಮತ, ಧರ್ಮ ಭೇದವಿಲ್ಲದೆ ಜನ ಕಲ್ಯಾಣಕ್ಕೆ ದುಡಿದ ಮಠ ಶ್ರೀಸುತ್ತೂರು ಮಠ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿ.ದಿನೇಶ್ ಹೇಳಿದರು.
ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110ನೇ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಮೈಸೂರು ಭಾಗದ ಜನರ ಒಂದು ವಿಶೇಷ ಗುಣ ಏನೆಂದರೆ ಯಾರೇ ಮನೆಗೆ ಬಂದರು ಮೊದಲು ಊಟ ಮಾಡಿ ಎನ್ನುತ್ತಾರೆ.
ಇದು ಈ ಭಾಗದ ಜನರ ಮಾತೃಹೃದಯ ಗುಣ. ಅದೇ ರೀತಿ ಜಾತಿ, ಮತ, ಭೇದವಿಲ್ಲದೆ ಎಲ್ಲರಿಗೂ ಅನ್ನ ದಾಸೋಹ, ಅಕ್ಷರ ದಾಸೋಹ ನೀಡಿದ ಮಹಾನ್ ಸಂತ ರಾಜೇಂದ್ರ ಶ್ರೀಗಳು ಎಂದರು.
ನನ್ನ ಮನಸ್ಸಿಗೆ ತುಂಬ ಆಳವಾಗಿ ಬೇರೂರಿದ ಒಂದು ಸಂದರ್ಭ ಎಂದರೆ ಶ್ರೀಗಳು ತಮ್ಮ ಚಿನ್ನದ ಕರಡಿಗೆಯನ್ನು ಮಾರಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಅನ್ನದಾಸೋಹ ಮಾಡಿದ್ದು. ಇದಕ್ಕಿಂತ ಹೃದಯ ವೈಶ್ಯಾಲತೆ ಬೇಕೆ? ಎಂದರು.
ಕೋವಿಡ್ ಸಮಯದಲ್ಲಿ ಕೆಲವು ಆಸ್ಪತ್ರೆಗಳು, ಸಂಸ್ಥೆಗಳು ಉದ್ಯೋಗಿಗಳಿಗೆ ಸಂಬಳ ನೀಡದ ಪರಿಸ್ಥಿತಿಯಲ್ಲಿದಾಗ ಜೆಎಸ್‌ಎಸ್ ಸಂಸ್ಥೆ ಮಾತ್ರ ಎಲ್ಲ ಉದ್ಯೋಗಿಗಳಿಗೂ ಪ್ರತಿ ತಿಂಗಳು ನಿಗದಿತ ದಿನಾಂಕದಂದು ವೇತನ ನೀಡುತ್ತಿತ್ತು.
ಶ್ರೀಗಳು ಸಂಸ್ಥೆಯ ನೌಕರರನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ. ಜೆಎಸ್‌ಎಸ್ ಸಂಸ್ಥೆ ಇಂದು ಸುಮಾರು ಹದಿನಾರು ಸಾವಿರ ಜನರಿಗೆ ಉದ್ಯೋಗ ನೀಡಿ ಅವರ ಕುಟುಂಬವರ್ಗದವರಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಮಹಾವೇದಿಕೆ ಅಧ್ಯಕ್ಷ ಪ್ರಶಾಂತ್ ಕಲ್ಲೂರ್ ಮಾತನಾಡಿ, ಶಿಕ್ಷಣದ ಬಗ್ಗೆ ಶ್ರೀಗಳಿಗೆ ಇದ್ದ ದೂರದೃಷ್ಟಿ ಶ್ಲಾಘನೀಯವಾದುದು. ಆ ಕಾಲದಲ್ಲೇ ಶ್ರೀಗಳು ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರು. ಪೂಜ್ಯರ ಸಾಧನೆಗಳು, ಆದರ್ಶ ಮುಂದಿನ ಪೀಳಿಗೆಗೆ ತಿಳಿಸಬೇಕು.
ಮಹನೀಯರ ಚರಿತ್ರೆಯನ್ನು ಓದಿ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜಕ್ಕೆ ನಮ್ಮಿಂದಾಗುವ ಸೇವೆಯನ್ನು ಸಲ್ಲಿಸಬೇಕು ಎಂದು ತಿಳಿಸಿದರು
ಜೆಎಸ್‌ಎಸ್ ಮಹಾವಿದ್ಯಾಪೀಠದ ತೋಟಗಾರಿಕೆ ವಿಭಾಗದ ನಿರ್ದೇಶಕ ಎನ್.ಎಂ ಶಿವಶಂಕರಪ್ಪ ಮಾತನಾಡಿ, ಶ್ರೀಗಳು ಹಸಿದವರ, ದೀನ ದಲಿತರ, ಬಡವರ ಪಾಲಿಗೆ ದಾರಿ ದೀಪವಾಗಿದ್ದರು ಎಂದು ತಿಳಿಸಿದರು.
ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ.ಮಧು ಮಾತನಾಡಿ, ರಾಜೇಂದ್ರ ಶ್ರೀಗಳ ಲೋಕ ಕಲ್ಯಾಣಕ್ಕಾಗಿ ತಮ್ಮ ತಪಸ್ಸಿನ ಶಕ್ತಿಯನ್ನು ಧಾರೆ ಎರೆದು ಲಕ್ಷಾಂತರ ಜನರಿಗೆ ಜ್ಞಾನ ದಾಸೋಹ ನೀಡಿದವರು. ಶ್ರೀಗಳು ಜೆಎಸ್‌ಎಸ್ ಆಸ್ಪತ್ರೆಯ ಸ್ಥಾಪನೆ ಸಂದರ್ಭದಲ್ಲಿ ಅವರ ಜತೆ ಇದ್ದ ಒಡನಾಟವನ್ನು ಹಂಚಿಕೊಂಡರು.
ಮೈಸೂರು ವಿಶ್ವವಿದ್ಯಾಲಯದ ಗಣಕವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಡಿ.ಎಸ್.ಗುರು ಮಾತನಾಡಿ, ರಾಜೇಂದ್ರ ಶ್ರೀಗಳು ಭವ್ಯ ಮತ್ತು ದಿವ್ಯಪೂರ್ಣ ಜೀವನ ನಡೆಸಿದವರು. ಕಷ್ಟದಲ್ಲಿ ಬೆಳೆದು ಸಾಧನೆಗೈದ ಮಹಾನ್ ತ್ಯಾಗಿ. ಸಮಾಜ ಸೇವೆ ಆಕಾಶದಷ್ಟು ಅಗಲ ಮತ್ತು ಸಮುದ್ರದಷ್ಟು ಆಳ ಎಂದರು.
ಜೆಎಸ್‌ಎಸ್ ಸಂಸ್ಥೆ 4 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಸಾಧ್ಯವಾಗಿರುವುದು ಅಂದು ರಾಜೇಂದ್ರ ಶ್ರೀಗಳು ಹಾಕಿದ ಅಡಿಪಾಯದಿಂದ. ಶ್ರೀಗಳು ಕೇವಲ ಒಂದು ಜಾತಿಗೆ, ಧರ್ಮಕ್ಕೆ ಮಾತ್ರ ಶಿಕ್ಷಣ, ವಸತಿ ನಿಲಯಗಳನ್ನು ನೀಡದೇ ಸರ್ವರಿಗೂ ಸೌಲಭ್ಯ ನೀಡಿದವರು. ಸಮಸಮಾಜದ ನಿರ್ಮಾಣಕ್ಕೆ ಕಾರಣರಾದವರು.
ಅವರು ಮಾಡಿದ ಸೇವೆ ಮತ್ತು ಕಾಯಕದಿಂದ ಇಂದು ಜೆಎಸ್‌ಎಸ್ ಸಂಸ್ಥೆ ದೊಡ್ಡ ಆಲದ ಮರವಾಗಿ ಬೆಳೆದು ಲಕ್ಷಾಂತರ ಜನರ ಬದುಕಿಗೆ ಆಶ್ರಯವಾಗಿದೆ, ಅನಾಥರು, ಬಡವರೇ ಇವರಿಗೆ ದೇವರಾಗಿ ಕಂಡರು, ಬಡ ವಿದ್ಯಾರ್ಥಿಗಳ ಪರಿಸ್ಥಿತಿ, ಮನಸ್ಥಿತಿ ಅರಿತು ಬಡವರು ವಿದ್ಯಾವಂತರಾಗಬೇಕು.
ಹಸಿವನ್ನು ನೀಗಿಸಬೇಕು ಎಂದು ಅರಿತು ವಿದ್ಯಾರ್ಥಿನಿಲಯಗಳು ಮತ್ತು ಪ್ರಸಾದ ನಿಲಯ ಸ್ಥಾಪಿಸಿ ಗ್ರಾಮೀಣ ಭಾಗದ ಜನರಿಗೆ ದಾರಿದೀಪವಾಗಿದ್ದರು. ವಿಚಾರದಲ್ಲಿ ಅಷ್ಟೇ ಅಲ್ಲದೆ ಆಚರಣೆಯಲ್ಲೂ ಸರ್ವರನ್ನೂ ಸಮನಾಗಿ ಕಂಡ 20ನೇ ಶತಮಾನದ ಮಹಾನ್ ಸಂತ ರಾಜೇಂದ್ರ ಶ್ರೀಗಳು ಎಂದು ತಿಳಿಸಿದರು.
ಆಸರೆ ಗ್ರೂಪ್ ವತಿಯಿಂದ ಅಂಗವಿಕರಿಗೆ ಉಚಿತವಾಗಿ ಕೃತಕಾಂಗ ವಿತರಿಸಲಾಯಿತು. ಆಸರೆ ಗ್ರೂಪ್‌ನ ನಿತಿನ್, ಆಸ್ಪತ್ರೆಯ ಸಂದರ್ಶಕ ಸಮಿತಿ ಸದಸ್ಯರು, ಜೆಎಸ್‌ಎಸ್ ಅಂಗಸಂಸ್ಥೆಗಳ ಅಧಿಕಾರಿಗಳು, ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಇದ್ದರು.