ಜತೆಯಲ್ಲಿ ಇದ್ದುಕೊಂಡೆ ಬೆನ್ನಿಗೆ ಚೂರಿ: ಬನವಾಸೆ ರಂಗಸ್ವಾಮಿ ಅಕ್ರೋಶ

ಜತೆಯಲ್ಲಿ ಇದ್ದುಕೊಂಡೆ ಬೆನ್ನಿಗೆ ಚೂರಿ: ಬನವಾಸೆ ರಂಗಸ್ವಾಮಿ ಅಕ್ರೋಶ
Published on

ಹಾಸನ: ವಿಧಾನಸಭಾ ಚುನಾವಣೆಯಲ್ಲಿ ಜನತಾ ತೀರ್ಪಿಗೆ ನಾನು ತಲೆಬಾಗುತ್ತೇನೆ. ಆದರೆ, ಈ ಚುನಾವಣೆಯಲ್ಲಿ ಜತೆಯಲ್ಲಿ ಇದ್ದುಕೊಂಡೆ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಹಾಸನ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಮೂರು ವರ್ಷದ ಹಿಂದೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದೆ. ಕೊರೋನಾ ವೇಳೆ ಪುಡ್ ಕಿಟ್, ಕುಡಿಯುವ ನೀರು ನೀಡಿದ್ದೇನೆ. ಬಡವರ ಸಮಸ್ಯೆಗೆ ಸ್ಪಂದಿಸಿದ್ದೇನೆ. ದೇವಾಲಯಗಳ ಜೀಣೋದ್ಧಾರಕ್ಕೆ ನನ್ನ ಕೈಲಾದ ಸಹಾಯ, ಕ್ರಿಶ್ಚಿಯನ್ ಸ್ಮಶಾನಗಳ ಸ್ವಚ್ಛತೆ ಸೇರಿದಂತೆ ಎಲ್ಲಾ ವರ್ಗದವರಿಗೂ ಹಲವಾರು ಸೇವಾ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದೇನೆ. ಆದರೂ ಜನರು ನನ್ನ ಕೈ ಹಿಡಿಯಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಚುನಾವಣೆಯಲ್ಲಿ ಯಾರ ಬಳಿಯೂ ಕೈ ಚಾಚದೇ ಪ್ರಾಮಾಣಿಕವಾಗಿ ಎದುರಿಸಿದ್ದೇನೆ. ನನಗೆ ಅರಿವಿಲ್ಲದೇ ನಮ್ಮಲ್ಲೆ ಅನೇಕರು ಜೆಡಿಎಸ್ ಪಕ್ಷಕ್ಕೆ ಮತ ಹಾಕುವಂತೆ ಓಲೈಸುವ ಕೆಲಸ ಮಾಡಿದರೇನೋ ಎಂಬ ಅನುಮಾನ ಇದ್ದು, ಜತೆಯಲ್ಲಿ ಇದ್ದುಕೊಂಡೆ ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ ಎನ್ನುವ ಶಂಕೆ ಇದೆ ಎಂದು ಹೇಳಿದರು.

ಬಿಜೆಪಿಯನ್ನು ಸೋಲಿಸಬೇಕೆಂದು ನನ್ನ ಮನೆ ನಾಶ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಪ್ರಾಮಾಣಿಕ ರಾಜಕಾರಣಕ್ಕೆ ಇದೇನಾ ಬೆಲೆ. ಮುಂದೆ ಹೈಕಮಾಂಡ್ ನಾಯಕರು ಏನು ಹೇಳುತ್ತಾರೆ ಆ ನಿರ್ಧಾರಕ್ಕೆ ನಾನು ಬದ್ಧನಾಗಿ ಕೆಲಸ ಮಾಡುತ್ತೇನೆ. ಮುಂದೆ ಹಾಸನದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದೇ ಗೆಲ್ಲುತ್ತದೆ. ಕಾಣದ ಕೈಗಳು ಯಾರು ಕೆಲಸ ಮಾಡಿದ್ದಾರೆ ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ. ನಾನು ಕೆಟ್ಟವರು ಮತ್ತು ಒಳ್ಳೆಯವರು ಎಲ್ಲರನ್ನು ಮನೆಗೆ ಬಿಟ್ಟುಕೊಂಡು ತಪ್ಪು ಮಾಡಿದೆ. ಆದರೆ ಯಾವುದಕ್ಕೂ ಧೃತಿಗೆಡದೇ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತೇನೆ. ಮುಂದಿನ ಚುನಾವಣೆಯಲ್ಲಿ ಜಯಭೇರಿ ಬಾರಿಸಲು ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬಸವರಾಜು, ವೆಂಕಟೇಗೌಡ, ಬೂದೇಶ್, ವಿನೋದ್, ಜಗನ್ನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net