ಜಡಿಮಳೆಗೆ ಕುಸಿದುಬಿದ್ದ ಮನೆ ಗೋಡೆ, 4 ಮನೆ ಗೋಡೆಗಳಲ್ಲಿ ಬಿರುಕು, 7 ಮಂದಿ ಪ್ರಾಣಾಪಾಯದಿಂದ ಪಾರು

13 tubagere 01
Published on

ತೂಬಗೆರೆ: ಇತ್ತೀಚೆಗೆ ಸುರಿದ ಮಳೆಗೆ ಹೊಸಕೋಟೆ ತಾಲೂಕಿನಲ್ಲಿ ಮನೆಗೋಡೆ ಕುಸಿದು ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟ ಪ್ರಕರಣದ ಬೆನ್ನಲ್ಲೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜಡಿಮಳೆಗೆ ಮನೆಗೋಡೆ ಕುಸಿದು ಏಳು ಮಂದಿ ಪಾರಾಗಿದ್ದಾರೆ.

ತೂಬಗೆರೆ ಹೋಬಳಿ ದೊಡ್ಡತಿಮ್ಮನಹಳ್ಳಿಯಲ್ಲಿ ಶುಕ್ರವಾರ ತಡರಾತ್ರಿ ಗೋಡೆ ಕುಸಿದಿದ್ದು, ಮನೆ ಮಾಲೀಕ ರಾಮಕೃಷ್ಣಪ್ಪ ಎಂಬುವವರ ಸಮಯಪ್ರಜ್ಞೆಯಿಂದ ಏಳು ಮಂದಿಯ ಪ್ರಾಣ ರಕ್ಷಣೆಯಾಗಿದೆ. ತಡರಾತ್ರಿ ಗೋಡೆ ಬಿರುಕುಬಿಡುತ್ತಿರುವ ಸದ್ದು ಕೇಳಿದ ತಕ್ಷಣ ರಾಮಕೃಷ್ಣಪ್ಪ ಎಲ್ಲರನ್ನೂ ಹೊರಗೆ ಕರೆ ತಂದಿದ್ದಾರೆ. ಹೊರಗೆ ಬಂದ ಕೆಲವೇ ಕ್ಷಣದಲ್ಲಿ ಗೋಡೆ ಕುಸಿದಿದೆ. ತೂಬಗೆರೆ ಗ್ರಾಪಂ ಅಧ್ಯಕ್ಷ ಸುರೇಶ್ ಬಾಬು ಸ್ಥಳ ಪರಿಶೀಲಿಸಿದ್ದಾರೆ.

ನೆಲಕಚ್ಚಿದ ಹಳೇ ಮನೆ: ತೂಬಗೆರೆಯಲ್ಲಿ ಗಿರೀಶ್ ಎಂಬುವವರ ಹಳೇ ಮನೆಯೂ ಶುಕ್ರವಾರ ರಾತ್ರಿ ಕುಸಿದಿದೆ, ಮನೆಯಲ್ಲಿ ಯಾರೂ ವಾಸವಿಲ್ಲದ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆದಿಲ್ಲ. ಅದೇ ರೀತಿ ನರಗನಹಳ್ಳಿಯಲ್ಲಿ 4 ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು ಯಾವ ಸಂದರ್ಭದಲ್ಲಾದರೂ ಕುಸಿಯುವ ಸಾಧ್ಯತೆ ಇದೆ. ತೂಬಗೆರೆ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಅನೇಕ ಮನೆಗಳ ಗೋಡೆ ಕುಸಿಯುವ ಆತಂಕ ಎದುರಾಗಿದೆ. ಮಳೆ ಹೀಗೆ ಮುಂದುವರಿದರೆ ಮತ್ತಷ್ಟು ಅವಘಡ ಸಂಭವಿಸಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಸುಳಿವಿಲ್ಲ: ತೂಬಗೆರೆ ವ್ಯಾಪ್ತಿಯಲ್ಲಿ ಮನೆಗೋಡೆಗಳು ಕುಸಿದಿರುವ ಪ್ರಕರಣ ಸಂಬಂಧ ಯಾವುದೇ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬಂದಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಅಪಘಡದಲ್ಲಿ ಯಾರಾದ್ದಾದರೂ ಸಾವು ಸಂಭವಿಸಿದರಷ್ಟೇ ಅಧಿಕಾರಿಗಳ ಆಗಮನವಾಗಲಿದೆಯೇ, ಬಡ ರೈತರ ಪರಿಸ್ಥಿತಿ ನೋಡುವವರಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಕುಸಿದಿರುವ ಮನೆಗಳ ಪರಿಶೀಲನೆ ನಡೆಸಿ ಪರಿಹಾರ ದೊರಕಿಸಿಕೊಡಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net