ಜಡಿಗೇನಹಳ್ಳಿಗೆ ಮೂಲಸೌಕರ್ಯದ ನಂಜು: ಸಚಿವರ ಗ್ರಾಮವಾಸ್ತವ್ಯದಿಂದ ದೊರಕುವುದೇ ಚಿಕಿತ್ಸೆ!ನಿರೀಕ್ಷೆಯಲ್ಲಿ ಗ್ರಾಮಸ್ಥರು

20-Manjunath-HSK-05
Published on

ಮಂಜುನಾಥ ಎಸ್.ಸಿ. ಹೊಸಕೋಟೆ
ಬೀಳುವಂತಿರುವ ಸರ್ಕಾರಿ ಶಾಲೆ ಕಟ್ಟಡ, ವಾರಗಟ್ಟಲೆ ನೀರಿಲ್ಲದೆ ಪರದಾಟ, ಗಬ್ಬುನಾರುತ್ತಿರುವ ಮೋರಿಗಳು, ನಿವೇಶನಹರಿತ ಬಡವರ ಆಕ್ರಂದನ, ಸ್ಮಶಾನ, ಗೋಮಾಳ ಒತ್ತುವರಿಯ ಆತಂಕ, ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಹೈರಾಣಾದ ರೈತರು..!
ಇದು ಕಂದಾಯ ಸಚಿವರು ಶನಿವಾರ ವಾಸ್ತವ್ಯ ಹೂಡಲಿರುವ ಜಡಿಗೇನಹಳ್ಳಿ ಗ್ರಾಮದಲ್ಲಿ ಕಣ್ಣಿಗೆ ರಾಚುವ ಪ್ರಮುಖ ಸಮಸ್ಯೆಗಳು. ಮೂಲಸೌಕರ್ಯದ ನಂಜು ಅಂಟಿಸಿಕೊಂಡಿರುವ ಜಡಿಗೇನಹಳ್ಳಿಗೆ ಡಿಸಿ ನಡಿಗೆ ಕಾರ್ಯಕ್ರಮದ ಮೂಲಕವಾದರೂ ಚಿಕಿತ್ಸೆ ದೊರಕಬಹುದೇ ಎಂಬ ಪ್ರಶ್ನೆ ಗ್ರಾಮಸ್ಥರದ್ದಾಗಿದೆ. ಹೊಸಕೋಟೆ ತಾಲೂಕಿನಲ್ಲಿ ಪ್ರಮುಖ ಹೋಬಳಿ ಕೇಂದ್ರವಾಗಿರುವ ಜಡಿಗೇನಹಳ್ಳಿ ಹೆಸರಿಗೆ ಮಾತ್ರ ಹೋಬಳಿಯಾಗಿದೆ ಹೊರತು ಹೋಬಳಿಮಟ್ಟದಲ್ಲಿ ಆಗಬೇಕಾದ ಅಭಿವೃದ್ಧಿಗಳಿಂದ ದೂರವೇ ಉಳಿದಿದೆ. ಮೂಲಸೌಕರ್ಯಕ್ಕಾಗಿ ಇಂದಿಗೂ ಗ್ರಾಮಸ್ಥರು ಪರದಾಡುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಗ್ರಾಮ ಸಾಕ್ಷಿಯಾಗಿದೆ.

ಬೀಳುವ ಸೂರಿನಡಿ ಸರ್ಕಾರಿ ಶಾಲಾ ಮಕ್ಕಳು: ಜಡಿಗೇನಹಳ್ಳಿ ಸರ್ಕಾರಿ ಹಿರಿಯ ಪ್ರಥಮಿಕ ಶಾಲೆ ಕೊಠಡಿಗಳ ಛಾವಣಿಯ ಕಾಂಕ್ರೀಟ್ ಕಿತ್ತುಬಂದಿದೆ. ಯಾವ ಹಂತದಲ್ಲಾದರೂ ಕಟ್ಟಡ ಕುಸಿದು ಬೀಳುವ ಆತಂಕವಿದೆ. ಇದೆ ಆತಂಕದ ನೆರಳಿನಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುವಂತಹ ಪರಿಸ್ಥಿತಿ ಎದುರಾಗಿದೆ. ಶಾಲಾ ಅಭಿವೃದ್ಧಿ ಮಂಡಳಿ ಅಥವಾ ಅಧಿಕಾರಿ ವರ್ಗ ತುರ್ತು ಕ್ರಮ ಕೈಗೊಳ್ಳದಿದ್ದರೆ ಆಗುವ ಅನಾಹುತಕ್ಕೆ ಹೊಣೆ ಹೊರಬೇಕಾಗುತ್ತದೆ ಎಂಬುದು ಗ್ರಾಮಸ್ಥರ ಆಕ್ರೋಶವಾಗಿದೆ. ಶಿಥಿಲ ಕಟ್ಟಡದಲ್ಲೇ ಏನು ಅರಿವಿಲ್ಲದ ಮಕ್ಕಳು ಬಿಸಿಯೂಟ ಸವಿಯುವ ದೃಶ್ಯ ಕಂಡುಬರುತ್ತಿದೆ. ಈ ಬಗ್ಗೆ ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
8 ದಿನವಾದರೂ ನೀರು ಬಿಡಲ್ಲ: ಗ್ರಾಮದಲ್ಲಿ 2300 ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಸೂಕ್ತ ಸಮಯದಲ್ಲಿ ನೀರು ಬಿಡದೆ ಗ್ರಾಮಸ್ಥರು ನೀರಿಗೆ ಪರದಾಡುವ ಸ್ಥಿತಿ ಎದುರಾಗಿದೆ, ಮುನೇಶ್ವರ ದೇವಾಲಯದ ಕೊಳವೆ ಬಾವಿಯ ಬಳಿಯಿಂದ ರಾಜ್ಯ ಹೆದ್ದಾರಿ ದಾಟಿಕೊಂಡು ಕುಡಿವ ನೀರು ತರಬೇಕಿದೆ, ಈ ಬಗ್ಗೆ ಪಂಚಾಯಿತಿಗೆ ಅರಿವಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಈ ಭಾಗದಲ್ಲಿ ಮತ್ತಷ್ಟು ಕೊಳವೆಬಾವಿ ಹಾಕಿಸಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಮೊರೆಯಾಗಿದೆ.

ಕಾಯಿಲೆ ಹರಡುವ ತಾಣ: ಗ್ರಾಮದಲ್ಲಿನ ಮೋರಿಗಳನ್ನು ಸ್ವಚ್ಛಗೊಳಿಸಿ ಅದೆಷ್ಟೋ ಕಾಲವಾಗಿದೆ, ಮೋರಿಗಳಲ್ಲಿ ಕಸಕಟ್ಟಿ ಕಟ್ಟಿಕೊಂಡು ಮಲಿನ ನೀರು ಹರಿಯದೆ ನಿಂತಲ್ಲೆ ನಿಂತು ರೋಗ ಹರಡುವ ತಾಣವಾಗಿ ರೂಪುಗೊಂಡಿದೆ. ಅಲ್ಲಲ್ಲಿ ಮೋರಿ ರಿಪೇರಿ ಕೆಲಸ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ, ಕಾಮಗಾರಿಗಳಿಗಾಗಿ ತಂದ ಕಲ್ಲು, ಮರಳು ಮೋರಿ ಪಾಲಾಗಿವೆ. ಸೊಳ್ಳೆ ನೊಣಗಳ ಕಾಟ ವಿಪರೀತವಾಗಿದ್ದು, ಗ್ರಾಮಸ್ಥರು ಪಂಚಾಯಿತಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ವಿದ್ಯುತ್ ಕಣ್ಣಾಮುಚ್ಚಾಲೆ: ಗ್ರಾಮದಲ್ಲಿ ಬಹುತೇಕ ಕೃಷಿ ಆಧಾರಿತ ಕುಟುಂಬಗಳಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು ಹೈರಾಣಾಗಿದ್ದಾರೆ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯದಿಂದಾಗಿ ಜಮೀನುಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮದಲ್ಲಿ ಹಾದು ಹೋಗಿರುವ ವಿದ್ಯುತ್ ಲೇನ್ ಮರಗಿಡಗಳಿಗೆ ತಗಲುತ್ತಿರುವುದರಿಂದ ವಿದ್ಯುತ್ ಕಡಿತದಂತಹ ಸಮಸ್ಯೆ ಸಾಮಾನ್ಯವಾಗಿದೆ, ಈ ಬಗ್ಗೆ ಬೆಸ್ಕಾಂಗೆ ಅನೇಕ ಬಾರಿ ದೂರು ನೀಡಿದರೂ ಸಿಬ್ಬಂದಿ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಮೋರಿಗಳನ್ನು ಸ್ವಚ್ಛಗೊಳಿಸಿ ಅದೆಷ್ಟೋ ಕಾಲವಾಗಿದೆ, ಮೋರಿಯಲ್ಲಿ ಹರಿಯಬೇಕಾದ ಮಲಿನ ನೀರು ರಸ್ತೆಯಲ್ಲಿ ಹರಿಯುತ್ತಿದೆ, ಹಿರಿಯ ನಾಗರೀಕರು, ಮಕ್ಕಳು ರೋಗರುಜಿಗಳನ್ನು ಎದುರಿಸಬೇಕಾಗಿದೆ, ಈ ಬಗ್ಗೆ ಪಂಚಾಯಿತಿ ಜಾಣಕುರುಡು ಪ್ರದರ್ಶಿಸುತ್ತಿದೆ.
ಮುನಿಯಮ್ಮ, ಜಡಿಗೇನಹಳ್ಳಿ

ಹೋಬಳಿ ರಾಜಕೀಯದ ವಿಷಯದಲ್ಲಿ ಎತ್ತಿದ ಕೈ ಎನ್ನಬಹುದು, ಅದರೆ ಅಭಿವೃದ್ಧಿ ವಿಷಯದಲ್ಲಿ ಯಾರೂ ಕೇರ್ ಮಾಡುವುದಿಲ್ಲ, ರಾಜಕೀಯ ಮುಖಂಡರ ಹಿಂದೆಮುಂದೆ ಸುಳಿದಾಡುವ ಸ್ಥಳೀಯ ಮುಖಂಡರು ಗ್ರಾಮದಲ್ಲಿನ ಮೂಲಸೌಕರ್ಯಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅಭಿವೃದ್ಧಿ ವಂಚಿತ ಗ್ರಾಮಕ್ಕೆ ಡಿಸಿ ನಡಿಗೆ ಕಾರ್ಯಕ್ರಮದ ಮೂಲಕವಾದರೂ ಪರಿಹಾರ ಸಿಗಬಹುದೆಂಬ ನಿರೀಕ್ಷೆ ಇದೆ.
ಶಾಂತಕುಮಾರ,
ಸ್ಥಳೀಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net