ಜೋಡಿ ರಸ್ತೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ

images
Published on


ಕೊಳ್ಳೇಗಾಲ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಹಾಗೂ ಡಾ. ರಾಜ್‌ಕುಮಾರ್ ರಸ್ತೆಯನ್ನು 80 ಅಡಿ ಅಳತೆಯಲ್ಲಿ ಜೋಡಿ ರಸ್ತೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ತೀರ್ಮಾನವನ್ನು ಕೊಳ್ಳೇಗಾಲ ನಗರಸಭೆ ಕೈಗೊಂಡಿದೆ.


ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಗರಸಭಾಧ್ಯಕ್ಷೆ ರೇಖಾ ಅಧ್ಯಕ್ಷತೆ, ಶಾಸಕ ಎ.ಆರ್.ಕೃಷ್ಣಮೂರ್ತಿ ಉಪಸ್ಥಿತಿಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ನಗರಸಭೆ ಸದ್ಯಸ್ಯರ ಸಮ್ಮತಿಯೊಂದಿಗೆ ನಿರ್ಧಾರ ಕೈ ಗೊಳ್ಳಲಾಯಿತು.


ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಕೊಳ್ಳೇಗಾಲ ಪಟ್ಟಣ ವ್ಯಾಪರೀಕರಣಕ್ಕೆ ಹಸರುವಾಸಿಯಾಗಿದೆ. ಹಲವು ವರ್ಷಗಳಿಂದ ಸಾರ್ವಜನಿಕರಿಂದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ರಾಜ್ ಕುಮಾರ್ ರಸ್ತೆ ಅಭಿವೃದ್ಧಿಗೆ ಒತ್ತಾಯವಿದೆ. ಈಗಾಗಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಚರ್ಚಿಸಿದ್ದೇನೆ. ಸರ್ಕಾರ ಅಧೀನ ಕಾರ್ಯದರ್ಶಿ ಸತ್ಯ ನಾರಾಯಣ್ ಅವರ ಜತೆ ಮಾತನಾಡಿದ್ದೇನೆ ಎಂದಿದ್ದಾರೆ. ಪ್ರಸ್ತಾವನೆ ಬಂದರೆ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದರು.


ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ್ ಮಾತನಾಡಿ, ಜೋಡಿ ರಸ್ತೆಗಾಗಿ ಇಲಾಖೆಯಿಂದ ನಾವು ಲೈನ್ ಎಸ್ಟಿಮೆಟ್ ಮಾಡಿಕೊಂಡಿದ್ದೇವೆ. 80 ಅಡಿ ಅಳತೆಯಲ್ಲಿ ಜೋಡಿ ರಸ್ತೆ ನಿರ್ಮಿಸಲು ಗುರುತಿಸಲಾಗಿದೆ. ನಗರಸಭೆಯ ಟೆಕ್ನಿಕಲ್ ತಂಡ 40 ಅಡಿ ಯಂತೆ ಎರಡು ಬದಿಗೆ 80 ಅಡಿ ರಸ್ತೆ ಮಾರ್ಕ್ ಮಾಡಿ ಕೊಡಬೇಕು. ನಂತರ, ಇಲಾಖೆಗೆ ಹಸ್ತಾಂತರ ಮಾಡಿದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಎರಡು ಮಾರ್ಗದಲ್ಲಿ ಡಬಲ್ ರೋಡ್: ಪಿಡಬ್ಲುೃಡಿ ಇಂಜಿನಿಯರ್ ಸುರೇಂದ್ರ ಮಾತನಾಡಿ, 80 ಅಡಿ ರಸ್ತೆಯು ಎಂಜಿಎಸ್‌ವಿ ವೃತ್ತದಿಂದ ಮಸೀದಿ ಸರ್ಕಲ್, ಚಿಲ್ಡ್ರನ್ ಪಾರ್ಕ್ ಸರ್ಕಲ್ ವೃತ್ತ ಮಾರ್ಗವಾಗಿ ಸಾಮಂತಗೇರಿಯಲ್ಲಿ ಸಾಗಿ ಎನ್.ಎಚ್.ರಸ್ತೆಗೆ ಸೇರುತ್ತದೆ. ಇದು 1.4 ಕಿ.ಮೀ ಆಗುತ್ತದೆ. ಮತ್ತೊಂದು ಮಸೀದಿ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಸೇರುತ್ತದೆ ಎಂದರು.

ನಗರಸಭೆ ಆಸ್ತಿ ಉಳಿಸಿ : ಪಟ್ಟಣ ವ್ಯಾಪ್ತಿಯ ರಸ್ತೆಗಳಲ್ಲಿ ಕೆಲವರು ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ನಗರಸಭೆ ಅಧಿಕಾರಿಗಳು ವೈಫಲ್ಯದಿಂದ ಹೀಗಾಗಿದೆ. ನಗರಸಭೆ ಆಸ್ತಿ ರಕ್ಷಣೆ ಆಗಬೇಕಿದೆ. ಅನಧಿಕೃತ ಕಟ್ಟಡ, ರಸ್ತೆಗಳಲ್ಲಿ ಮನೆ ನಿರ್ಮಾಣ, ಒತ್ತುವರಿ ಆಗಿರುವ ಸರ್ಕಾರಿ ಆಸ್ತಿಗಳು ಇವೆಲ್ಲವನ್ನು ನಗರಸಭೆ ಆಯುಕ್ತರು ಸೇರಿದಂತೆ ಇತರೆ ಅಧಿಕಾರಿಗಳು ಗುರುತಿಸಬೇಕು. ಕಾರ್ಯಾಂಗ ಅಚ್ಚುಕಟ್ಟು ಆಗಿ ಕಾರ್ಯನಿರ್ವಾಹಿಸ ಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಾಕೀತು ಮಾಡಿದರು.

ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ: ನಗರಸಭೆ ಸದಸ್ಯ ಪ್ರಕಾಶ್ ಮಾತನಾಡಿ, ಬಾರ್, ರೆಸ್ಟೋರೆಂಟ್, ಹೋಟೆಲ್, ಮಳಿಗೆಗಳಲ್ಲಿ ಎಗ್ಗಿಲ್ಲದೆ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರು. ಅಲ್ಲದೆ, ಜನನಕ್ಕಿಂತ ಮರಣ ಸಂಖ್ಯೆ ಹೆಚ್ಚಾಗಿದೆ ಎಂದು ಸಭೆ ಗಮನ ಸೆಳೆದರು.
ಟಿಚ್‌ಒ ಗೋಪಾಲ್ ಪ್ರತಿಕ್ರಿಯಿಸಿ, ಕೊಳ್ಳೇಗಾಲ ಭಾಗದಲ್ಲಿ ಮದ್ಯ ಸೇವನೆ ಹೆಚ್ಚಿದ್ದು, ಬಲ ಹೀನತೆಯಿಂದ ಮರಣ ಪ್ರಮಾಣ ಹೆಚ್ಚಾಗಿದೆ ಎಂದರು. ನಗರಸಭೆ ಸದಸ್ಯ ಪ್ರಶಾಂತ್, ಗಾಂಜಾ, ಡ್ರಕ್ಸ್ ತೆಗೆದುಕೊಳ್ಳುವ ಯುವಕರು ಹೆಚ್ಚಿದ್ದಾರೆ. ಮುಂದಿನ ದಿನಗಳಲ್ಲಿ ಸಾಮಾನ್ಯ ಸಭೆಗೆ ಪೊಲೀಸ್ ಅಧಿಕಾರಿಗಳನ್ನು ಕರೆದು ಕ್ರಮವಹಿಸಿ ಎಂದರು.

ಪ್ರತಿಧ್ವನಿಸಿದ ವಿಜಯವಾಣಿ ವರದಿ: ಅ.16 ರಂದು ವಿಜಯವಾಣಿ ಪ್ರತಿಕೆಯಲ್ಲಿ ಪ್ರಕಟಗೊಂಡ ಮಾಹಿತಿ ಇಲ್ಲದ ನಾಮಫಲಕಗಳು ವರದಿ ಸಭೆಯಲ್ಲಿ ಪ್ರತಿ ಧ್ವನಿಸಿತು. ನಾನು ಶಾಸಕನಾಗಿ ಒಂದೂವರೆ ವರ್ಷ ಆಗಿದೆ. ಆದರೂ ವಾರ್ಡ್‌ಗಳ ಮಾಹಿತಿ ನಾಮಫಲಕಗಳ ಸದಸ್ಯರು, ಸಂಸದರು, ಶಾಸಕರು, ಬಡಾವಣೆ, ವಾರ್ಡ್‌ಗಳ ಮಾಹಿತಿ ಇಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಕ್ರಮವಹಿಸಿ ಎಂದು ತಾಕೀತು ಮಾಡಿದರು.

ಸಭೆ ಬಹಿಷ್ಕರಿಸಿ ಹೊರ ನಡೆದ ಸದಸ್ಯೆ:
ಪಟ್ಟಣದ ಬಸ್ ಟರ್ಮಿನಲ್ ಕಾಮಗಾರಿ ದಾಖಲೆ ನೀಡಬೇಕೆಂದು ಅರ್ಜಿ ನೀಡಿದ್ದೇನೆ. ಮಾಹಿತಿ ನೀಡದೆ ನಗರಸಭೆ ಪೌರಾಯುಕ್ತ ರಮೇಶ್, ಎಇಇ ಸುರೇಶ್, ಇಂಜಿನಿಯರ್ ನಾಗೇಂದ್ರ ಸತಾಯಿಸುತ್ತಿದ್ದಾರೆ. ಇವರು ಕೇಳಿರುವುದನ್ನು ಕೊಟ್ಟು ನಾವು ಸಿಕ್ಕಿಹಾಕಿಳ್ಳಬೇಕಾ ಎಂದು ಎಇಇ ಸುರೇಶ್ ಅವರಿಗೆ ಜೆಇ ನಾಗೇಂದ್ರ ಹೇಳಿದ್ದಾರೆ ಎಂದು ಸದಸ್ಯೆ ಜಯಮೇರಿ ಪ್ರಸ್ತಾಪ ಮಾಡಿದರು.
ಶಾಸಕರು ಎ.ಆರ್.ಕೃಷ್ಣಮೂರ್ತಿ ನ್ಯಾಯ ಯುತವಾಗಿದ್ದರೆ ಮಾಹಿತಿ ನೀಡಿ ಎಂದರು. ನಂತರ, ಅಧಿಕಾರಿಗಳು ಮಾಹಿತಿ ನಮ್ಮ ಬಳಿ ಇಲ್ಲ ಎಂದು ಉತ್ತರಿಸಿದರು. ಇಲ್ಲದಿದ್ದರೆ ಹಿಂಬರ ನೀಡಿ ಎಂದು ಶಾಸಕರು ಪ್ರತಿಕ್ರಿಯಿಸಿದರು. ಬಸ್ ನಿಲ್ದಾಣದ ಜಾಗ, ನಿರ್ಮಾಣದ ಹಣ ನಮ್ಮದು. ನಮ್ಮಲ್ಲಿ ಮಾಹಿತಿ ಇಲ್ಲ ಅಂದರೆ ಹೇಗೆ. ಮಹಿಳಾ ಸದಸ್ಯೆ ಆದ ಕಾರಣ ಹೀಗೆ ಮಾಡುತ್ತಿದ್ದಾರೆ ಎಂದು ಕಣ್ಣೀರಿಡುತ್ತ ಸಭೆ ಬಹಿಷ್ಕರಿಸಿ ಜಯಮೇರಿ ಹೊರ ನಡೆದರು.

ಅಧಿಕಾರಿಗಳಿಗೆ ತರಾಟೆ: ಕಳೆದ ಸಾಮಾನ್ಯ ಸಭೆಯ ನಡಾವಳಿಗಳಿಗಳ ಒಂದು ಕೆಲಸವೂ ಆಗಿಲ್ಲ ಎಂದು ಶಾಸಕರು ಎಇಇ ಸುರೇಶ್ ಅವರಿಗೆ ತರಾಟೆಗೆ ತೆಗೆದು ಕೊಂಡರು. ಪೌರಾಯುಕ್ತ ಪ್ರತಿಕ್ರಿಯಿಸಿ, ಶೇ.80 ರಷ್ಟು ಕಾಮಗಾರಿ ಟೆಂಟರ್ ಹಂತದಲ್ಲಿದೆ ಎಂದರು. ಈ ವೇಳೆ ಯುಜಿಡಿ, ಕುಡಿಯುವ ನೀರು, ಬೀದಿ ದೀಪಗಳು, ಸ್ವಚ್ಛತೆ ಇನ್ನಿತರ ವಿಷಯ ಬಗ್ಗೆ ಚರ್ಚೆ ನಡೆಯಿತು. ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷೆ ಎ.ಪಿ. ಶಂಕರ್ ಹಾಗೂ ನಗರಸಭೆ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net