

ಮೈಸೂರು: ಕೃಷಿ ಭೂ ದಾಖಲಾತಿ ವಿತರಣೆ ಕೆಲಸ ಸುಲಭವಾಗಿದೆ. ಆದರೆ, ಅನೇಕ ಕಾನೂನು ತಂದು ಜಟಿಲಗೊಳಿಸಿದ್ದು, ಇದರಿಂದಾಗಿ ರೈತರು, ಜನರು ತೊಂದರೆಗೆ ಸಿಲುಕಿಕೊಂಡಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಅಖಿಲ ನಾಮಧಾರಿಗೌಡ ಸಂಘದ ವತಿಯಿಂದ ಗಂಗೋತ್ರಿ ಬಡಾವಣೆಯಲ್ಲಿರುವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಘದ ಅಮೃತ ಮಹೋತ್ಸವ, ಪ್ರೊ.ಎಚ್.ಸಿ.ಲೋಹಿತಾಶ್ವ ಹುಲ್ಲಟ್ಟಿ ಅವರ ‘ನಾಮಧಾರಿಗೌಡರ ನೆಲೆನಾಡು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಲ ರೈತರು ದಶಕಗಳಿಂದ ಬೇಸಾಯ ಮಾಡಿಕೊಂಡು ಬಂದಿದ್ದು, ಸಾಗುವಳಿ ಪತ್ರ ಪಡೆದಿಲ್ಲ. ಗೋಮಾಳ ಎಂದಿದ್ದರೆ ಸಾಗುವಳಿ ಪತ್ರ ಕೊಡುತ್ತಿಲ್ಲ. ನಮೂನೆ 53ರ ಅರ್ಜಿ ಹಾಕಿದರೆ ಸಾಗುವಳಿ ಪತ್ರ ಕೊಡಿ. ನಮೂನೆ 57ರಡಿ ಸಲ್ಲಿಸುವ ಅರ್ಜಿಗೆ ಸಾಗುವಳಿ ಪತ್ರ ಕೊಡಬೇಡಿ ಎಂದು ನಿಯಮ ಹೇಳುತ್ತದೆ. ಈ ಬಗ್ಗೆ ಕೇಳಿದರೆ ಸುಪ್ರೀಂಕೋರ್ಟ್ ತಡೆ ನೀಡಿದೆ ಎಂದು ಅಧಿಕಾರಿಗಳು ನೆಪ ಹೇಳುತ್ತಾರೆ. ಹೊಸದಾಗಿ ಇರುವ ಗೋಮಾಳವನ್ನು ಹಂಚಿಕೆ ಮಾಡುತ್ತಾರೆ ಎಂಬ ಭಾವನೆಯಿಂದ ಕೋರ್ಟ್ ಹೀಗೆ ಆದೇಶಿಸಿದೆ. ಆದರೆ, ಇದು ಹತ್ತಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಾಗ ಎಂಬುದನ್ನು ಕೋರ್ಟ್‌ಗೆ ಹೇಳುವ ಕೆಲಸವಾಗುತ್ತಿಲ್ಲ. ಇದರಿಂದ ಸಾಗುವಳಿಯೇ ಸಿಗುತ್ತಿಲ್ಲ ಎಂದು ದೂರಿದರು.
ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ರೈತರ ಪರ ಸರ್ಕಾರ ನೀಡುತ್ತೇವೆ ಎಂದು ಭರವಸೆ ನೀಡಿ ಮತ ಪಡೆಯುತ್ತಾರೆ. ಇದಕ್ಕಾಗಿ ಸುಳ್ಳು ಹೇಳುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಮರೆಯುತ್ತಾರೆ. ಶೇ.70ರಷ್ಟು ಶಾಸಕರು ರೈತರ ಮಕ್ಕಳು. ಆದರೆ, ಸದನದಲ್ಲಿ ರೈತರ ಪರವಾಗಿ ಮಾತನಾಡಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕೃಷಿ ಪಂಪ್‌ಸೆಟ್‌ಗೆ 10 ಗಂಟೆ ವಿದ್ಯುತ್ ಪೂರೈಕೆ, ರಿಯಾಯಿತಿ ದರದಲ್ಲಿ ರಸಗೊಬ್ಬರ, ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ಶೀತಲೀಕರಣ ಘಟಕಗಳ ಸ್ಥಾಪನೆ, ಬೆಲೆ ಕುಸಿದಾಗ ಎಲ್ಲ ಕೃಷಿ ಉತ್ಪನ್ನಗಳನ್ನು ಖರೀದಿಸಲು ದೊಡ್ಡ ಮೊತ್ತದ ಆವರ್ತ ನಿಧಿ ಸ್ಥಾಪಿಸುವಂತೆ ಕೃಷಿಕರು ಆಗ್ರಹಿಸುತ್ತಲೇ ಇದ್ದಾರೆ. ಆದರೆ, ಯಾವ ಸರ್ಕಾರವೂ ಇತ್ತ ಕಿವಿಗೊಡುತ್ತಿಲ್ಲ. ಈವರೆಗೂ ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸಲು ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಖಿಲ ನಾಮಧಾರಿಗೌಡ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಎನ್.ಆರ್. ಚಂದ್ರೇಗೌಡ ಮಾತನಾಡಿ, ಅಖಿಲ ನಾಮಧಾರಿಗೌಡ ಸಮುದಾಯವನ್ನು ಹಿಂದುಳಿದ ‘ಪ್ರವರ್ಗ 2ಎ’ಗೆ ಹಾಗೂ ಕೇಂದ್ರದಲ್ಲಿ ಒಬಿಸಿಗೆ ಸೇರಿಸಬೇಕೆಂದು 25 ವರ್ಷಗಳಿಂದ ಹೋರಾಡುತ್ತಿದ್ದು, ಯಾವ ಸರ್ಕಾರವೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ವೆಬ್‌ಸೈಟ್ ಅನಾವರಣಗೊಳಿಸಲಾಯಿತು. ಲೋಗೊ ಹಾಗೂ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಸೋಮವಾರಪೇಟೆ ಕ್ಷೇತ್ರಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ’ನಾಮಧಾರಿಗೌಡರ ನೆಲೆನಾಡು’ ಕೃತಿ ಕುರಿತು ಮಾತನಾಡಿದರು.
ಸಂಘದ ಅಧ್ಯಕ್ಷ ಪಿ.ಚನ್ನರೇವಣ್ಣ, ಮಾಜಿ ಅಧ್ಯಕ್ಷರಾದ ಡಿ.ಸುಂದರದಾಸ್, ಸಿ.ಜಿ. ನಾಗರಾಜು, ಉಪಾಧ್ಯಕ್ಷರಾದ ದೇವದಾಸ್, ಎಚ್.ಎಚ್. ವಿಜಯ್, ಎಚ್.ಎಸ್. ಅಶೋಕ್, ಕೆ.ಆರ್. ಗಿರೀಶ್, ಕಟ್ಟಡ ಸಮಿತಿ ಅಧ್ಯಕ್ಷ ಕೆ.ಎಸ್. ಜಯರಾಮ್, ಕಾನೂನು ಸಲಹೆಗಾರ ಕೆ.ಎಸ್. ನಾಗರಾಜು ಇನ್ನಿತರರು ಪಾಲ್ಗೊಂಡಿದ್ದರು.