

ಅರಸೀಕೆರೆ: ನಗರ ನಿವಾಸಿಗಳ ಕುಂದು-ಕೊರತೆಗಳನ್ನು ಚರ್ಚಿಸಲು ವೇದಿಕೆಯಾಗಬೇಕಿದ್ದ ಸಾಮಾನ್ಯ ಸಭೆ ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಹಾಗೂ ಸದಸ್ಯ ಸಮೀವುಲ್ಲಾ ನಡುವಿನ ಮಾತಿನ ಚಕಮಕಿ, ಜಟಾಪಟಿಗೆ ಬಲಿಯಾಯಿತು.
ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಸಭೆ ಆರಂಭವಾಗುತ್ತಿದ್ದಂತೆ ಮೈಕ್ ಹಿಡಿದ ಸಮೀವುಲ್ಲಾ ಹಿಂದಿನ ಸಭಾ ನಡಾವಳಿಗಳ ತೀರ್ಮಾನ ಕುರಿತು ಚರ್ಚೆ ನಡೆಸಿ ನಿರ್ಣಯ ದಾಖಲಿಸಬೇಕು. ಆನಂತರ ಇನ್ನುಳಿದ ವಿಷಯಗಳ ಬಗ್ಗೆ ಮಾತನಾಡೋಣ ಎಂದು ಪಟ್ಟುಹಿಡಿದರು.
ಇದರಿಂದ ಕೆರಳಿದ ಅಧ್ಯಕ್ಷ ಸಿ.ಗಿರೀಶ್ ಯಾರ ಅವಧಿಯಲ್ಲಿ ಏನೇನು ನಿರ್ಣಯ ಕೈಗೊಳ್ಳಲಾಗಿದೆ. ಸ್ಥಾಯಿ ಸಮಿತಿ ರಚನೆ, ಅನುಮೋದನೆ ಮಾಡಲಾಗಿದೆ ಎಂಬುದು ನನಗೆ ಗೊತ್ತಿದೆ. ಅಧಿಕಾರ ನಡೆಸುವುದನ್ನು ನಿಮ್ಮಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಹಿಂದಿನ ಸಭೆಯಲ್ಲಿ ದುರ್ವತನೆ ತೋರಿದ್ದೇನೆ ಎಂದು ಯಾರೋ ಬರೆದ ಸಾಲುಗಳಿಗೆ ಸಹಿ ಮಾಡುವ ಹೆಬ್ಬೆಟ್ಟು ಅಧ್ಯಕ್ಷ ನಾನಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಿ. ನಗರದ ಶುಚಿತ್ವ, ಕುಡಿಯುವ ನೀರು ಪೂರೈಕೆ ಸೇರಿ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಈ ರೀತಿ ಒತ್ತಡ ಹೇರುತ್ತಿರುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು. ಇಬ್ಬರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆದು ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯದಾಯಿತು.
ಕಾಂಗ್ರೆಸ್ ಸದಸ್ಯ ಎಂ.ಆರ್.ವೆಂಕಟಮುನಿ ಮಾತನಾಡಿ, ಸಭೆ ನಡೆಸುವ ಹೆಸರಿನಲ್ಲಿ ಜನರ ತೆರಿಗೆ ಹಣ ಪೋಲು ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ನಗರಸಭೆಯಲ್ಲಿ ಸಕಾಲಕ್ಕೆ ಇ-ಸ್ವತ್ತು ದೊರೆಯದಂತಾಗಿದ್ದು ಜನರ ಕಷ್ಟ ಅರಿತು ಕೆಲಸ ಮಾಡಬೇಕಿದೆ ಎಂದರು.
ಪ್ರಭಾರ ಪೌರಾಯುಕ್ತೆ ವಿಭಾ ವಿ.ರಾಥೋಡ್ ಮಾತನಾಡಿ, ಕೆಲ ತಾಂತ್ರಿಕ ಕಾರಣಗಳಿಂದಾಗಿ ತೊಂದರೆಯಾಗಿದ್ದು ಇನ್ನೆರಡು ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಪಕ್ಷೇತರ ಸದಸ್ಯ ಮೇಲುಗಿರಿಗೌಡ ಎದ್ದುನಿಂತು ಒಬ್ಬರೇ ಎಲ್ಲ ವಿಷಯ ಕುರಿತು ಮಾತನಾಡಲು ಹೊರಟರೆ ನಾವೇನು ಚಂದ ನೋಡಲು ಬಂದಿದ್ದೇವೆಯೇ? ಅಧ್ಯಕ್ಷರು ಹೇಳಿದಂತೆ ನಿರ್ಣಯ ಬರೆಯಿರಿ ಎಂದು ಏರುದನಿಯಲ್ಲಿ ತಾಕೀತು ಮಾಡಿದರೆ, ಅವರಿಗೆ ಬಿಜೆಪಿ ಸದಸ್ಯ ಭಾಸ್ಕರ್ ಬೆಂಬಲಿಸಿದರು.
10ನೇ ವಾರ್ಡ್ ಸದಸ್ಯ ಈಶಣ್ಣ ಮಾತನಾಡಿ, ಜಟಾಪಟಿಯಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ. ನಗರದ ಸಮಗ್ರ ಅಭಿವೃದ್ಧಿ ಮನಗಂಡು ಪ್ರತಿಷ್ಠೆ ಬದಿಗಿರಿಸಿ ಕೆಲಸ ಮಾಡಬೇಕು. ಸಾಮನ್ಯ ಸಭೆ ನಡೆಸಲು 35ರಿಂದ 40 ಸಾವಿರ ರೂ.ಖರ್ಚಾಗುತ್ತಿದ್ದು ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಸುಗಮವಾಗಿ ಸಭೆ ನಡೆಯಲು ಅನುವು ಮಾಡಿಕೊಡದ ಹಿನ್ನೆಲೆಯಲ್ಲಿ ಅಧ್ಯಕ್ಷ ಸಿ.ಗಿರೀಶ್ ಅ.12ಕ್ಕೆ ಮತ್ತೊಂದು ವಿಶೇಷ ಸಭೆ ನಡೆಸುವುದಾಗಿ ಘೋಷಿಸಿ ಸಾಮಾನ್ಯ ಸಭೆ ಮೊಟುಕುಗೊಳಿಸಿದರು.
ಉಪಾಧ್ಯಕ್ಷ ಕಾಂತೇಶ್, ಸದಸ್ಯರಾದ ಶುಭಾ ಮನೋಜ್, ಅನ್ನಪೂರ್ಣ ಇದ್ದರು.