

ಹಾಸನ: ನಗರ ಹಳೇ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ನಿರ್ಮಾಣವಾಗುತ್ತಿರುವ ಜಟಕಾ ಗಾಡಿ ನಿಲ್ದಾಣ ಕಾಮಗಾರಿ ವಿವಾದ ತಾರಕಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮುಂದಿನ ಆದೇಶದವರೆಗೆ ನಿಲ್ದಾಣ ಕಾಮಗಾರಿ ನಿಲ್ಲಿಸುವಂತೆ ಹಾಗೂ ಸ್ಥಳದಲ್ಲಿ 144 ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಡಿ.18 ಸಂಜೆ 7 ಗಂಟೆಯಿಂದ ಮುಂದಿನ ಆದೇಶದವರೆಗೆ ಜಟಕಾ ಗಾಡಿ ನಿಲ್ದಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ಹಾಗೂ ಯಾವುದೇ ರೀತಿಯ ಧರಣಿ, ಪ್ರತಿಭಟನೆ, ಸಂಭ್ರಮಾಚರಣೆ ಹಾಗೂ ಅನವಶ್ಯಕವಾಗಿ ಒಂದೆಡೆ 4 ಜನಕ್ಕಿಂತ ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿದ್ದಾರೆ.
ನಿಷೇಧಿತ ಪ್ರದೇಶ ಹಾಗೂ ಅವಧಿಯಲ್ಲಿ ಯಾವುದೇ ಬಹಿರಂಗ ಸಾರ್ವಜನಿಕ ಸಭೆ-ಸಮಾರಂಭ, ಜಾಥ, ಮೆರವಣಿಗೆ ಇತ್ಯಾದಿಗಳನ್ನು ನಡೆಸುವುದನ್ನು ನಿರ್ಬಂಧಿಸಿದೆ. 4 ಜನರಿಗಿಂತ ಹೆಚ್ಚು ಜನರು ಒಟ್ಟಾಗಿ ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಶಸ್ತ್ರಗಳು, ದೊಣ್ಣೆಗಳು, ಕತ್ತಿಗಳು, ಬಂದೂಕು, ಚಾಕು, ಕೋಲು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಿದೆ ಹಾಗೂ ಪಟಾಕಿಗಳನ್ನು ಸಿಡಿಸುವುದು, ಯಾವುದೇ ಸ್ಫೋಟಕಗಳನ್ನು ಒಯ್ಯುವುದನ್ನು ನಿಷೇಧಿಸಿದೆ.
ನಿಷೇಧಿತ ಪ್ರದೇಶದಲ್ಲಿ ಯಾವುದೇ ವಾಹನಗಳಿಗೆ ಧ್ವನಿವರ್ಧಕಗಳನ್ನು ಅಳವಡಿಸಿಕೊಂಡು ಸಾಗಲು ಅವಕಾಶವಿರುವುದಿಲ್ಲ. ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡಬಹುದಾದ ಅಥವಾ ರಾಜ್ಯದ ಭದ್ರತೆಯನ್ನು ಕುಗ್ಗಿಸಬಹುದಾದ ಅಪರಾಧವನ್ನು ಮಾಡಲು ಪ್ರಚೋದಿಸಬಹುದಾದ ಬಹಿರಂಗ ಘೋಷಣೆ ಕೂಗಲು, ಹಾಡುಗಳನ್ನು ಹಾಡುವುದು, ಸಂಗೀತವನ್ನು ನುಡಿಸುವುದು, ಆವೇಶಭರಿತ ಭಾಷಣ ಮಾಡುವುದು, ಆಂಗಿತ ಸೂಚನೆಗಳನ್ನು ನೀಡುವುದು ಮತ್ತು ಚಿತ್ರಗಳನ್ನು, ಸಂಕೇಗಳನ್ನು ಭಿತ್ತಿ ಪತ್ರಗಳನ್ನು ಆಥವಾ ಇತರೆ ಯಾವುದೇ ವಸ್ತು ಅಥವಾ ಪದಾರ್ಥಗಳನ್ನು ತಯಾರಿಸುವುದು, ಪ್ರದರ್ಶಿಸುವುದು ಅಥವಾ ಪ್ರಸಾರ ಮಾಡುವುದನ್ನು ನಿರ್ಬಂಧಿಸಿದೆ.
ಯಾವುದೇ ವ್ಯಕ್ತಿಯು ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ದ ಭಾರತೀಯ ದಂಡ ಸಂಹಿತೆ ಕಲಂ 188 ಅಡಿಯಲ್ಲಿ ಹಾಗೂ ಅನ್ವಯವಾಗುವಂತಹ ಇತರೆ ಕಾಯ್ದೆಗಳಡಿ ನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದೆ.