

ಹಾಸನ: ವಿವಿಧತೆಯಲ್ಲಿ ಏಕತೆಗೆ ಹೆಸರಾಗಿರುವ ಕರ್ನಾಟಕ ತನ್ನದೇ ಆದ ಐತಿಹಾಸಿಕ, ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಜಗತ್ತಿನಾದ್ಯಂತ ಹೆಸರಾಗಿದೆ. ಅದಕ್ಕೆಲ್ಲ ಕಾರಣರಾದ ನಮ್ಮ ಹಿರಿಯರಿಗೆ ಈ ನಾಡನ್ನು ಕಟ್ಟಿದ ಗಣ್ಯರಿಗೆ ಕೃತಜ್ಞತಾ ನಮನ ಸಲ್ಲಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಹೇಳಿದರು.
ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ ಮಾಡಿ ನಮನ ಸಲ್ಲಿಸಿ, ನಂತರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಕನ್ನಡ ರಾಜ್ಯೋತ್ಸವ ಸಂದೇಶ ನೀಡಿದರು. ಕನ್ನಡ ಭಾಷೆಗೆ 3 ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಕಿ.ಪೂ.2ನೇ ಶತಮಾನದಲ್ಲೇ ಕನ್ನಡ ಭಾಷೆ, ಸಾಹಿತ್ಯ ಇತ್ತೆಂದು ವಿದ್ವಾಂಸರು ಪ್ರತಿಪಾದಿಸಿದ್ದಾರೆ. ಆ ನಂತರದಲ್ಲಿ ಹಂತ ಹಂತವಾಗಿ ವಿವಿಧ ಸ್ವರೂಪಗಳಲ್ಲಿ ನಮ್ಮ ಭಾಷೆ, ಸಂಸ್ಕೃತಿ, ಪದ್ಧತಿ, ಪರಂಪರೆಗಳು ಬೆಳೆದು ಬಂದಿವೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ನಮ್ಮ ಸಾಹಿತ್ಯಿಕ ಶ್ರೀಮಂತಿಕೆಯ ಸಂಕೇತವಾಗಿದೆ ಎಂದರು.
ಶಾತವಾಹನರು, ಚಾಲುಕ್ಯರು, ಕದಂಬರು, ರಾಷ್ಟ್ರಕೂಟರು, ಸೇವುಣರು, ಹೊಯ್ಸಳರು, ತಲಕಾಡು ಗಂಗರು, ವಿಜಯನಗರ ಅರಸರು, ನಾಯಕರು, ಬಹುಮನಿ ಸುಲ್ತಾನರು, ಬ್ರಿಟಿಷರು ಸೇರಿದಂತೆ ಹತ್ತು ಹಲವು ಆಳರಸರ ಆಡಳಿತದಲ್ಲಿ ನಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು ಬಂದ ಹೆಮ್ಮೆ ಕನ್ನಡಿಗರದ್ದು. ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕರಂತಹ ಕೆಚ್ಚೆದೆಯ ಕಲಿಗಳ ವೀರ ಪರಂಪರೆಯೂ ನಮ್ಮಲ್ಲಿದೆ. ಅದೇ ರೀತಿ ಕರ್ನಾಟಕ ಶಿಲ್ಪಕಲೆಗಳ ತವರೂರು ಕೂಡ ಹೌದು. ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಈ ಜಿಲ್ಲೆಯ ವಿಶ್ವವಿಖ್ಯಾತ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಾದರೆ, ಹಂಪೆ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಹೀಗೆ ನೂರಾರು ಸ್ಥಳಗಳು ನಮ್ಮ ನಾಡಿನ ಭವ್ಯ ಪರಂಪರೆ ಇತಿಹಾಸವನ್ನು ಇಂದಿಗೂ ಸಾರುತ್ತಿವೆ. ಬೇಲೂರು-ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳು ಇತ್ತೀಚೆಗೆ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿದೆ. ಇದು ಸಂತದ ವಿಷಯ ಎಂದು ತಿಳಿಸಿದರು.
ಇನ್ನು ರಾಜ್ಯದ ಮಟ್ಟಿಗೆ ಹೇಳುವುದಾದರೆ ಮನುಕುಲ ತಾನೊಂದೇ ವಲಂ ಎಂದು ಸಾರಿದ ಆದಿ ಕವಿ ಪಂಪನಿಂದ ಹಿಡಿದು ರನ್ನ, ಜನ್ನ, ಪೊನ್ನ, ಹರಿಹರ, ರಾಘವಾಂಕ, ಕುಮಾರ ವ್ಯಾಸ, ಕುವೆಂಪು, ಬೇಂದ್ರೆ, ಮಾಸ್ತಿ, ಗಿರೀಶ್ ಕಾರ್ನಾಡ್, ಯು.ಆರ್.ಅನಂತಮೂರ್ತಿ, ಚಂದ್ರಶೇಖರ ಕಂಬಾರ ಮತ್ತಿತರ ಶ್ರೇಷ್ಠ ಕವಿಗಳು, ಸಾಹಿತಿಗಳು, ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸರ್ವಜ್ಞರಂತಹ ಶ್ರೇಷ್ಠ ವಚನಕಾರರು, ಸಮಾಜ ಸುಧಾರಕರು, ಪುರಂದರ ದಾಸ, ಕನಕದಾಸರಂತಹ ದಾರ್ಶನಿಕರು, ನಮ್ಮ ಬದುಕಿನ ದಾರಿಗೆ ದೀಪ ಹಚ್ಚಿ ಬೆಳಗಿದ್ದಾರೆ. ಕುವೆಂಪು ವಿಶ್ವ ಮಾನವ ಸಂದೇಶವನ್ನೇ ಸಾರಿದ್ದಾರೆ ಎಂದು ಕೊಂಡಾಡಿದರು.
ಕನ್ನಡದ ಪ್ರಥಮ ಶಿಲಾ ಶಾಸನ ಹಲ್ಮಿಡಿ ಶಾಸನ ದೊರೆತಿರುವುದು ಈ ಜಿಲ್ಲೆಯ ಕೊಡುಗೆಯೇ. ಎಸ್.ಎಲ್.ಭೈರಪ್ಪ, ಅ.ನ.ಕೃ., ಎಸ್.ಕೆ.ಕರೀಂ ಖಾನ್, ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್, ರಾಜಾರಾಯರು, ಶಾರದಾ ಪ್ರಸಾದ್, ಹಾರ‌್ನಳ್ಳಿ ರಾಮಸ್ವಾಮಿ, ಕಿರಂ ನಾಗರಾಜ್, ಕ್ಯಾಪ್ಟನ್ ಗೋಪಿನಾಥ್, ಗರುಡನಗಿರಿ ನಾಗರಾಜ್, ಜಾವಗಲ್ ಶ್ರೀನಾಥ್, ಪ್ಯಾರಾ ಒಲಂಪಿಯನ್ ಗಿರೀಶ್ ಮುಂತಾದ ಮಹತ್ವದ ಮುತ್ತುಗಳು ಈ ಮಣ್ಣಿನಲ್ಲಿ ಅರಳಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕಂಪನ್ನು ಪಸರಿಸಿವೆ ಎಂದು ಜಿಲ್ಲೆಯ ಸಾಧಕರನ್ನು ಸ್ಮರಿಸಿದರು.
1956ರ ನವೆಂಬರ್ 1 ರಂದು ಮೈಸೂರು ರಾಜ್ಯ ಉದಯವಾಯಿತು. ಆ ನಂತರ 1973ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಇಚ್ಛಾಶಕ್ತಿಯಿಂದಾಗಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಯಿತು. 1973ರಿಂದ 1ನೇ ನವೆಂಬರ್, 2023ಕ್ಕೆ 50 ವರ್ಷ ಪೂರ್ಣಗೊಂಡಿದೆ. ಈ ಶುಭ ಸಂದರ್ಭದಲ್ಲಿ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡುನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ- ಕನ್ನಡಿಗ -ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಮುಖ್ಯಮಂತ್ರಿಯವರು 2023-24ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಗಂಗರ ಕಾಲದ ಚಾವುಂಡರಾಯ 10 ನೇ ಶತಮಾನದಲ್ಲಿ ಸೇನಾಧಿಪತಿ, ವಾಸ್ತುಶಿಲ್ಪಿ, ಕವಿ ಮತ್ತು ಮಂತ್ರಿಯಾಗಿ ಶ್ರವಣಬೆಳಗೊಳದಲ್ಲಿ 57.8 ಅಡಿ ಎತ್ತರದ ಏಕಶಿಲಾ ಗೊಮ್ಮಟ ಮೂರ್ತಿಯನ್ನು ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ವಿಶ್ವ ಪ್ರಸಿದ್ದಿಯಾದ ಗೊಮ್ಮಟ ಮೂರ್ತಿಗೆ 12 ವರ್ಷಕ್ಕೊಮ್ಮೆ ಮಹಾಮಸ್ತಾಕಭೀಷೇಕ ನಡೆಯುತ್ತದೆ. ಜಿಲ್ಲೆ ಮತ್ತು ರಾಜ್ಯದ ಸಮಸ್ತರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಶುಭ ಕೋರಿದರು.
ಸಂಸದ ಶ್ರೇಯಸ್ ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ನಗರ ಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.
ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ
ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯಿಂದ ಶಾಲಾ ಮಕ್ಕಳಿಂದ ಕನ್ನಡ ರಾಷ್ಟ್ರಕೂಟ ವೈಭವ ಕುರಿತ ಗೀತಾ ನೃತ್ಯ ರೂಪಕ ಸಾಂಸ್ಕೃತಿಕ ಕಾರ್ಯಕ್ರಮ ಅದ್ಬುತವಾಗಿ ಮೂಡಿಬಂದಿತು ಜನರ ಮೆಚ್ಚುಗೆಗೆ ಪಾತ್ರವಾಯಿತು. ಸುಮಧುರವಾಗಿ ಮೂಡಿ ಬಂದ ಗೀತಾ ಗಾಯನ ಎಲ್ಲರ ಮನಸೂರೆಗೊಂಡಿತು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ
ಸನ್ಮಾನಿತರ ವಿವರ : ನಾಡು ನುಡಿ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರ: ಎ.ಎಸ್ ಕೃಷ್ಣೇಗೌಡ, ಹಳ್ಳಿ ವೆಂಕಟೇಶ್, ಸೋಮಣ್ಣ, ಹೊ.ರಾ. ಪರಮೇಶ್ ಹೊಡೆನೂರು, ಸುಮಾ ವೀಣಾ, ಬಿ.ವಿ. ಶೈಲಜಾ, ಗುರುರಾಜ, ಟಿ.ಎಸ್.ಲಕ್ಷ್ಮಣ, ಬ್ಯಾಟಾಚಾರ್, ಕೆ.ಜಿ. ಶಿವಶಂಕರ್, ಎಚ್ ಜಿಮಂಜುನಾಥ್, ಎನ್.ಲಕ್ಷ್ಮೀ, ಚಂದನಾ ವೆಂಕಟೇಶ್, ಮೈತ್ರಿ ಎಸ್ ಮಾದಗುಂಡಿ, ರುಕ್ಮಿಣಿ ನಾಗೇಂದ್ರ, ದೇವರಾಜ್, ಮಂಜು, ಯೂಕೂಬ್ ಖಾನ್, ಡಾ.ಶಾಂತ ಅತ್ನಿ, ಜಿ.ಎಚ್ ನಾಗರಾಜ, ಜಯಂತಿ ಚಂದ್ರಶೇಖರ್, ಆರ್.ಬಿ. ಪುಟ್ಟೇಗೌಡ, ಮಂಜು, ಕೆ. ಬಿ. ಸತೀಶ್, ಚನ್ನಂಗಿಹಳ್ಳಿ ಶ್ರೀಕಾಂತ, ಸುಂದರೇಶ್ ಡಿ ಉಡುವರೆ.
ಕ್ರೀಡಾ ಕ್ಷೇತ್ರ: ಸಂತೋಷ ಶೆಟ್ಟಿ, ವೈ.ಎಸ್. ಅನಿಲ್ ಕುಮಾರ್, ಎಚ್.ಎಸ್.ಮೋಹಿತ್, ಎಸ್.ಆರ್. ಕಂಠಿ, ಕನ್ನಡ ಪರ ಹೋರಾಟಗಾರ ಕ್ಷೇತ್ರದಲ್ಲಿ ಎಂ ರಘು ಪಾಳ್ಯ.
ಪತ್ರಿಕೋದ್ಯಮ ಕ್ಷೇತ್ರ: ಪಿ. ಶ್ರೀನಿವಾಸ್, ಎಸ್ ಡಿ ರಂಗಸ್ವಾಮಿ, ವಿ.ಮಧುಸೂದನ್
ಸಾಮಾಜಿಕ ಕ್ಷೇತ್ರ: ಗಿಡ್ಡಮ್ಮ, ಪುಷ್ಪಗಿರಿ ಮಠ ಹಾಗೂ ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ಸಂಸ್ಥೆ, ಜಿ.ಎಸ್. ಕಲಾವತಿ ಮಧುಸೂದನ, ಪ್ರಕಾಶ, ಶಿವಮ್ಮ ಸಾಲಿ, ರಾಜೇಶ್, ಎಸ್.ರವಿ, ಡಾ. ಜಮೀರ್ ಅಹ್ಮದ್, ಚೇತನ್ ಜೈನ್, ಲತಾ, ಎಚ್.ಎಸ್. ಭಾನುಮತಿ, ಅಪೂರ್ವ ಅಂಗಡಿ, ಬಿ.ಎಚ್.ರಾಜು, ಕಾಳಪ್ಪ, ಎಚ್.ಜಿ.ಗಣೇಶ್.