ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ದೂರಿ

april 3 kottur 01
Published on

ಕೊಟ್ಟೂರು: ಪಟ್ಟಣದಲ್ಲಿ ಚಾನುಕೋಟಿ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಷಷ್ಠಿ ಸಂಭ್ರಮ ಮತ್ತು ಪಂಚಾಚಾರ್ಯರ ಯುಗಮಾನೋತ್ಸವದ ಸಮಾರೋಪ ಕಾರ್ಯಕ್ರಮಕ್ಕೂ ಮುನ್ನ ಗುರುವಾರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.

ಪಟ್ಟಣದ ಚಿರಬಿ ಮಾರ್ಗದಲ್ಲಿರುವ ಉಜ್ಜಿನಿ ಮಠದ ಗದ್ದುಗೆಯಿಂದ ಉಜ್ಜಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಾಶಿ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಿರಿಯ ಜಗದ್ಗುರು ಡಾ.ಚನ್ನಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಆರಂಭವಾಯಿತು. ಮೊದಲ ಪಲ್ಲಕ್ಕಿಯನ್ನು ವೀರಶೈವ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿ ಇಡಲಾಗಿತ್ತು. ಒಟ್ಟು ಐದು ಪಲ್ಲಕ್ಕಿಗಳ ಉತ್ಸವ ನಡೆಯಿತು.

ಉಜ್ಜಿನಿ ವೃತ್ತ, ಗಾಂಧಿ ವೃತ್ತ, ಬಸ್ ನಿಲ್ದಾಣ, ಎಪಿಎಂಸಿ ಮಾರ್ಗವಾಗಿ ಸರ್ಕಾರಿ ಪ.ಪೂ. ಕಾಲೇಜ್ ಮೈದಾನಕ್ಕೆ ಮೆರವಣಿಗೆ ಆಗಮಿಸಿತು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು, ವೀರಗಾಸೆ, ನಂದಿಕೋಲು, ಕಂಸಾಳೆ, ಡೊಳ್ಳು, ಮುಂತಾದ ವಾದ್ಯಗಳು ಮೆರವಣಿಗೆಗೆ ಮೆರುಗು ನೀಡಿದವು. 30ಕ್ಕೂ ಹೆಚ್ಚು ಶಿವಾಚಾರ್ಯರರು ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net