ಜಗದೀಶ ಹತ್ಯೆ ವಿರೋಧಿಸಿ ಪ್ರತಿಭಟನೆ

25-07-wadi 01.
Published on

ವಾಡಿ: ಶಹಬಾದ್ ನಗರದಲ್ಲಿ ಶುಕ್ರವಾರ ನಡೆದ ವಾಡಿ ಯುವಕ ಜಗದೀಶ್ ಅವರ ಹತ್ಯೆ ವಿರೋಧಿಸಿ ವಾಡಿ ಸಾರ್ವಜನಿಕ ಹಿತಾಸಕ್ತಿ ಒಕ್ಕೂಟದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಎದುರು ಶವವಿಟ್ಟು ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ರಾಜು ಮುಕ್ಕಣ್ಣ ಮಾತವಾಡಿ, ಮಾನವೀಯತೆ ದೃಷ್ಟಿಯಿಂದ ಮಾತ್ರೆ ತರಲು ದ್ವಿಚಕ್ರ ವಾಹನದ ಮೇಲೆ ವಿವಾಹಿತ ಮಹಿಳೆಯನ್ನು ಕರೆದುಕೊಂಡು ಹೋದಾಗ ಅನೈತಿಕ ಸಂಬಂಧವೆಂದು ಸಂಶಯಪಟ್ಟು ಆ ಯುವಕನಿಗೆ ಮನಬಂದಂತೆ ಹೊಡೆದು ಸಾಯಿಸಿದ್ದು ಅಪರಾಧ. ಆರೋಪಿಗಳಿಗೆ ಉಗ್ರವಾದ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಮೃತ ಯುವಕ ಎಸಿಸಿ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ವಯಸ್ಸಾದ ತಂದೆ-ತಾಯಿ, ಪತ್ನಿ ಮೂವರು ಮಕ್ಕಳು, ಸಹೋದರ ಸೇರಿ ಮನೆಯ ಸಂಪೂರ್ಣ ಜವಾಬ್ದಾರಿ ಇವನ ಮೇಲೆಯೇ ಇತ್ತು. ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ನಗರಾಧ್ಯಕ್ಷ ಬಸವರಾಜ ಪಂಚಾಳ, ಕಾಂಗ್ರೆಸ್ ಯುವ ಮುಖಂಡ ಅಲ್ತಾಫ್ ಸೌದಾಗರ್ ಮಾತನಾಡಿ, ಧರ್ಮಾಧಾರಿತ ಹಲ್ಲೆಗಳು ಯಾರೇ ಮಾಡಿದರೂ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಗಲಭೆ ಸೃಷ್ಟಿಸುವ ಇಂತಹ ಕಿಡಿಗೇಡಿಗಳಿಗೆ ನೀಡುವ ಶಿಕ್ಷೆ ಅಪರಾಧ ಲೋಕಕ್ಕೆ ಪಾಠವಾಗಬೇಕು ಎಂದರು.
ವೀರಣ್ಣ ಯಾರಿ, ವಿಠ್ಠಲ್ ನಾಯಕ್, ಮಲ್ಲಯ್ಯ ಗುತ್ತೇದಾರ್, ಶರಣು ನಾಟೇಕರ್, ಪೃಥ್ವಿರಾಜ್ ಚೌಹಾಣ್, ಶಂಕರ್ ಜಾಧವ್, ಶ್ರವಣಕುಮಾರ್ ಮೋಸಲಗಿ, ತುಕಾರಾಮ್ ರಾಥೋಡ್, ಜಹೀರ್ ಖಾನ್, ರಾಜೇಶ್ ಕಾಂಬ್ಳೆ, ಸುನಿಲ್ ಗುತ್ತೇದಾರ್, ಸಿದ್ದು ಪೂಜಾರಿ, ಸಿದ್ದಯ್ಯ ಶಾಸ್ತ್ರ್ರಿ ನಂದೂರಮಠ, ನಾಗೇಂದ್ರ ಬೊಮ್ಮನಹಳ್ಳಿ ರಘು ಕೋಳಿ, ಹಲವರು ಇದ್ದರು.
ಬಂಧನ: ಘಟನೆ ನಡೆದ 24 ಗಂಟೆಯಲ್ಲಿ ಪೊಲೀಸರು ಎಂಟು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಗಲಭೆಯಾಗುವ ಸಾಧ್ಯತೆ ಮನಗಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಎರಡು ದಿನ ಭೇಟಿ ನೀಡಿ ಗಲಭೆ ನಡೆದ ಸ್ಥಳ ಹಾಗೂ ವಾಡಿ ಪಟ್ಟಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ ಏರ್ಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net