

ಸೊರಬ: ಜಗತ್ತಿನ ಏಳ್ಗೆಗೆ ಧಾರ್ಮಿಕ ಕ್ರಾಂತಿ ಹಾಗೂ ಸಮ ಸಮಾಜ ನಿರ್ಮಾಣದ ಕನಸು ಹೊತ್ತು ಅದನ್ನು ಸಾಸಿದವರು ಬಸವಾದಿ ಶಿವ ಶರಣರು ಎಂದು ಜಡೆ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಗುಂಜನೂರು ಗ್ರಾಮದಲ್ಲಿ ಕದಳಿ ವೇದಿಕೆಯಿಂದ ಆಯೋಜಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಶರಣರ ಆಲೋಚನೆಗಳು ಸದಾಕಾಲ ಸಮಾಜದ ಹಿತಚಿಂತನೆಗಾಗಿ ಇರುವಂಥವು. ಅವರು ಹೇಳಿದ್ದನ್ನೇ ನಡೆದರು, ನಡೆದಿದ್ದನ್ನೇ ನುಡಿದರು. ಅವರ ಬದುಕು ಸದಾಕಾಲಕ್ಕೂ ಆದರ್ಶವಾಗಿಯೇ ಇರುತ್ತಿತ್ತು. ಅಂಥವರ ಚಿಂತನೆ ಸಮಾಜಕ್ಕೆ ಮುಟ್ಟಬೇಕು. ಅವರ ವಚನಗಳು ಇಂದಿನ ಜನಮಾನಸಕ್ಕೆ ದಾರಿದೀಪ ಆಗಬೇಕು. ಇದು ಈ ಶರಣ ಸಾಹಿತ್ಯ ಪರಿಷತ್ ಉದ್ದೇಶವಾಗಿದೆ. ಮೈಸೂರಿನ ಜಗದ್ಗುರು ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಕನಸಿನ ಕೂಸು ಈ ಪರಿಷತ್. ಶರಣ ಚಿಂತನೆಯನ್ನು ಜೀವಂತವಾಗಿಡುವಲ್ಲಿ ಇದು ನಿತ್ಯವೂ ಕೆಲಸ ಮಾಡುತ್ತಿದೆ. ಎಲ್ಲರೂ ಶರಣ ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡಬೇಕು ಎಂದರು.
ಕದಳಿ ವೇದಿಕೆ ಅಧ್ಯಕ್ಷೆ ರೇಣುಕಮ್ಮ ಗೌಳಿ ಮಾತನಾಡಿ, ಶರಣ ಸಾಹಿತ್ಯ ಬಹಳ ಉತ್ತಮವಾದುದು. ಕನ್ನಡ ಭಾಷೆಯನ್ನು ಶ್ರೀಮಂತ ಗೊಳಿಸಿದ ಸಾಹಿತ್ಯ. ಸಮಾಜಕ್ಕೆ ಮಾದರಿಯಾದ ಸಾಹಿತ್ಯ. ಕಾಲಗರ್ಭದಲ್ಲಿ ನಶಿಸಿ ಹೋಗಬಹುದಾಗಿದ್ದ ಸಾಹಿತ್ಯವನ್ನು ಡಾ. .ಗು. ಹಳಕಟ್ಟಿ ಸಂಗ್ರಹಿಸಿ ಅದನ್ನು ಜನಮಾನಸಕ್ಕೆ ನೀಡಿದ್ದಾರೆ. ಕೋಟಿ ಲೆಕ್ಕದಲ್ಲಿದ್ದ ವಚನಗಳು ಇಂದು ಸಾವಿರ ಲೆಕ್ಕದಲ್ಲಿ ಮಾತ್ರ ಸಿಗುತ್ತಿವೆ. ಸಿಕ್ಕವುಗಳನ್ನೇ ನಾವು ಓದಿ ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಕ್ಕನ ಬಳಗದ ಅಧ್ಯಕ್ಷೆ ರೇಖಮ್ಮ, ಮುಖಂಡ ಮಂಜುನಾಥ ಗೌಡ ಇತರರಿದ್ದರು.