

ಶಿವಮೂರ್ತಿ ಕುರಗುಂದ ಇಟಗಿ: ಜೀವನದಲ್ಲಿ ಅಂದುಕೊಂಡದ್ದನ್ನು ಸಾಧಿಸಲು ಮನುಷ್ಯನಿಗೆ ಮುಖ್ಯವಾಗಿ ಬೇಕಿರುವುದು ಛಲ. ಛಲವೊಂದಿದ್ದರೆ ಏನಾದರೂ ಸಾಧಿಸಿ ನಾಲ್ಕು ಜನರಿಗೆ ಸ್ಫೂರ್ತಿಯಾಗಬಹುದು ಎಂಬುದಕ್ಕೆ ಖಾನಾಪುರ ತಾಲೂಕಿನ ತೊಲಗಿ ಗ್ರಾಮದ ಅಂಧ ಕ್ರೀಡಾಪಟು ಸುನೀತಾ ನೀಲಕಂಠ ದೊಂಡಪ್ಪನವರ ಸಾಕ್ಷಿಯಾಗಿದ್ದಾರೆ.
ಬಡರೈತ ನೀಲಕಂಠ ದೊಂಡಪ್ಪನವರ ಐವರು ಮಕ್ಕಳಲ್ಲಿ ಸುನೀತಾಗೆ ಬಾಲ್ಯದಲ್ಲೇ ದೃಷ್ಟಿದೋಷವಿತ್ತು. ಆದರೆ, ದೈಹಿನ ನ್ಯೂನತೆಯ ಹೊರತಾಗಿಯೂ ಸುನೀತಾ ಆಟ-ಪಾಠಗಳಲ್ಲಿ ಚುರುಕಾಗಿದ್ದಳು. ತಂದೆ ಮಲಪ್ರಭಾ ಸಹಕಾರಿ ಸಕ್ಕೆರೆ ಕಾರ್ಖಾನೆಯಲ್ಲಿ ಟ್ರಾೃಕ್ಟರ್ ಚಾಲಕನಾಗಿ ಹಲವು ವರ್ಷ ಸೇವೆ ಸಲ್ಲಿಸುತ್ತಿದ್ದರು. ಆದರೆ, ಬದಲಾದ ಸನ್ನಿವೇಶದಲ್ಲಿ ಉದ್ಯೋಗ ಕಳೆದುಕೊಂಡು ಇದ್ದ ಅಲ್ಪ ಜಮೀನಿನಲ್ಲಿಯೇ ವ್ಯವಸಾಯ ಮಾಡುತ್ತಿದ್ದಾರೆ. ಆದರೆ, ಸುನೀತಾ ಬದುಕಿನ ಓಟಕ್ಕೆ ಬಡತನ ಅಡ್ಡಿಯಾಗಲಿಲ್ಲ.
ಹಲವು ಅಡೆತಡೆಗಳ ಮಧ್ಯೆ ಪಿಯುಸಿ ಶಿಕ್ಷಣ ಪೂರೈಸಿದ ಸುನೀತಾ 2014ರಲ್ಲಿ ಅಂಗವಿಕಲ ಮಕ್ಕಳ ಕೌಶಲ ಅಬಿವೃದ್ಧಿಗಿರುವ ಸಮರ್ಥನಂ ಟ್ರಸ್ಟ್ ನೆರವಿನೊಂದಿಗೆ ಬೆಂಗಳೂರಿನಲ್ಲಿ ಕ್ರೀಡಾಲೋಕಕ್ಕೆ ಪ್ರವೇಶ ಮಾಡಿದರು. 42 ಕಿಲೋಮಿಟರ್ ದೂರವನ್ನು 5 ಗಂಟೆ 39 ನಿಮಿಷಗಳಲ್ಲಿ ಕ್ರಮಿಸುವ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾರೆ. 2018ರಲ್ಲಿ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆದ 3 ದಿನದ ಮ್ಯಾರಥಾನ್ ಓಟದಲ್ಲಿ ದಾಖಲೆ, 2019ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಪ್ಯಾರಾ ಕ್ಲೈಂಬಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಈ ಎಲ್ಲ ಸಾಧನೆಗೆ ತಂದೆ-ತಾಯಿ ಸಹಕಾರ ಮತ್ತು ಮಾರ್ಗದರ್ಶಕ ಸಾಧಿಕ್ ಮಹಮ್ಮದ್ ಮತ್ತು ಹಿರಾಲಾಲ ಸಹಾಯ-ಸಹಕಾರ ಮರೆಯುವಂತಿಲ್ಲ. ಬೆಂಗಳೂರಿನ ಜನರಲ್ ತಿಮ್ಮಯ್ಯ ಅಕಾಡೆಮಿಯ ಐಎಂಎಫ್ ಸಂಸ್ಥೆಯ ಮಾರ್ಗದರ್ಶನವು ನನ್ನ ಸಾಧನೆಗೆ ಕಾರಣ ಎನ್ನುವುದು ಸುನೀತಾ ಅವರ ಮನದಾಳದ ಮಾತು.
ಬಿಎ ಪದವೀಧರೆ ಸುನೀತಾ ಅವರಿಗೆ ಮುಂಬರುವ ದಿನಗಳಲ್ಲಿ ಕೆನಡಾದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶಕ್ಕೆ ಹೆಸರು ತರುವ ಸಾಧನೆ ಮಾಡುವ ಹಂಬಲವಿದೆ. ಅಂಗವಿಕಲರಿಗಾಗಿ ಸಾಹಸ ಕ್ರೀಡೆ ತರಬೇತಿ ಮತ್ತು ಮಾರ್ಗದರ್ಶನ ನೀಡಬೇಕೆಂಬ ಉತ್ಕಟ ಇಚ್ಛೆ ಇದೆ. ಸುನೀತಾ ಅವರ ಪ್ರಯತ್ನಕ್ಕೆ ಸಂಘ-ಸಂಸ್ಥೆಗಳು ಮತ್ತು ಸರ್ಕಾರ ಸಹಾಯಹಸ್ತ ಚಾಚಬೇಕಾದ ಅಗತ್ಯವಿದೆ.