

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ದಲಿತ ಸಮುದಾಯದ ನಾಯಕರಾಗಿ ನೋಡಬಾರದು. ಅವರೊಬ್ಬ ಜಗತ್ತೇ ಮೆಚ್ಚುವಂತಹ ವಿಶ್ವ ನಾಯಕ. ದೇಶದ ಜನರಿಗೆ ಸಮಾನತೆ ತಂದುಕೊಟ್ಟಿದ್ದರಿಂದಾಗಿ ಎಲ್ಲರಿಗೂ ಅವಕಾಶ ದೊರೆತಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಮೈಸೂರು ತಾಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್ ಅವರ 134 ನೇ ಜಯಂತಿ ಹಾಗೂ ಸಂಘದ ನೂತನ ನಾಮಫಲಕವನ್ನು ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮದಲ್ಲಿ ಎಲ್ಲರೂ ಒಂದಾಗಿ ಅಂಬೇಡ್ಕರ್ ಅವರ ಜಯಂತಿ ಸಮಾರಂಭ ಆಯೋಜಿಸಿರುವುದು ಸಂತೋಷ ತಂದಿದೆ. ಯಾರೋ ಕಿಡಿಗೇಡಿಗಳು ನಾಮಫಲಕಕ್ಕೆ ಅಪಚಾರ ಎಸಗಿದ್ದರಿಂದ ಹೊಸದಾಗಿ ನಾಮಫಲಕ ಅನಾವರಣ ಮಾಡಲಾಗಿದೆ.
ಅಂಬೇಡ್ಕರ್ ಅವರನ್ನು ಎಷ್ಟು ನೆನೆದರೂ ಸಾಲದು. ಅಂಬೇಡ್ಕರ್ ಅಪ್ರತಿಮ ನಾಯಕ, ಜಾತ್ಯತೀತವಾದಿ. ಅಕ್ಷರವಂತರು, ವ್ಯಾಪಾರಿಗಳಿಗೆ ಮಾತ್ರ ಮತದಾನದ ಹಕ್ಕು ಇತ್ತು.
ಆದರೆ, ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡಲು ಕಾರಣಕರ್ತರಾದರು. ಇದರಿಂದಾಗಿ ಗ್ರಾಪಂ ಸದಸ್ಯನಿಂದ ಪ್ರಧಾನಮಂತ್ರಿಗೂ ಒಂದೇ ಮತದ ಹಕ್ಕು ಹೊಂದುವಂತಾಗಿದೆ. ಪವಿತ್ರ ಮತದಾನದ ಹಕ್ಕನ್ನು ನೀಡಿದ್ದರಿಂದ ಎಲ್ಲರೂ ಮತ ಚಲಾಯಿಸುತ್ತಿದ್ದಾರೆ ಎಂದು ತಿಳಿಸಿದರು.
ಸಂವಿಧಾನ ವಿರೋಧ ಮಾಡುತ್ತಿದ್ದವರೇ ಇಂದು ಸಂವಿಧಾನ ಪಾಲಿಸುವ ಕಾಲ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ಗೆ ಸಂವಿಧಾನಕ್ಕೆ ನಮಸ್ಕರಿಸಿ ಪದಾರ್ಪಣೆ ಮಾಡಿದಲ್ಲದೆ, ಅವರ ಜಯಂತಿ ಪ್ರಯುಕ್ತ ಸರ್ಕಾರಿ ರಜಾ ದಿನವನ್ನಾಗಿ ಘೋಷಣೆ ಮಾಡಿದರು.
ಯಾರೊಂದಿಗೂ ದ್ವೇಷಕ್ಕೆ ಹೋಗದೆ ಸಂವಿಧಾನದ ಮೂಲಕ ಸಮಾನತೆಗೆ ಕಾರಣಕರ್ತರಾದರು. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಅವಕಾಶ ಕೊಟ್ಟರು ಎಂದು ನುಡಿದರು.
ಅಂಬೇಡ್ಕರ್ ದಲಿತರಿಗೆ ಸೀಮಿತರಲ್ಲ. ಜಗತ್ತಿನ ನಾಯಕರಾಗಿದ್ದಾರೆ. ಸಂವಿಧಾನ ಕೊಟ್ಟಿದ್ದರಿಂದ ಇಂದು ಸಮಾನತೆ, ರಾಜಕೀಯ ಅವಕಾಶ ದೊರೆಯಿತು. ಇಲ್ಲದಿದ್ದರೆ ಅನೇಕರು ರಾಜಕೀಯ ಸ್ಥಾನಮಾನದಿಂದ ವಂಚಿತರಾಗಬೇಕಿತ್ತು ಎಂದು ಹೇಳಿದರು.
ಜಾತ್ಯತೀತ, ಧರ್ಮ, ಜಾತಿ ಎಲ್ಲವನ್ನೂ ಹೊರತುಪಡಿಸಿ ಇಡೀ ದೇಶದ ಜನರು ಒಂದಾಗಿ ಪಾಕಿಸ್ತಾನದ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಸಿಂಧೂರ ಆಪರೇಷನ್ ಯಶಸ್ವಿಯಾಗಿ ನಡೆಯಲು ಪ್ರಾರ್ಥನೆ ಮಾಡಬೇಕು ಎಂದು ಸಲಹೆ ನೀಡಿದರು.
ಅಂಬೇಡ್ಕರ್ ಭವನ ಮಂಜೂರು ಮಾಡಿಸಿದ್ದು, ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಲಾಗುವುದು. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆಯಾಗದೆ ಸಮಸ್ಯೆಯಾಗಿದೆ. ಶೀಘ್ರದಲ್ಲೇ ಸರ್ಕಾರ ಅನುದಾನ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.
ಟಿವಿಎಸ್ ಕಾರ್ಖಾನೆ ತೆರೆಯಲು ಭೂಮಿ ನೀಡಿದ ಭೂಮಾಲೀಕರ ಕುಟುಂಬದವರಿಗೆ ಉದ್ಯೋಗ ನೀಡದೆ ಇರುವ ಬಗ್ಗೆ ಶೀಘ್ರ ಸಮಾಲೋಚನೆ ನಡೆಸಲಾಗುವುದು ಎಂದರು.
ಜಿಪಂ ಮಾಜಿ ಸದಸ್ಯೆ ರೂಪಾ ಲೋಕೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವ ರುದ್ರಮ್ಮ, ಮಾಜಿ ಅಧ್ಯಕ್ಷ ಕೃಷ್ಣಯ್ಯ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಚಂದ್ರಕುಮಾರ್, ಮುಖಂಡರಾದ ಮಹದೇವಯ್ಯ, ಉಮಾಪತಿ, ಮಹೇಶ್, ನಾಡಗೌಡ ಇನ್ನಿತರರಿದ್ದರು.