ಜಗತ್ತು ಭಾರತದತ್ತ ನೋಡಲು ಸಂಕಲ್ಪ

Vikasitha
Published on

ಚಿತ್ರದುರ್ಗ: ರಾಷ್ಟ್ರದ 2047ರ ಶತಮಾನೋತ್ಸವ ಸ್ವಾತಂತ್ರೃ ಸಂಭ್ರಮಾಚರಣೆ ವೇಳೆಗೆ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಅಭಿವೃದ್ಧಿ ಸಾಧಿಸುವುದು ಕೇಂದ್ರ ಸರ್ಕಾರದ ಸಂಕಲ್ಪವಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಚಿತ್ರದುರ್ಗ ಲೀಡ್ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ತಿಪ್ಪೇಶ್ ಮನವಿ ಮಾಡಿದರು.

ಲೀಡ್ ಬ್ಯಾಂಕ್, ಇನ್ನಿತರೆ ಬ್ಯಾಂಕ್‌ಗಳಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಗುರುವಾರ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆ ಈವರೆಗೆ ಜಿಲ್ಲೆಯ ಶೇ 90ರಷ್ಟು ಪಂಚಾಯಿತಿಗಳಲ್ಲಿ ಯಶಸ್ವಿಯಾಗಿ ನಡೆದಿದೆ. ಕೇಂದ್ರ ಸರ್ಕಾರದ ಹಲವು ಜನಪ್ರಿಯ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಉದ್ದೇಶದಿಂದ ನಡೆದ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.

ಜಿಲ್ಲೆಯ 189 ಗ್ರಾಪಂಗಳ ಪೈಕಿ ಈವರೆಗೆ 148 ಗ್ರಾಪಂಗಳಲ್ಲಿ ಯಾತ್ರೆ ಪೂರ್ಣಗೊಂಡಿದ್ದು, ಜ. 25ರೊಳಗೆ ಇನ್ನುಳಿದ ಪಂಚಾಯಿತಿಗಳಲ್ಲೂ ನಡೆಯಲಿದೆ. 17ರವರೆಗೆ ನಗರ, ಪಟ್ಟಣಗಳಲ್ಲಿ ಯಾತ್ರೆ ಜರುಗಲಿದೆ ಎಂದರು.

ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳಾದ ಸ್ವಚ್ಛ ಭಾರತ್ ಮಿಷನ್, ಗರೀಬ್ ಕಲ್ಯಾಣ, ಪ್ರಧಾನಮಂತ್ರಿ ಆವಾಸ್, ಆಯುಷ್ಮಾನ್ ಭಾರತ್ ಆರೋಗ್ಯ ಸೇರಿ ಎಲ್ಲ ಯೋಜನೆಗಳ ಕುರಿತು ಈ ಯಾತ್ರೆಯ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಚಿತ್ರದುರ್ಗ ಕೆನರಾ ಬ್ಯಾಂಕಿನ ಆರ್ಥಿಕ ಸಾಕ್ಷರತಾ ಕೇಂದ್ರದ ಮುಖ್ಯಸ್ಥ ತಿಪ್ಪೇಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ದೇಶದ ಪ್ರತಿಯೊಬ್ಬರೂ ಸ್ವಾವಲಂಬಿಗಳಾಗಿ ಬದುಕಬೇಕು. ಈ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬೇಕು ಎಂದು ಕೋರಿದರು.

ಇದೇ ವೇಳೆ ಪ್ರತಿಜ್ಞಾವಿಧಿ ಬೋಧನೆ, ಯೋಜನೆಗಳ ಮಾಹಿತಿ ಒಳಗೊಂಡ ಕಿರುಚಿತ್ರ ಪ್ರದರ್ಶಿಸಲಾಯಿತು. ಮುಖಂಡ ಮೀಸೆ ಮಹಲಿಂಗಪ್ಪ, ಜಿಪಂ ನಿವೃತ್ತ ಅಧೀಕ್ಷಕ ಡಿ.ಆರ್.ಲೋಕೇಶ್ವರಪ್ಪ, ರುಡ್‌ಸೆಟ್ ಕೇಂದ್ರ ನಿರ್ದೇಶಕಿ ಎಚ್.ಆರ್.ರಾಧಮ್ಮ, ಎಸ್‌ಬಿಐ ಶಾಖಾ ವ್ಯವಸ್ಥಾಪಕರಾದ ಚೇತನ್‌ಕುಮಾರ್, ಶಶಿಧರ್, ಸಹಾಯಕ ವ್ಯವಸ್ಥಾಪಕ ವಿಷ್ಣುಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net