ಜಗತ್ತು ಕಂಡ ಶ್ರೇಷ್ಠ ಆಡಳಿತಗಾರ ನಾಡಪ್ರಭು ಕೆಂಪೇಗೌಡ; ಸಂಸದ ಶ್ರೇಯಸ್ ಪಟೇಲ್ ಹೇಳಿಕೆ

27_HSN_06
Published on

ಹಾಸನ: ಗ್ರೇಟರ್ ಬೆಂಗಳೂರು ಬ್ರಾಂಡ್ ಬೆಂಗಳೂರು ನಿರ್ಮಾಣಕ್ಕೆ ಕಾರಣಕರ್ತರು ಕೆಂಪೇಗೌಡರಾಗಿದ್ದಾರೆ. ಅವರನ್ನು ನಾವೆಲ್ಲರೂ ಸ್ಮರಿಸುವುದರ ಜತೆಗೆ ಅವರು ಹಾಕಿ ಕೊಟ್ಟಿರುವ ಮಾರ್ಗದರ್ಶನಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿ ಹೇಳುವ ಕೆಲಸವನ್ನು ಮಾಡೋಣ ಎಂದು ಸಂಸದ ಶ್ರೇಯಸ್ ಪಟೇಲ್ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ನಾಡಪ್ರಭು ಶ್ರೀ ಕೆಂಪೆಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ಎಂದರೆ ಅದು ಕೆಂಪೇಗೌಡರಾಗಿದ್ದಾರೆ. ಇಡೀ ಪ್ರಪಂಚವೇ ಬೆಂಗಳೂರಿನ ಕಡೆ ತಿರುಗಿ ನೋಡುವಂತಹ ಕೆಲಸವನ್ನು ಕೆಂಪೇಗೌಡ ಅವರು ಮಾಡಿದ್ದಾರೆ. ಮಹಿಳೆಯರ ಸಬಲೀಕರಣ, ಅತ್ಯಾಧುನಿಕ ನಗರ ನಿರ್ಮಾಣ, ಕೆರೆ-ಕಟ್ಟೆಗಳ ಸಂರಕ್ಷಣೆ ಮಾಡಿದ್ದಾರೆ. ಅವರ ಮುಂದಾಲೋಚನೆಯಲ್ಲಿ ಇಂದು ನಾವು ಬೆಂಗಳೂರು ನಗರವನ್ನು ಅನುಭವಿಸುತ್ತಿದ್ದೇವೆ. ಆ ಎಲ್ಲ ವಿಷಯಗಳು ನಮಗೆ ಹೆಮ್ಮೆ ತರುತ್ತವೆ ಎಂದರು.

ಇಂದು ಕೆಂಪೇಗೌಡ ಅವರು ಕೇವಲ ಒಂದು ಜಾತಿ, ಜನಾಂಗಕ್ಕೆ ಸೀಮಿತವಾಗದೆ. ಇಡೀ ದೇಶ ಇಡೀ ಪ್ರಪಂಚ ಕಂಡಂತಹ ಮಹಾನ್ ವ್ಯಕ್ತಿ ಆಗಿದ್ದಾರೆ. ದೀನ ದಲಿತರು, ಬಡವರು, ಹಿಂದುಳಿದ ವರ್ಗದವರು ಎಲ್ಲರೂ ಬೆಂಗಳೂರಿನಲ್ಲಿಂದು ಜೀವನ ಮಾಡುತ್ತಿದ್ದಾರೆ ಎಂದರೆ ಅದು ಅವರು ಹಾಕಿ ಕೊಟ್ಟಿರುವ ದಾರಿ ಮತ್ತು ಮಾರ್ಗದರ್ಶನದಿಂದ ಆಗಿದೆ. ಹಾಸನದಲ್ಲಿ ಶಾಸಕರು, ನಾವು ಸೇರಿ ನಿರ್ಮಲಾನಂದನಾಥ ಸ್ವಾಮೀಜಿ, ಶಂಭುನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ಮುಂದಿನ ಬಾರಿಗೆ ಕೆಂಪೇಗೌಡ ಅವರ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಪ್ರತಿಯೊಂದು ಜಯಂತಿಗಳ ಆಚರಣೆ ಮಾಡುವುದರ ಉದ್ದೇಶ ಆ ವ್ಯಕ್ತಿಗಳು ಮಾಡಿದಂತಹ ಕೆಲಸ, ಸಾಧನೆಗಳ ಸ್ಮರಿಸುವುದಾಗಿದೆ. ಕೆಂಪೇಗೌಡ ಅವರು ಪ್ರತಿಯೊಂದು ಜನಾಂಗಕ್ಕೆ ಆರ್ಥಿಕವಾಗಿ ವ್ಯವಹಾರಿಕವಾಗಿ ಕೃಷಿಗೆ ಸಂಬಂಧಪಟ್ಟಂತೆ ಅನೇಕ ರೀತಿಯ ಕೆಲಸಗಳನ್ನು ಮಾಡಿದ್ದಾರೆ. ಬೆಂಗಳೂರನ್ನು ವಿಶಾಲ ಮಟ್ಟದಲ್ಲಿ ಅಭಿವೃದ್ಧಿಪಡಿಸಿದವರು. ಕೆಂಪೇಗೌಡ ಅವರು ನಿರ್ಮಿಸಿರುವ ದೇವಾಲಯಗಳು, ಕೆರೆ-ಕಟ್ಟೆಗಳನ್ನು ಉಳಿಸಿಕೊಂಡು ಹೋಗುವಂತಹ ಜವಾಬ್ದಾರಿ ನಮ್ಮದಾಗಿದೆ. ನಾವು ಕೂಡ ಅವರ ಮಾರ್ಗದರ್ಶನದಲ್ಲಿ ನಡೆಯೋಣ ಎಂದು ಕರೆ ನೀಡಿದರು.

ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಸುಮಾರು 500 ವರ್ಷಗಳು ಕಳೆದಿದ್ದರೂ ಈಗಲೂ ಕೆಂಪೇಗೌಡ ಅವರನ್ನು ನಾಡಪ್ರಭು ಎಂದು ಕರೆಯುತ್ತೇವೆ ಎಂದರೆ ಅದು ಅವರ ದೂರದೃಷ್ಟಿ, ನುರಿತ ಆಡಳಿತ, ಪ್ರಜೆಗಳ ಬಗ್ಗೆ ಇದ್ದ ಕಾಳಜಿಯಿಂದಾಗಿದೆ. ಪ್ರಜೆಗಳು ಅವರನ್ನು ಪ್ರಭು, ದೊರೆ, ದೇವರು ಎನ್ನುವ ರೀತಿಯಲ್ಲಿ ನೋಡುತ್ತಿದ್ದರು. ಹಾಗೆಯೇ ನಾಡಪ್ರಭು ಕೆಂಪೇಗೌಡ ಅವರು ಪ್ರಜೆಗಳನ್ನೇ ದೇವರ ರೀತಿಯಲ್ಲಿ ನೋಡಿದವರಾಗಿದ್ದಾರೆ. ಅನೇಕ ಗ್ರಾಮಗಳಲ್ಲಿ ಅವರು ನಿರ್ಮಿಸಿರುವಂತಹ ಕೆರೆ-ಕಟ್ಟೆ, ಕೊಳ ಎಲ್ಲವನ್ನು ಪ್ರಜೆಗಳಿಗೆ ಕಟ್ಟಿಸಿದ್ದರು. ಬೆಂಗಳೂರಿನಂತಹ ಸಾಮ್ರಾಜ್ಯವನ್ನು ದೂರ ದೃಷ್ಟಿಯಿಂದ ನಿರ್ಮಾಣ ಮಾಡಿ ಆಡಳಿತ ಮಾಡಿದರು. ಶತಮಾನಗಳು ಕಳೆದರೂ ಆ ನಗರ ಉನ್ನತೀಕರಣವಾಗಬೇಕೆಂಬ ಕನಸನ್ನು ಕಂಡಂತಹ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್ ಪೂರ್ಣಿಮಾ ಅವರು ಮಾತನಾಡಿ, ಕೆಂಪೇಗೌಡ ಅವರು ಸುಮಾರು 79 ವರ್ಷಗಳ ಸುದೀರ್ಘ ಆಡಳಿತವನ್ನು ಮಾಡಿದವರಾಗಿದ್ದಾರೆ. ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದಾಗಲೇ ಹಂಪಿಯ ವೈಭವವನ್ನು ನೋಡಿ ನಾನು ಇದೇ ರೀತಿಯ ಸಾಮ್ರಾಜ್ಯವನ್ನು ಕಟ್ಟಬೇಕು ಎಂದು ಕನಸು ಕಂಡು ಅದನ್ನು ನನಸು ಮಾಡಿ ಬೃಹತ್ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದ್ದಾರೆ. ಇಂದು ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಪರಿವರ್ತನೆಗೊಂಡಿದೆ. ಇಂದಿನ ಬೆಳವಣಿಗೆಯನ್ನು ನಿಯಂತ್ರಿಸಲು ಸಾಧ್ಯವಾಗದೆ ಇರುವ ರೀತಿಯಲ್ಲಿ ಬೆಂಗಳೂರು ಬೆಳೆಯುತ್ತಿದೆ. ಆ ನಗರವನ್ನು ಮತ್ತಷ್ಟು ಸುವ್ಯವಸ್ಥಿತವಾಗಿ ಬೆಳೆಸುವಂತಹ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಮಹಾ ಪೌರರಾದ ಚಂದ್ರೇಗೌಡ ಅವರು ಮಾತನಾಡಿ, ನಾಡಪ್ರಭು ಕೆಂಪೇಗೌಡರು, ವ್ಯಾಪಾರ, ವ್ಯವಹಾರ, ಕಟ್ಟಡಗಳ ನಿರ್ಮಾಣದ ಬಗ್ಗೆ ಅಪಾರವಾದ ಜ್ಞಾನವನ್ನು ಹೊಂದಿದವರಾಗಿದ್ದರು. ಸರ್ವ ಜನಾಂಗದ ಶಾಂತಿಯ ತೋಟವಾಗಿ ಬೆಂಗಳೂರು ನಗರವನ್ನು ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕೆರೆ-ಕಟ್ಟೆಯ ನೀರು ಒಂದೆಡೆ ಸೇರಲು ಅಚ್ಚುಕಟ್ಟಾಗಿ ವ್ಯವಸ್ಥೆಯನ್ನು ಮಾಡಿದವರಾಗಿದ್ದಾರೆ. ಇವರು ನಡೆಸಿದ ಆಡಳಿತವನ್ನು ಅನುಸರಿಸಿ ಎಲ್ಲ ರಾಜಕಾರಣಿಗಳು, ಅಧಿಕಾರಿಗಳು ಕೆಲಸ ಮಾಡಬೇಕು ಎಂದು ತಿಳಿಸಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಶಂಭುನಾಥ ಸ್ವಾಮೀಜಿ ಮಾತನಾಡಿ, ಅರಮನೆ, ಗುರುಮನೆ ಎಲ್ಲಿ ಹೇಗೆ ಸೇವೆ ಮಾಡಬೇಕು ಎಂಬುದನ್ನು ಕಲಿಸಿಕೊಟ್ಟವರು ಕೆಂಪೇಗೌಡರಾಗಿದ್ದಾರೆ. ತಂದೆ-ತಾಯಿ ಸಂಸ್ಕಾರವನ್ನು ಹೇಳಿಕೊಟ್ಟರೆ ಮಕ್ಕಳು ಯಾವ ರೀತಿಯಲ್ಲಿ ಸಾಧನೆಯನ್ನು ಮಾಡಬಹುದು ಎಂಬುದಕ್ಕೆ ಕೆಂಪೇಗೌಡ ಅವರು ಉದಾಹರಣೆಯಾಗಿದ್ದಾರೆ ಇವರು ಪರರ ಹಿತಕ್ಕಾಗಿ ಸೇವೆ ಮಾಡಿದವರಾಗಿದ್ದಾರೆ. ಬೆಂಗಳೂರು ನಿರ್ಮಾತೃವಾಗಿ ಇಂದು ರಾಷ್ಟ್ರಗಳೇ ತಿರುಗಿ ನೋಡುವ ಹಾಗೆ ಕೆಲಸಗಳನ್ನು ಮಾಡಿದ್ದಾರೆ. ಹಾಗಾಗಿ ಇಂತಹ ಜಯಂತಿಗಳಿಂದ ಉತ್ತಮವಾದ ಆದರ್ಶಗಳನ್ನು ನಮ್ಮ ಜೀವಿತಕ್ಕೆ ಅಳವಡಿಸಿಕೊಳ್ಳಬೇಕು. ಧಾರ್ಮಿಕ ವ್ಯಕ್ತಿಗಳ ಸಾಧನೆಗಳನ್ನು ನೆನೆಯುವಂತಹ ಕೆಲಸವನ್ನು ನಾವುಗಳೆಲ್ಲ ಮಾಡಬೇಕು ಎಂದು ತಿಳಿಸಿದರು.

ಮಂಡ್ಯದ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ.ಮ. ರಾಮಕೃಷ್ಣ ಅವರು ಮಾತನಾಡಿ ಕೆಂಪೇಗೌಡ ಅವರು ಒಕ್ಕಲಿಗ ಕೃಷಿ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ನಾಡಪ್ರಭು ಅವರ ಸೊಸೆಯು ತನ್ನನ್ನೇ ತಾನು ಬಲಿ ಕೊಟ್ಟು ಕೋಟೆ ಕಟ್ಟಲು ಸಹಾಯ ಮಾಡಿದ್ದಾರೆ. ಹಾಗಾಗಿ ಅವರ ಕುಟುಂಬದ ಪಾತ್ರವು ಬಹು ದೊಡ್ಡ ಪಾತ್ರವಾಗಿದೆ. ಇವರು ಅಂದಿನ ಕಾಲದಲ್ಲಿ ಬೆಂಗಳೂರಿನಲ್ಲಿ 54 ಪೇಟೆಗಳನ್ನು ತೆರೆದಿದ್ದರು. ಇವರ ಸಾಮ್ರಾಜ್ಯದಲ್ಲಿ ಕಂಚು, ಚಿನ್ನ, ಬೆಳ್ಳಿ ಹಾಗೂ ಅಕ್ಕಪಕ್ಕದ ರಾಜ್ಯದ ಎಲ್ಲ ರೀತಿಯ ನಾಣ್ಯಗಳು ಚಲಾವಣೆೆಯಲ್ಲಿದ್ದವು. ಇದಷ್ಟೇ ಅಲ್ಲದೆ ಸಾವಿರಾರು ಕೆರೆ-ಕಟ್ಟೆ, ಮರಗಳನ್ನು ಬೆಳೆಸಿದ್ದಾರೆ. ಇವರು ಕೂಲಿಕಾರರಿಗೆ, ಕೃಷಿ ಕಾರ್ಯಕ್ಕೆ, ದುಡಿಯುವ ವರ್ಗದವರಿಗೆ ಪ್ರೀತಿ ಪಾತ್ರರಾಗಿದ್ದರು. ಇಂತಹ ಮಹಾತ್ಮರ ನಾವೆಲ್ಲರೂ ಸ್ಮರಿಸಿಕೊಂಡು ಅವರ ಹಾದಿಯಲ್ಲಿ ನಡೆಯಬೇಕು ಎಂದು ಕೆಂಪೇಗೌಡ ಅವರ ಜೀವನದ ಕುರಿತಾಗಿ ಸವಿವರವಾಗಿ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಜಿಲ್ಲೆಗೆ ಕೀರ್ತಿ ತಂದಿರುವಂತಹ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಪಿ ಕೃಷ್ಣೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ತಾರಾನಾಥ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್‌ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net