ಜಗತ್ತಿನಾದ್ಯಂತ ಹೆಚ್ಚಿನ ಸಾವುಗಳಿಗೆ ಪ್ರಮುಖ ಕಾರಣ ಕ್ಯಾನ್ಸರ್: ಡಾ. ಶಿವಶಂಕರ್

ಜಗತ್ತಿನಾದ್ಯಂತ ಹೆಚ್ಚಿನ ಸಾವುಗಳಿಗೆ ಪ್ರಮುಖ ಕಾರಣ ಕ್ಯಾನ್ಸರ್: ಡಾ. ಶಿವಶಂಕರ್
Published on

ಚನ್ನರಾಯಪಟ್ಟಣ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಎನ್.ಸಿ.ಡಿ ಘಟಕದ ಸಂಯುಕ್ತಾಶ್ರಯದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಛೇರಿ ವತಿಯಿಂದ ವಿಶ್ವಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಜಾಗೃತಿ ಜಾಥಾವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.

ಜಿಲ್ಲಾ ಸರ್ವೇಕ್ಷಣ ಅಧೀಕ್ಷಕ ಡಾ. ಶಿವಶಂಕರ್ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿ, ಕ್ಯಾನ್ಸರ್‌ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದರು.


ಜಗತ್ತಿನಾದ್ಯಂತ ಹೆಚ್ಚಿನ ಸಾವುಗಳಿಗೆ ಪ್ರಮುಖ ಕಾರಣ ಕ್ಯಾನ್ಸರ್ ಎಂಬುದು ಗಮನಿಸಬೇಕಾದ ವಿಷಯಅಷ್ಟಕ್ಕೂ ವೈದ್ಯಕೀಯ ಭಾಷೆಯಲ್ಲಿ ಕ್ಯಾನ್ಸರ್ ಎಂದರೆ ಬೇರೇನೂ ಅಲ್ಲ. ದೇಹದಲ್ಲಿ ಜೀವಕೋಶಗಳ ಅಸಹಜ ಬೆಳವಣಿಗೆ, ಬಳಿಕ ದೇಹದ ಇತರ ಕೋಶಗಳ ಮೇಲೂ ಆಕ್ರಮಣ ಮಾಡಿ ತನ್ನ ತೆಕ್ಕೆಯೊಳಗೆ ತೆಗೆದುಕೊಂಡು ಪರಿಣಾಮ ಬೀರುವ ವ್ಯಾಧಿ. ಹೃದ್ರೋಗದ ಬಳಿಕ ಅತಿ ಹೆಚ್ಚು ಜನರು ಸಾವಿಗೀಡಾಗುವುದು ಕ್ಯಾನ್ಸರ್ ನಿಂದ ಎನ್ನಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ 2247 ಮಂದಿ ಮೂರನೇ ಹಂತದ ಕ್ಯಾನ್ಸರ್‌ನೊಂದಿಗೆ ಜೀವಿಸುತ್ತಿದ್ದಾರೆ ಎಂದು ತಿಳಿಸಿದರು
ಇತ್ತೀಚಿನ ದಿನಗಳಲ್ಲಿತಂಬಾಕು ಕ್ಯಾನ್ಸರ್, ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಬಹಳಷ್ಟು ಪ್ರಮಾಣದಲ್ಲಿ ಕಂಡು ಬರುತ್ತಿದೆ. ಇವುಗಳಿಗೆ ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಿದಲ್ಲಿ ಗುಣವಾಗುವ ಪ್ರಮಾಣ ಅಧಿಕ. ಹೀಗಾಗಿ ಜನಜಾಗೃತಿ ಮುಖ್ಯ ಎಂದು ಎಚ್ಚರಿಸಿದರು.

ಇತ್ತೀಚಿನ ಜೀವನಶೈಲಿಯಿಂದಾಗಿ ಕ್ಯಾನ್ಸರ್ ಹೆಚ್ಚುತ್ತಿದ್ದೆ. ಕ್ಯಾನ್ಸರ್ ಕುರಿತು ಭಯವೇ ಹೆಚ್ಚು ಅರಿವು ಕಡಿಮೆ. ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾದರೆ ಗುಣವಾಗುವ ಪ್ರಮಾಣ ಹೆಚ್ಚು.ಮುಖ್ಯವಾಗಿ ದೇಹದ ಯಾವುದಾದರೂ ಭಾಗದಲ್ಲಿ ಗಂಟು, ನೋವಿಲ್ಲದೇ ರಕ್ತಸ್ರಾವ, ನಿರಂತರ ಕೆಮ್ಮು, ನುಂಗುವಾಗ ಕಷ್ಟವಾಗುವುದು ಇವು ಕ್ಯಾನ್ಸರ್‌ನ ಆರಂಭಿಕ ಹಂತಗಳಾಗಿವೆ. ಹೀಗಾಗಿ ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ತಡಮಾಡದೇ ವೈದ್ಯರನ್ನು ಕಾಣಬೇಕು ಎಂದು ಸಲಹೆ ನೀಡಿದರು.ಕ್ಯಾನ್ಸರ್‌ರೋಗಕ್ಕೆ ಹೆದರಿಕೊಂಡು ವಿಳಂಬ ಮಾಡಬಾರದು. ಹೀಗಾಗಿ ಜನರಲ್ಲಿ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅವಶ್ಯಕತೆಯಿದೆ ಎಂದು ತಿಳಿಸಿದರು.

ಜಾಥಾದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ನಾಗಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ. ಕೆ.ಕೆ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ, ಜಿಲ್ಲಾ ಏನ್ ಸಿ ಡಿ ಸಂಯೋಜಕ ಡಾ.ಮಧುಸೂದನ್, ಡಾ. ನೂತನ್, ಜಿಲ್ಲಾ ತಂಬಾಕು ಸಲಹೆಗಾರರಾದ ಮಮತಾ, ತಾಲೂಕು ಸರ್ಕಾರಿ ಆಸ್ಪತ್ರೆಯ ಕಚೇರಿ ಅಧೀಕ್ಷಕ ಭುವನೇಶ್, ತಾಲೂಕು ಆರೋಗ್ಯ ನಿರೀಕ್ಷಕ ಶಿವಲಿಂಗಯ್ಯ, ಜಿಲ್ಲಾ ಆರೋಗ್ಯ ನಿರೀಕ್ಷಕ ನಿಂಗೇಗೌಡ, ತಾಲೂಕು ಶೂಶ್ರಕರ ನಿರೀಕ್ಷಕಿ ವಿಶಾಲಾಕ್ಷಿ, ಹಾಗೂ ನಾಗೇಶ್ ಮತ್ತು ವೈದ್ಯ ಸ್ಕೂಲ್ ಆಫ್ ನಸಿರ್ಂಗ್ ನ ವಿದ್ಯಾರ್ಥಿಗಳು ನವೋದಯ ಶಾಲೆಯ ದೈಹಿಕ ಶಿಕ್ಷಕ ವೆಂಕಟೇಶಲು ಮತ್ತು ನವೋದಯ ಬ್ಯಾಂಡ್ ಸೆಟ್ ತಂಡ ಜೊತೆಗೂಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾತ ನಡೆಸಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net