

ವಿಜಯಪುರ: ಗ್ರಾಮೀಣ ಜನರು ಜನಪದ ಸಾಹಿತ್ಯ ಮಾಲೀಕರಾಗಿದ್ದಾರೆ. ಜನಪದ ಸಾಹಿತ್ಯ ಉಳಿಸಿ ಬೆಳೆಸಿದ ಕೀರ್ತಿ ಗ್ರಾಮೀಣರಿಗೆ ಸಲ್ಲುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಗುರುವಾರ ಹೆಗಡಿಹಾಳ ಗ್ರಾಮದ ಗುಡ್ಡದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜಾನಪದ ಸಾಹಿತ್ಯ ನಮ್ಮ ಉಸಿರು ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನ ಸಾಹಿತ್ಯದ ಮೂಲವನ್ನು ಜನಪದ ಸಾಹಿತ್ಯದಲ್ಲಿ ಕಾಣಬಹುದು. ಜನಪದರ ಸಾಹಿತ್ಯ, ಸಂಗೀತ, ನೃತ್ಯ, ಆಟ, ಈ ಎಲ್ಲವನ್ನು ಒಳಗೊಂಡಿದ್ದು ಜಾನಪದವೆಂದು ಹೇಳುತ್ತೇವೆ. ಜನಪದ ಸಾಹಿತ್ಯ ಆಕಾಶದಷ್ಟು ವಿಶಾಲ. ಸಾಗರದಷ್ಟು ಆಳ ಇದರಲ್ಲಿ ಹಲವು ಪ್ರಕಾರ. ಗಾದೆ. ಒಗಟು .ಒಡಪು. ಕಥೆ ಗೀತೆ. ಸಂಗೀತ ಮುಂತಾದವುಗಳು ಜನಪದ ಸಾಹಿತ್ಯದಲ್ಲಿ ಕಾಣುತ್ತೇವೆ ಎಂದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಡಾ. ಮೈತ್ರಿಯಿಣಿ ಗದಿಗೆಪ್ಪಗೌಡರ ಉಪನ್ಯಾಸ ನೀಡಿ, ಜನಪದ ಸಾಹಿತ್ಯ ಸಂಸ್ಕೃತಿ ಭಾರತೀಯ ಜೀವನದ ಮೌಲ್ಯಗಳಾಗಿದೆ. ಗ್ರಾಮೀಣ ಮಹಿಳೆ ನಿತ್ಯ ಜೀವನದಲ್ಲಿ ಜನಪದ ಗೀತೆಗಳನ್ನು ಹಾಡುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುತ್ತಾರೆ. ಜಾನಪದವು ಜನರ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಜನಪದರು ಜನಾಂಗದ ಜೀವನಾಡಿಯಾಗಿ ಮಾನವೀಯತೆಯ ಹಾಗೆ ನೀತಿಯ ಸೂತ್ರವಾಗಿ ಬದುಕನ್ನು ಕಟ್ಟಿಕೊಳ್ಳುವ ಮೌಲ್ಯ ತಿಳಿಸುವ ಜಾನಪದ ಸಾಹಿತ್ಯ ನಮ್ಮ ಉಸಿರು ಎಂದರು.
ಸಾನ್ನಿಧ್ಯ ವಹಿಸಿದ್ದ ಬುರಣಾಪುರ ಆರೂಢ ಪರಂಪರೆಯ ಮಠದ ಯೋಗೇಶ್ವರಿ ಮಾತಾಶಿವಶರಣ ಗಂಗಶೆಟ್ಟಿ, ಅಶೋಕ ಬಿರಾದಾರ, ಕಾಶಿರಾಯಗೌಡ ಬಿರಾದಾರ, ಸಾವಿತ್ರಿ ಬಿರಾದಾರ, ಹೊನ್ನೇಶ ಮುರಗೋಡ, ಸಿದ್ದನಗೌಡ ಬಿರಾದಾರ, ಅಮಗೊಂಡ ಅರಕೇರಿ, ಬಾಪುಗೌಡ ಬಿರಾದಾರ, ಸಂಗಯ್ಯ ಸಂಗಮ, ರೇವಣಸಿದ್ದಯ್ಯ ವಸ್ತ್ರದ, ನಿಂಗಪ್ಪ ಸತಾರೆ, ದಾನಮ್ಮ ಸಂಗಮ, ಮಹಾದೇವಿ ಮಠ, ಬಸಲಿಂಗಪ್ಪ ಬಿರಾದಾರ ಸೇರಿ ಹಲವರು ಉಪಸ್ಥಿತರಿದ್ದರು.