ಜಗತ್ತಿನ ಮಧುಮೇಹದ ರಾಜಧಾನಿಯಾಗುತ್ತಿದೆ ಭಾರತ

mysore
Published on

ಮೈಸೂರು: ಮನುಷ್ಯನನ್ನು ಹೆಚ್ಚು ಬಾಧಿಸುವ ಕಾಯಿಲೆಗಳಲ್ಲಿ ಒಂದಾಗಿರುವ ಮಧುಮೇಹ ಕುರಿತು ನಿರ್ಲಕ್ಷ್ಯ ಮಾಡದೆ ವೈದ್ಯರ ಸಲಹೆ ಪಡೆದುಕೊಂಡು ನಿಯಂತ್ರಣ ಮಾಡುವುದು ಅಗತ್ಯ ಎಂದು ಜೆಎಸ್‌ಎಸ್ ಆಸ್ಪತ್ರೆಯ ಅಧೀಕ್ಷಕ ಡಾ. ಎಸ್.ಪಿ.ಮಧು ಹೇಳಿದರು.

ಕರ್ನಾಟಕ ರಿಸರ್ಚ್ ಸೊಸೈಟಿ ಫಾರ್ ದಿ ಸ್ಟಡಿ ಆಫ್ ಡಯಾಬಿಟಿಸ್ ಇನ್ ಇಂಡಿಯಾ (ಕೆಆರ್‌ಎಸ್‌ಎಸ್‌ಡಿಐ) ವತಿಯಿಂದ ಬನ್ನಿಮಂಟಪದ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ 20ನೇ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದರು.

ಕೆಲವರು ತಮಗೆ ಸಕ್ಕರೆ ಕಾಯಿಲೆ ಬಂದಿದೆ ಎನ್ನುವುದನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಮೊದಲು ಈ ಧೋರಣೆ ಹೋಗಬೇಕು. ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ಪಡೆದುಕೊಳ್ಳಬೇಕು. ಭಾರತ ಜಗತ್ತಿನ ಮಧುಮೇಹ ರೋಗದ ರಾಜಧಾನಿಯಾಗುತ್ತಿದೆ.

ಭಾರತದಲ್ಲಿ ಸುಮಾರು 101 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಮತ್ತು ಇನ್ನೂ 136 ಮಿಲಿಯನ್ ಜನರು ಮಧುಮೇಹ ಪೂರ್ವ ಹಂತಗಳಲ್ಲಿದ್ದಾರೆ ಎಂದು ಅನೇಕ ಅಧ್ಯಯನಗಳು ಹೇಳಿವೆ.

ಈ ಹಿನ್ನೆಲೆಯಲ್ಲಿ ಈ ರೋಗವನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ವಹಿಸಬೇಕು ಹಾಗೂ ಆಹಾರ ಪದ್ಧ್ದತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಜೀವನಶೈಲಿಯಲ್ಲಿ ವ್ಯಾಯಾಮ, ನಡಿಗೆ ಸೇರಿದಂತೆ ಇನ್ನಿತರ ದೈಹಿಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಇತ್ತೀಚೆಗೆ ಜನರು ಈ ಕಾಯಿಲೆಗೆ ತಾವೇ ಚಿಕಿತ್ಸೆಯನ್ನು ಮಾಡಿಕೊಳ್ಳುವುದಕ್ಕೆ ತೊಡಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಮಾಹಿತಿ ನಂಬಿ ಅಲ್ಲಿ ತೋರಿಸುವ ಔಷಧ ಬಳಸುತ್ತಾರೆ. ಇದು ಬಹಳ ಅಪಾಯಕಾರಿ. ವೈದ್ಯರ ಸಲಹೆ ಪಡೆದು ಔಷಧ ಪಡೆದುಕೊಳ್ಳಬೇಕು ಎಂದರು.

ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಸವಣ್ಣ, ಆಡಳಿತಾಧಿಕಾರಿ ಶರತ್‌ಚಂದ್ರ, ಸಂಘಟನೆಯ ಡಾ.ವೈ.ಎಸ್.ರವಿಕುಮಾರ್, ಡಾ.ಬಸವರಾಜು ಎಂ.ಪಾಟೀಲ್, ಡಾ ಕೆ.ಎಂ.ಶ್ರೀಕಾಂತ್, ಡಾ.ಕೆ.ವಿಜಯ್‌ಕುಮಾರ್, ಡಾ.ಕೆ.ಸಿ.ಶಶಿಧರ, ಡಾ.ವೈ.ಶೇಖರ್‌ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net